ಪ್ರಧಾನಿ ಮೋದಿಯವರನ್ನು ಅಪ್ಪಿ ಜೊತೆಗಿದ್ದೇನೆಂದ ಚಿರಾಗ್ ಪಾಸ್ವಾನ್ – ಯಾರೀತ ಟ್ರೆಂಡಿಂಗ್ ಯುವ ರಾಜಕಾರಣಿ?

ಮೊನ್ನೆಯಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪಷ್ಟ ಬಹುಮತ ಪಡೆಯದ ಬಿಜೆಪಿಗೆ ತಮ್ಮ ಬೆಂಬಲವನ್ನು ನಿತೀಶ್ ಕುಮಾರ್ ಅವರ ಜೆ.ಡಿ.ಯು ಹಾಗೂ ಚಂದ್ರಬಾಬು ನಾಯ್ಡುರವರ ಟಿ.ಡಿ.ಪಿ ತಮ್ಮ ಸಂಪೂರ್ಣ ಬೆಂಬಲ‌ ಘೋಷಿಸಿರುವುದು ಗೊತ್ತೇ ಇದೆ. ಈ ನಡುವೆ ಒಬ್ಬ ಯುವ ರಾಜಕಾರಣಿ, ಪ್ರಧಾನಿ‌‌ ಮೋದಿಯವರಿಗೆ ತನ್ನ ಪಕ್ಷದ ಸಂಪೂರ್ಣ ಬೆಂಬಲ‌ ಅಷ್ಟೇ ಅಲ್ಲದೇ, ಅವರ ಯಾವ ನಿರ್ಧಾರಕ್ಕೂ ತನ್ನ ಸಹಮತವಿದೆ ಎನ್ನುವ ಮೂಲಕ ದೇಶಾದ್ಯಂತ ಟ್ರೆಂಡ್ ಆಗಿದ್ದಾರೆ.‌ ಅಷ್ಟಕ್ಕೂ ಆ ಯುವ ರಾಜಕಾರಣಿ ಯಾರು? ಅವರ ಪಕ್ಷದ ಹಿನ್ನೆಲೆ ಏನು? ಹೇಳ್ತೀವಿ ನೋಡಿ.

ದೇಶ ಕಂಡ ಅದ್ಭುತ ರಾಜಕಾರಣಿಗಳಲ್ಲಿ ಒಬ್ಬರು ರಾಮ್‌ ವಿಲಾಸ್ ಪಾಸ್ವಾನ್. ಬಿಹಾರದಿಂದ ಆಯ್ಕೆಯಾಗಿ ಮೋದಿಯವರ ಸಂಪುಟದಲ್ಲಿ ಎರಡು ಬಾರಿ ಸಚಿವರಾದ ರಾಮ್ ವಿಲಾಸ್ ಪಾಸ್ವಾನ್, ಲೋಕ ಜನಶಕ್ತಿ ಪಾರ್ಟಿ (ಎಲ್.ಜೆ.ಪಿ) ಯ ಸಂಸ್ಥಾಪಕರು. ಸಂಯುಕ್ತ ಸಮಾಜವಾದಿ ಪಾರ್ಟಿಯ ಸದಸ್ಯರಾಗಿ 1969 ರಲ್ಲಿ ಬಿಹಾರ್ ವಿಧಾನಸಭೆಗೆ ಚುನಾಯಿತರಾದ ರಾಮ್ ವಿಲಾಸ್ ಪಾಸ್ವಾನ್, 1974 ರಲ್ಲಿ ಲೋಕ ದಳವನ್ನು ಸೇರಿಕೊಂಡರು. ನಂತರ 1977 ರಲ್ಲಿ ಜನತಾ ಪಾರ್ಟಿಯ ಸದಸ್ಯರಾಗಿ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ ನಂತರ, ನಿರಂತರ 1980 ರಿಂದ 2014 ರವರೆಗೆ ಎಂಟು ಬಾರಿ‌ ಲೋಕಸಭಾ ಸಂಸದರಾಗಿ ಗೆದ್ದು ಬಂದು ರಾಷ್ಟ್ರ ರಾಜಕಾರಣದಲ್ಲಿ ಇತಿಹಾಸ ನಿರ್ಮಿಸಿದವರು ರಾಮ್ ವಿಲಾಸ್ ಪಾಸ್ವಾನ್. ಒಟ್ಟು ಒಂಬತ್ತು ಬಾರಿ ಲೋಕಸಭೆ ಹಾಗೂ ಎರಡು ಬಾರಿ ರಾಜ್ಯಸಭೆ ಸದಸ್ಯರಾಗಿ ಜನಸೇವೆ ಮಾಡಿದ ಪಾಸ್ವಾನ್, ತಮ್ಮದೇ ಪಕ್ಷವಾದ ಲೋಕ ಜನಶಕ್ತಿ ಪಾರ್ಟಿಯ ಅಧ್ಯಕ್ಷರೂ ಕೂಡ ಆಗಿದ್ದರು. 8 ಅಕ್ಟೋಬರ್ 2020 ರಂದು ತನ್ನ 74 ನೇ ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದಿದ ಪದ್ಮವಿಭೂಷಣ ರಾಮ್ ವಿಲಾಸ್ ಪಾಸ್ವಾನ್ ಅವರ ಸಮರ್ಥ ಉತ್ತರಾಧಿಕಾರಿಯಾಗಿ, ಅವರ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಯುವ ರಾಜಕಾರಣಿ, ಅವರ ಪುತ್ರ ಯುವಚೇತನ ಚಿರಾಗ್ ಪಾಸ್ವಾನ್.

ಚಿರಾಗ್ ಪಾಸ್ವಾನ್ ತಂದೆಯಂತೆ ಹುಟ್ಟು ರಾಜಕಾರಣಿಯಲ್ಲ. ತನ್ನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಡಿಗ್ರಿಯಲ್ಲಿ ಮೂರೇ ವರ್ಷಕ್ಕೆ ಡ್ರಾಪೌಟ್ ಆದ ಸ್ಟೂಡೆಂಟ್ ಚಿರಾಗ್ ಪಾಸ್ವಾನ್.‌ ಡ್ರಾಪೌಟ್ ಆದ ನಂತರ, ತನ್ನ ವೃತ್ತಿಜೀವನವನ್ನೇ ಚಿತ್ರರಂಗದತ್ತ ವಾಲಿಸಿಕೊಂಡ ಚಿರಾಗ್, 2011 ರಲ್ಲಿ ಕಂಗನಾ ರಣಾವತ್ ಅವರ ಮುಖ್ಯಭೂಮಿಕೆಯ ಮಿಲೇ ನಾ ಮಿಲೇ ಹಮ್ ಚಿತ್ರದಲ್ಲಿ ನಟಿಸಿದ್ದರು.

ಚಿತ್ರದಲ್ಲಿ ನಟನೆಯ ನಂತರ ಏಕಾಏಕಿ ಚುನಾವಣೆಯಲ್ಲಿ ಸ್ಪರ್ಧಿಸುವತ್ತ ಗಮನ ಹರಿಸಿದ ಚಿರಾಗ್, ತಂದೆಯಂತೆಯೇ ನೇರ ವ್ಯಕ್ತಿತ್ವವನ್ನು ರೂಪಿಸಿಕೊಂಡು ಲೋಕಸಭಾ ಚುನಾವಣಾ ರಂಗಕ್ಕೆ ಧುಮುಕಿಯೇಬಿಟ್ಟರು. 2014 ರಲ್ಲಿ ಜಮುಯಿ ಕ್ಷೇತ್ರದಿಂದ ಸ್ಪರ್ಧಿಸಿದ ಚಿರಾಗ್, ಅತ್ಯಂತ ಪೈಪೋಟಿಯ ನಡುವೆ ಗೆದ್ದು ಲೋಕಸಭಾ ಪ್ರವೇಶ ಮಾಡಿದರು. ನಂತರ ಹಿಂತಿರುಗಿಯೇ ನೋಡದ ಚಿರಾಗ್, 2019 ಮತ್ತು 2024 ರ ಚುನಾವಣೆಯಲ್ಲಿಯೂ ಜಯಭೇರಿ ಬಾರಿಸಿದ್ದಾರೆ ಹಾಗೂ ಪ್ರಧಾನಿ ಮೋದಿಯವರ ನೇತೃತ್ವದ ಎನ್.ಡಿ.ಎ‌ ಮೈತ್ರಿಕೂಟಕ್ಕೆ ನಿರಂತರ ಬೆಂಬಲವನ್ನೇ ನೀಡುತ್ತಾ ಬಂದಿದ್ದಾರೆ.‌

ಕೇವಲ ರಾಜಕಾರಣಿಯಾಗಿ ಅಷ್ಟೇ ಅಲ್ಲದೇ, ಸಮಾಜ ಸೇವೆಗೂ ಒಗ್ಗಿಕೊಂಡಿರುವ ಚಿರಾಗ್, ತಾನೇ ಸ್ಥಾಪಿಸಿರುವ ಚಿರಾಗ್ ಕಾ ರೋಜ್’ಗಾರ್ ಎನ್.ಜಿ.ಒ ಸಂಸ್ಥೆಯಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುತ್ತಿದ್ದಾರೆ‌.

ಅಷ್ಟೇ ಅಲ್ಲದೇ, ಬಿಹಾರ್ ಫಸ್ಟ್ ಎನ್ನುವ ಕ್ಯಾಂಪೇನ್ ಮೂಲಕ, ಬಿಹಾರದ ಅಭಿವೃದ್ಧಿಗಾಗಿ ಹಾಗೂ ಬಿಹಾರವನ್ನು ನಂ.1 ರಾಜ್ಯವಾಗಿ ಮಾಡಬೇಕೆಂಬ ಗುರಿಯೊಂದಿಗೆ ಅಭಿಯಾನ ನಡೆಸಿದ್ದು ಕೂಡ ಇವರ ಹೆಗ್ಗಳಿಕೆ.

ಚಿರಾಗ್ ತನ್ನ ರಾಜಕೀಯ ಜೀವನದಲ್ಲಿ ದೇಶದ ಬಹಳಷ್ಟು ಮನಸುಗಳನ್ನು ಗೆದ್ದಿದ್ದು , ಕಳೆದ ಜನವರಿಯಲ್ಲಿ ನಡೆದ ಅಯೋಧ್ಯಾ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ 2021 ರಲ್ಲೇ ತನ್ನ ಸ್ವಂತ ಹಣದಿಂದ ₹1.11 ಲಕ್ಷವನ್ನು ಕೊಡುಗೆಯಾಗಿ ನೀಡಿದ್ದು ಹಾಗೂ ರಾಮಮಂದಿರ ಉದ್ಘಾಟನೆಗೆ ಸಹಕಾರ ನೀಡಿದ್ದಕ್ಕಾಗಿ. ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮ ಸೇವೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದಿದ್ದ ಚಿರಾಗ್ ನಡೆಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಈ ನಡುವೆ 2021 ರಲ್ಲಿ ಚಿರಾಗ್ ಪಾಸ್ವಾನ್ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಾಸ್, ಚಿರಾಗ್ ಅವರನ್ನು ಲೋಕ ಜನಶಕ್ತಿ ಪಾರ್ಟಿಯ ಲೋಕಸಭಾ ನಾಯಕನ ಸ್ಥಾನದಿಂದ ತಳ್ಳಿದ್ದರು. ಆದರೆ, ಕೇವಲ ಒಂದೇ ದಿನದಲ್ಲಿ ತನ್ನ ಚಿಕ್ಕಪ್ಪ, ಚಿಕ್ಕಪ್ಪ ರಾಮ ಚಂದ್ರ ಪಾಸ್ವಾನ್ ಅವರ ಮಗ ಪ್ರಿನ್ಸ್ ರಾಜ್ ಅವರೊಂದಿಗೆ ಐವರು ರೆಬೆಲ್ ಸಂಸದರನ್ನು ಪಕ್ಷದಿಂದಲೇ ಉಚ್ಛಾಟಿಸಿ, ಪಕ್ಷದ ಗದ್ದುಗೆಯನ್ನು ಮತ್ತೆ ಏರಿದ್ದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದು, ಇತರೆ ಪಕ್ಷಗಳ ಯಾದಿಯಲ್ಲಿದ್ದ ಚಿರಾಗ್ ನಾಯಕತ್ವದ ಲೋಕ ಜನಶಕ್ತಿ ಪಾರ್ಟಿ, ತನ್ನ ಸಂಪೂರ್ಣ ಬೆಂಬಲವನ್ನು ಬಹುಮತ ಪಡೆದ ಎನ್.ಡಿ.ಎ ಗೆ ಅದರಲ್ಲೂ, ಶ್ರೀ ನರೇಂದ್ರ ಮೋದಿಯರಿಗೆ ಗೌರವಪೂರ್ವಕವಾಗಿ ನೀಡಲಿದ್ದೇವೆ ಎಂದು ಘೋಷಿಸಿಕೊಂಡಿದೆ.

ನಾನು ಎಂದಿಗೀ ಮೋದಿಯವರ ಅಭಿಮಾನಿ. ಕೊನೆಯವರೆಗೂ ಅವರಿಗೇ ನಾನು ಬೆಂಬಲವನ್ನು ನೀಡುತ್ತೇನೆ‌. ಅವರಿಗೆ ಬೆಂಬಲ‌ ನೀಡುತ್ತಿರುವುದೇ ನನಗೆ ಹೆಮ್ಮೆ ಹಾಗೂ ಭಾಗ್ಯ ಎಂದಿರುವ ಚಿರಾಗ್, ಇಂದು‌ ನಡೆದ ಎನ್.ಡಿ.ಎ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ಅಪ್ಪುಗೆಯ ಮೂಲಕ ರಾಷ್ಟ್ರ ರಾಜಕಾರಣದಲ್ಲೊಂದು ಸುಂದರ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಈ ನಡುವೆ, ತನ್ನ ಮೊದಲ ಚಿತ್ರದ ಸಹನಟಿ ಹಾಗೂ ಪ್ರಸ್ತುತ ಮಂಡಿ ಕ್ಷೇತ್ರದಿಂದ ಸಂಸದೆಯಾಗಿರುವ ಕಂಗನಾ ರಣಾವತ್ ಅವರನ್ನು ಕೂಡ ಸಂಸದೀಯ ಸಭೆಯಲ್ಲಿ ಅಪ್ಪಿಕೊಂಡು ಹಸ್ತಲಾಘವ ನೀಡಿದ ‍ಚಿರಾಗ್, ರಾಷ್ಟ್ರ ರಾಜಕಾರಣದ ಯುವ ಚೇತನಗಳ ಯಾದಿಯಲ್ಲಿ ಭವಿಷ್ಯದ ದಿಗ್ಗಜ ರಾಜಕಾರಣಿಯಾಗುವ ಕಳೆಯನ್ನು ತೋರಿಸಿರುವುದಂತೂ ಸತ್ಯ.

ಚಿರಾಗ್ ಪಾಸ್ವಾನ್‌ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಅಭಿಮಾನಿಗಳು ಹೆಚ್ಚುತ್ತಿದ್ದು, ಇದೇ ರೀತಿ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಈ ಹವಾ ಅವರ ಪಕ್ಷದ ಗೆಲುವಿಗೆ ಕೂಡಾ ಸಹಕಾರಿಯಾಗುವುದು ಖಂಡಿತ.

You might also like
Leave A Reply

Your email address will not be published.