ಗುಡ್‌ ನ್ಯೂಸ್‌ ಕೊಟ್ಟ ಆರ್‌ʼಬಿಐ : ನಗದು ಠೇವಣಿಗೆ ಯುಪಿಐ ಸೌಲಭ್ಯ

ಈಗಾಗಲೇ ಭಾರತವನ್ನು ಹೊರತು ಪಡಿಸಿ ಶ್ರೀಲಂಕಾ, ಮಾರಿಷಸ್, ಫ್ರಾನ್ಸ್, ಯು.ಎ.ಇ‌., ಸಿಂಗಾಪುರ, ಭೂತಾನ್ ಹಾಗೂ ನೇಪಾಳದಲ್ಲಿ ಭಾರತದ ಯುಪಿಐ ಬಳಕೆಯಲ್ಲಿದೆ. ಗ್ರಾಹಕರ ಅನುಕೂಲತೆ, ವೇಗ ಹಾಗೂ ಪರಸ್ಪರ ಕಾರ್ಯ ಸಾಧ್ಯತೆಯ ಕಾರಣದಿಂದಾಗಿ ಯು.ಪಿ.ಐ. ಗಮನಾರ್ಹ ಜನಪ್ರಿಯತೆ ಗಳಿಸಿದ್ದು ಇದು ದೇಶದಲ್ಲಿ ಡಿಜಿಟಲ್ ಪಾವತಿಗಳ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ.

2024-25ರ ಹಣಕಾಸು ವರ್ಷದ ಮೊದಲ ಹಣಕಾಸು ನೀತಿ ಹೇಳಿಕೆಯ ಅನಾವರಣ ಸಂಧರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಹೊಸ ಯುಪಿಐ ಆಧಾರಿತ ನಗದು ಠೇವಣಿ ಸೌಲಭ್ಯದ ಪ್ರಸ್ತಾಪವನ್ನು ಪ್ರಕಟಿಸಿದರು.

ಯು.ಪಿ.ಐ.‌ಅನ್ನು ಪ್ರಾಥಮಿಕವಾಗಿ ಪೀರ್ ಟು ಪೀರ್ ವಹಿವಾಟುಗಳು, ಬಿಲ್ ಪಾವತಿಗಳು, ವ್ಯಾಪಾರಿ ವಹಿವಾಟುಗಳು ಮತ್ತು ಇತರ ಡಿಜಿಟಲ್ ಪಾವತಿಗಳಿಗಾಗಿ ಬಳಸಲಾಗುತ್ತದೆ. ಈಗ ಮಾಡಿದ ಪ್ರಸ್ತಾಪದ ಪ್ರಕಾರ ಎಟಿಎಂ ಅಥವಾ ಡೆಬಿಟ್ ಕಾರ್ಡ್ ‌ನ ಬದಲಿಗೆ ಯುಪಿಐ ಬಳಸಿ ನಗದು ಠೇವಣಿ ಯಂತ್ರಗಳಲ್ಲಿ (ಸಿಡಿಎಂ) ಹಣವನ್ನು ಠೇವಣಿ ಮಾಡಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಈ ವ್ಯವಸ್ಥೆಯು ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದರ ಕುರಿತು ಆರ್.ಬಿ.ಐ. ಹೆಚ್ಚಿನ ವಿವರಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

RBI gave good news: UPI facility for cash deposit

ನಗದು ಠೇವಣಿ ಸೌಲಭ್ಯವು ಪ್ರಸ್ತುತ ಡೆಬಿಟ್ ಕಾರ್ಡ್ ಬಳಕೆಯ ಮೂಲಕ‌ ಮಾತ್ರವೇ ಲಭ್ಯವಿದೆ. ‌ಇನ್ನು ಮುಂದೆ ಬ್ಯಾಂಕ್ ಶಾಖೆಗಳಲ್ಲಿ ನಗದು ಹ್ಯಾಂಡ್ಲಿಂಗ್‌ ಲೋಡ್ ಅನ್ನು ಕಡಿಮೆ ಮಾಡುವಾಗ ಬ್ಯಾಂಕ್‌ಗಳಿಂದ ನಿಯೋಜಿಸಲಾದ ಸಿಡಿಎಂ‌ಗಳು ಗ್ರಾಹಕರ ಅನುಕೂಲವನ್ನು ಹೆಚ್ಚಿಸುತ್ತವೆ ಎಂದು ಆರ್‌ಬಿ‌ಐ ಗವರ್ನರ್ ಹೇಳಿಕೆ‌ ನೀಡಿದ್ದಾರೆ.

ಯುಪಿಐ ನ ಜನಪ್ರಿಯತೆ ಮತ್ತು ಜನರು ಅದನ್ನು ಸ್ವೀಕರಿಸಿರುವ ರೀತಿಯನ್ನು ಪರಿಗಣಿಸಿ ಯುಪಿಐ ಬಳಕೆಯ ಮೂಲಕ ನಗದು ಠೇವಣಿ ಸೌಲಭ್ಯವನ್ನು ಸುಲಭಗೊಳಿಸಲು ಇದನ್ನು ಪ್ರಸ್ತಾಪಿಸಲಾಗಿದ್ದು ಶೀಘ್ರದಲ್ಲೇ ಕಾರ್ಯಚರಣೆಯ ಸೂಚನೆಗಳನ್ನು ನೀಡಲಾಗುವುದು ಎಂದಿದ್ದಾರೆ.

ಯುಪಿಐ ಅಂದರೆ ಯುನಿಫೈಡ್ ಫೇಮೆಂಟ್ಸ್ ಇಂಟರ್‌ಫೇಸ್ ಎಂಬುದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿದ ಆನ್ ಟೈಮ್ ಪಾವತಿ ವ್ಯವಸ್ಥೆಯಾಗಿದೆ. ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳ ಅಗತ್ಯವಿಲ್ಲದೇ ಕೇವಲ ವರ್ಚುವಲ್ ಪೇಮೆಂಟ್ ಅಡ್ರೆಸ್ (VPA), ಮೊಬೈಲ್‌ ಸಂಖ್ಯೆ ಅಥವಾ ಕ್ಯೂ ಆರ್ ಕೋಡ್ ಬಳಸಿ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಎರಡು ಬ್ಯಾಂಕ್ ಖಾತೆಗಳ ನಡುವೆ ತ್ವರಿತ ಹಣ ವರ್ಗಾವಣೆಯನ್ನು ಇದು ಸುಲಭಗೊಳಿಸುತ್ತದೆ.

You might also like
Leave A Reply

Your email address will not be published.