ಜಾಲತಾಣಗಳಲ್ಲಿ ಮತ್ತೆ ಸದ್ದು‌ ಮಾಡಿದ ‘ಮೋದಿ‌-ಮೆಲೋಡಿ’ – ನೆಟ್ಟಿಗರು ಹೀಗನ್ನೋದ್ಯಾಕೆ?

ಸತತ ಮೂರನೇ ಬಾರಿಗೆ ಪ್ರಧಾನಿ ಪಟ್ಟವೇರಲಿರುವ ಶ್ರೀ ನರೇಂದ್ರ ಮೋದಿಯವರಿಗೆ ಇಡೀ ಜಗತ್ತೇ ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ಮೋದಿಯವರ‌ ನೇತೃತ್ವದ ಬಿಜೆಪಿ ಸ್ವತಂತ್ರ ಬಹುಮತ ಪಡೆಯದಿದ್ದರೂ,‌ ಎನ್.ಡಿ.ಎ‌ ಮೈತ್ರಿಕೂಟದಲ್ಲಿರುವ ಮಿತ್ರಪಕ್ಷಗಳೊಂದಿಗೆ ಸೇರಿ ಸರಳ ಬಹುಮತದ ಸರ್ಕಾರ ರಚಿಸುತ್ತಿದೆ. ಈ ನಡುವೆ ನರೇಂದ್ರ ಮೋದಿಯವರಿಗೆ ಬಹಳಷ್ಟು ಜಾಗತಿಕ ನಾಯಕರೆಲ್ಲಾ ಶುಭಾಶಯಗಳನ್ನು ತಿಳಿಸುತ್ತಿದ್ದು, ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಕೂಡ ಕರೆಮಾಡಿ ಶುಭಾಶಯ ಕೋರಿದ್ದಾರೆ‌. ಈ ನಡುವೆ ಒಬ್ಬರ ಶುಭಾಶಯ ಮಾತ್ರ ನೆಟ್ಟಿಗರಿಗೆ ಆಹಾರವಾಗಿದೆ. ಅಷ್ಟಕ್ಕೂ ಆ ಟ್ವೀಟ್ ಯಾರದ್ದು? ಟ್ವೀಟ್’ನಲ್ಲಿ ಅಂತಹದ್ದೇನಿದೆ? ಹೇಳ್ತೀವಿ ನೋಡಿ.

ಈ ಹಿಂದೆ ಯುಎನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರನ್ನು ಇಟಲಿಯ ಮಹಿಳಾ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿಯಾಗಿದ್ದರು.‌ ಅಲ್ಲಿಂದಲೇ #”Good friends at COP28. #Melodi,” ಎಂದು ಮೋದಿಯವರೊಂದಿಗೆ ಸೆಲ್ಫೀ‌ ಕ್ಲಿಕ್ಕಿಸಿ ಮೆಲೋನಿ ತಮ್ಮ ಸಾಮಾಜಿಕ ಜಾಲತಾಣ‌ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು. ಆವಾಗಿನಿಂದ ಟ್ರೋಲರ್ ಗಳು ಹಾಗೂ ನೆಟ್ಟಿಗರಿಗೆ ಆಹಾರವಾದ ಮೋದಿಜೀ ಹಾಗೂ ಮೆಲೋನಿ #ಮೆಲೋಡಿ (#Melodi) ಎಂದೇ ಟ್ರೆಂಡಿಂಗ್ ಆಗಿದ್ದರು. ಅದೇ ಪರಸ್ಪರ ಉಭಯ ದೇಶಗಳ ನಡುವೆ ಹಾಗೂ ವೈಯುಕ್ತಿಕವಾಗಿ ಉತ್ತಮ ಬಾಂಧವ್ಯ ಹಾಗೂ ಸ್ನೇಹವನ್ನು ಉಳಿಸಿಕೊಂಡಿರುವ ಮೆಲೋನಿ-ಮೋದಿ, ಈಗ ಮತ್ತೊಮ್ಮೆ ಟ್ರೆಂಡ್ ಆಗಿದ್ದಾರೆ. ಅದಕ್ಕೆ ಕಾರಣವಾಗಿದ್ದು, ಮೋದಿಯವರು ಸತತ ಮೂರನೇ ಬಾರಿಗೆ ಗೆಲುವು ದಾಖಲಿಸಿ, ದೇಶದ ಪ್ರಧಾನಿಯಾಗುವ ಸಂಭ್ರಮಕ್ಕೆ ಮೆಲೋನಿ ಶುಭಾಶಯ ತಿಳಿಸಿದ್ದು.

ಹೌದು. ಜಗತ್ತಿನ ಬಹುತೇಕ ರಾಷ್ಟ್ರಗಳ‌ ನಾಯಕರು ತಮ್ಮ ಶುಭಾಶಯ ತಿಳಿಸಿರುವಂತೆ, ಇಟಲಿ ಪಿಎಂ ಮೆಲೋನಿ ಕೂಡ ಮೋದಿಜೀಯವರಿಗೆ ತಮ್ಮ ಶುಭಾಶಯ ತಿಳಿಸಿದ್ದು, ಅವರ ಶುಭಾಶಯ ಟ್ವೀಟ್ ಇಲ್ಲಿದೆ:

ಟ್ವೀಟ್’ನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕೈಕುಲುಕುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಮೆಲೋನಿ, “ನೂತನ ಚುನಾವಣೆಯಲ್ಲಿನ ವಿಜಯಕ್ಕಾಗಿ @narendramodi ಅವರಿಗೆ ಅಭಿನಂದನೆಗಳು ಮತ್ತು ತಮ್ಮ ಮುಂದಿನ ಉತ್ತಮ ಕರ್ತವ್ಯಕ್ಕಾಗಿ ನನ್ನ ಹಾರ್ದಿಕ ಶುಭಾಶಯಗಳು. ಇಟಲಿ ಮತ್ತು ಭಾರತದ ನಡುವಿನ ಸ್ನೇಹವನ್ನು ಬಲಪಡಿಸಲು ಮತ್ತು ನಮ್ಮ ರಾಷ್ಟ್ರ ಹಾಗೂ ನಮ್ಮ ಜನರ ಒಳಿತಿಗಾಗಿ ನಮ್ಮನ್ನು ಬೆಸೆದಿರುವ ವಿವಿಧ ಅಂಶಗಳಲ್ಲಿ ಉಭಯ ಸಹಕಾರವನ್ನು ಹೆಚ್ಚಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಬರೆದುಕೊಂಡಿದ್ದಾರೆ.

ಇಷ್ಟನ್ನೇ ತಮ್ಮ ಟ್ರೆಂಡ್ ವಸ್ತುವಾಗಿ ಬಳಸಿಕೊಂಡಿರುವ ಟ್ರೋಲಿಗರು, #ಮೆಲೋಡಿ ಹ್ಯಾಶ್ ಟ್ಯಾಗ್ ಬಳಸಿದ್ದಲ್ಲದೇ, ಕೆಲವರು ತಮ್ಮ ಹೆಸರಿನೊಂದಿಗೆ ಕೂಡ ಟ್ಯಾಗ್ ಮಾಡಿಕೊಂಡಿದ್ದಾರೆ‌.

ಒಟ್ಟಾರೆ ಮೋದಿಯವರ ಆಳ್ವಿಕೆಯಲ್ಲಿ ಜಗತ್ತಿನ ಬಹುತೇಕ ದೇಶಗಳ ನಡುವೆ ಬಾಂಧವ್ಯ ವರ್ಧಿಸುತ್ತಿರುವುದು, ವಿಶ್ವನಾಯಕನ ಆಡಳಿತ ವೈಖರಿ ಹಾಗೂ ದೂರದೃಷ್ಟಿತ್ವವನ್ನು ಎತ್ತಿಹಿಡಿಯುತ್ತದೆ ಎನ್ನಬಹುದು.

You might also like
Leave A Reply

Your email address will not be published.