ರಾಜ್ಯದಲ್ಲಿ ಮುಸ್ಲಿಮ್ ತುಷ್ಟೀಕರಣ ಪರಾಕಾಷ್ಠೆಗೆ – ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಬಂದ ನಂತರ ಮುಸ್ಲಿಮ್ ತುಷ್ಟೀಕರಣವು ಪರಾಕಾಷ್ಠೆ ತಲುಪಿದೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸಂಪೂರ್ಣ ಮುಸ್ಲಿಮರಿಗೆ ಕೊಡಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತದೆ. ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ಕೊಡಬಾರದು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ನೋಟೀಸ್ ನೀಡಿದರೂ ಇನ್ನೂ ಉತ್ತರ ಕೊಟ್ಟಿಲ್ಲ ಎಂದರು.

ಹನುಮಾನ ಚಾಲೀಸಾ ಹೇಳಿದವರನ್ನು ಜೈಲಿಗೆ ಹಾಕುವುದು, ಬೆಂಗಳೂರು ಹುಬ್ಬಳ್ಳಿ ಗಲಭೆಗಳ ಆಪಾದಿತರನ್ನು ಬಿಡುಗಡೆ ಮಾಡುವುದು, ನೇಹಾ ಹಿರೇಮಠ ಪ್ರಕರಣ ಕುರಿತು ಉಡಾಫೆ ಮಾತು ಹೇಳುವುದು ಇವೆಲ್ಲ ಕಾಂಗ್ರೆಸ್ನ ತುಷ್ಟೀಕರಣದ ಉದಾಹರಣೆಗಳು ಎಂದವರು ತಿಳಿಸಿದರು.

ವಯನಾಡು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಅದರ ಧ್ವಜ ಬಳಕೆ ಮಾಡಲು ಕೊಟ್ಟಿಲ್ಲ. ಕಾಂಗ್ರೆಸ್ ಧ್ವಜದಲ್ಲಿ ಕೇಸರಿ ಬಣ್ಣವಿದೆ; ಅದನ್ನು ಬಳಸಿದರೆ ನಾವು ನಿಮ್ಮ ಜೊತೆ ಬರುವುದಿಲ್ಲ ಎಂದು ಮುಸ್ಲಿಮ್ ಲೀಗ್ನವರು ಹೇಳುತ್ತಾರಂತೆ. ಕಾಂಗ್ರೆಸ್ನವರು ಅವರ ಎದುರು ನತಮಸ್ತಕರಾಗಿ ಹೋಗಿದ್ದಾರೆ ಎಂದರು.

ರಾಜ್ಯದಲ್ಲಿ ಮಳೆ ಬಂದಿಲ್ಲ. ತಾಪಮಾನ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಜನ ಮತ್ತು ಜಾನುವಾರು ಇಬ್ಬರೂ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರವು ಕೂಡಲೇ ಇಬ್ಬರಿಗೂ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಜೋಶಿಯವರು ಆಗ್ರಹಿಸಿದರು.

ಸರ್ಕಾರ ಕೂಡಲೇ ಮೇವು ಬ್ಯಾಂಕ್ ತೆರೆಯಬೇಕು, ತಾಲೂಕು ಮಟ್ಟದಲ್ಲಿ ಬರ ನಿರ್ವಹಣೆಗೆ ಟಾಸ್ಕ್ ಪೋರ್ಸ್ ನೇಮಕ ಮಾಡಬೇಕು ಎಂದರು.

Muslim appeasement in the state to Highlevel

ಹೈನುಗಾರಿಕೆ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರವು ಅತ್ತ ರೈತರಿಗೆ ಪ್ರೋತ್ಸಾಹ ಧನವನ್ನೂ ಕೊಡುತ್ತಿಲ್ಲ; ಇತ್ತ ಹಾಲಿನ ದರವನ್ನು ಹೆಚ್ಚಳ ಮಾಡಿದ್ದಾರೆ ಎಂದರು. 10 ರೂ. ಬಾಂಡ್ ಬದಲಿಗೆ ಈಗ ನೂರು ರೂ ಬಾಂಡ್ ಖರೀದಿಸಬೇಕಾಗಿದೆ, ನೋಂದಣಿ ಶುಲ್ಕವನ್ನು ಮೂರು ಪಟ್ಟು ಹೆಚ್ಚಿಸಿದೆ, ಮೊದಲು 4.75 ರೂ ಇದ್ದ ವಿದ್ಯುತ್ ದರವನ್ನು ಈಗ 7.25 ರೂ. ಮಾಡಿದ್ದಾರೆ. ಇದೇ ಕಾಂಗ್ರೆಸ್ನ ತಥಾಕಥಿತ ಗ್ಯಾರಂಟಿ ಎಂದವರು ಹೇಳಿದರು.

ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಹಣವು ಫಲಾನುಭವಿಗಳಿಗೆ ವಿತರಣೆ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಗ್ಯಾರಂಟಿ ಶಬ್ದಕ್ಕೆ ಅರ್ಥವಿಲ್ಲ. ಕಾಂಗ್ರೆಸ್ನ ಗ್ಯಾರಂಟಿ ಜನರಿಗೆ ಮರಣ ಶಾಸನವಾಗಿದೆ ಎಂದರು. ನಿತ್ಯವೂ ಕೇಂದ್ರ ಸರ್ಕಾರವನ್ನು ಟೀಕಿಸುವುದು, ಗಾಂಧಿ ಪ್ರತಿಮೆ ಬಳಿ ಧರಣಿ ಹೂಡುವುದಷ್ಟೇ ಕಾಂಗ್ರೆಸ್ನವರ ಕೆಲಸವಾಗಿದೆ. ಆದರೆ ಜನರಿಗೆ ಪ್ರಧಾನಿ ಮೋದಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದರು.

ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ಜನರು ಈಗಾಗಲೇ ನಿರ್ಧರಿಸಿದ್ದಾರೆ. ಆದರೆ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ. ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳುತ್ತಿಲ್ಲ. ಯಾಕೆಂದರೆ ಕಾಂಗ್ರೆಸ್ ಸ್ಪರ್ಧಿಸಿದ್ದೇ 238 ಕ್ಷೇತ್ರಗಳಲ್ಲಿ. ಹಾಗಾಗಿ ಅವರಿಗೆ ಬಹುಮತವೂ ಇಲ್ಲ. ಪ್ರಧಾನಿ ಪಟ್ಟವೂ ಕನಸು ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳಾಗಿವೆ. ರೇಲ್ವೆ, ಐಐಟಿ, ಆಸ್ಪತ್ರೆ, ಹೆದ್ದಾರಿಗಳು ಜನರ ಮನಸ್ಸಿನಲ್ಲಿವೆ. ವಿಮಾನ ನಿಲ್ದಾಣವನ್ನು ಇನ್ನೂ ಅಭಿವೃದ್ಧಿಗೊಳಿಸಬೇಕಾಗಿದೆ. ಸರಕು ಸಾಗಣೆ ಹೆಚ್ಚಾಗಲು ಪ್ರಯತ್ನಿಸಲಾಗುವುದು ಎಂದರು.
ಕಳಸಾ ಬಂಡೂರಿ ಯೋಜನೆ ಕುರಿತು ಕಾಂಗ್ರೆಸ್ನವರಿಗೆ ಆಸಕ್ತಿ ಇಲ್ಲ. ಅವರು ಒಂದು ನಯಾ ಪೈಸಾ ಕೆಲಸ ಮಾಡಿಲ್ಲ ಎಂದ ಅವರು, ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಂ.ಆರ್.ಪಾಟೀಲ. ಮಹೇಶ ಟೆಂಗಿನಕಾಯಿ, ಲೋಕಸಭಾ ಕ್ಷೇತ್ರದ ಸಂಚಾಲಕ ಎಂ.ನಾಗರಾಜ, ಹುಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮುಖಂಡರಾದ ಪ್ರಶಾಂತ ಕೆಡಂಜೆ, ಗುರು ಪಾಟೀಲ, ಸಿದ್ಧನಗೌಡ್ರ, ನಾಗನಗೌಡ್ರ ಮೊದಲಾದವರಿದ್ದರು.

You might also like
Leave A Reply

Your email address will not be published.