ರಾಮೇಶ್ವರಂ ಕೆಫೆಯ ಬಾಂಬ್‌ ಬ್ಲಾಸ್ಟ್‌ ಆರೋಪಿಯನ್ನು ಹುಡುಕಿಕೊಟ್ಟರೆ 10 ಲಕ್ಷ ಬಹುಮಾನ – ಎನ್‌ʼಐಎ

ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟದ ಶಂಕಿತ ಉಗ್ರನ ಹುಡುಕಾಟ ಹೊಸ ರೂಪ ಪಡೆದುಕೊಂಡಿದೆ. ತಲೆಮರೆಸಿಕೊಂಡಿರುವ ಈ ಆರೋಪಿಯ ಗುರುತು ಹಿಡಿಯಲು ಎನ್.ಐ.ಎ ಒಂದು ಹೊಸ ಮಾರ್ಗ ಅನುಸರಿಸಿದೆ. ಏನದು ಹೊಸ ಮಾಸ್ಟರ್ ಪ್ಲಾನ್? ಇಲ್ಲಿದೆ ನೋಡಿ ವಿವರ.

ರಾಮೇಶ್ವರಂ ಕೆಫೆ ಬಾಂಬರ್ ಎಲ್ಲಿದ್ದಾನೆ ಅನ್ನೋದೇ ಟೆನ್ಷನ್ ಆಗಿದೆ. ತನಿಖಾ ತಂಡಗಳು ಕರ್ನಾಟಕವಷ್ಟೇ ಅಲ್ಲ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಭಾಗದಲ್ಲೂ ಶೋಧ ಮಾಡ್ತಿವೆ. ಆರೋಪಿ ಪತ್ತೆಗೆ ಸಿಸಿಬಿಯಿಂದಲೂ ರೂಟ್ ಮ್ಯಾಪಿಂಗ್ ಆಗ್ತಿದೆ. ಆರೋಪಿ ಕೆಫೆಗೆ ಬಂದು, ಹೋದ ಕುಂದಲಹಳ್ಳಿ ಮಾರ್ಗದ 4 ಕಿ.ಮೀ ವ್ಯಾಪ್ತಿಯ CCTV ಪರಿಶೀಲನೆಯು ನಡೆಯುತ್ತಿದೆ. ಹೀಗಿರುವಾಗ ಎನ್’ಐಎ (NIA) ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟದ ಶಂಕಿತ ಬಾಂಬರ್ ನ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದೆ.

ಶಂಕಿತ ವ್ಯಕ್ತಿಯ ಮಾಸ್ಕ್ ಇಲ್ಲದ ಫೋಟೋವನ್ನು ಎನ್’ಐಎ ರಿಲೀಸ್ ಮಾಡಿದ್ದು, ಮಾಹಿತಿದಾರರ ಗುರುತನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಎನ್’ಐಎ ಹೇಳಿದೆ. ಶಂಕಿತ ಉಗ್ರನ ಸುಳಿವು ಇದ್ರೆ 080-29510900, 8904241100 ಸಂಖ್ಯೆಗೆ ಕರೆ ಮಾಡಬಹುದು ಅಥವಾ [email protected] ಗೂ ಮೇಲ್ ಮಾಡಿ ಶಂಕಿತನ ಮಾಹಿತಿಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

30 ನಿಮಿಷದಲ್ಲೇ ಹಲವು ಬಸ್ ಬದಲಾಯಿಸಿದ ಆರೋಪಿ:

ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಳಿಕ ಯಾರಿಗೂ ಸಿಗದಂತೆ ಆರೋಪಿ ಭರ್ಜರಿ ಪ್ಲ್ಯಾನ್ ಮಾಡಿದ್ದ. ಕೆಫೆ ಬಳಿಯಿಂದ ಬಸ್ ಹತ್ತಿದವನೇ ನೆಕ್ಸ್ಟ್ ಸ್ಟಾಪ್ ನಲ್ಲಿ ಇಳಿದಿದ್ದನಂತೆ. ಅಲ್ಲದೇ 30-40 ನಿಮಿಷದಲ್ಲಿ ಹಲವು ಬಸ್ ಬದಲಾಯಿಸಿದ್ದನಂತೆ ಈ ಶಂಕಿತ. ಒಂದೇ ಬಸ್ ಅಲ್ಲಿ ಜರ್ನಿ ಮಾಡಿದರೆ ಸಿಕ್ಕಿಬೀಳೋ ಭಯದಿಂದ ಹಲವು ಬಸ್ ಹತ್ತಿ ಇಳಿದಿದ್ದನಂತೆ. ಇದೆಲ್ಲವೂ ಸಿಸಿಟಿವಿಗಳ ಪರಿಶೀಲನೆಯಿಂದ ತನಿಖಾ ತಂಡಕ್ಕೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

NIA announces 10 lakh reward for those who finds out the suspect of Rameswaram cafe blast

ಮತ್ತೆ ತೆರೆಯಲಿದೆ ರಾಮೇಶ್ವರಂ ಕೆಫೆ:

ಮಾರ್ಚ್ 1ರಂದು ಬಾಂಬ್ ಸ್ಫೋಟ ನಡೆದ ಬಳಿಕ ಮುಚ್ಚಿದ್ದ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್‌ನಲ್ಲಿರುವ ಪ್ರತಿಷ್ಠಿತ ಫುಡ್ ಜಾಯಿಂಟ್ ರಾಮೇಶ್ವರಂ ಕೆಫೆ ಮುಂದಿನ ಶನಿವಾರ ಅಂದರೆ ಮಾರ್ಚ್ 9ರಂದು ಮತ್ತೆ ತೆರೆಯಲಿದೆ. ಈ ಮೂಲಕ ಈ ಭಾಗದ ಫುಡ್ ಪ್ರಿಯರಿಗೆ ಸಂತಸ ತರಲಿದೆ.

ಈ ಸ್ಫೋಟ ನಡೆದಾಗ ಹೋಟೆಲ್’ನ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್ ಅವರು ಮುಂಬಯಿಯಲ್ಲಿದ್ದರು. ಅವರ ಪತಿ ರಾಘವೇಂದ್ರ ರಾವ್ ಅವರು ಗುಜರಾತ್ನ ಜಾಮ್ ನಗರದಲ್ಲಿದ್ದರು. ಅವರು ಈ ಪ್ರಕರಣದ ತನಿಖೆಯಲ್ಲಿ ಸಹಕರಿಸಿದ್ದರು.
ಅದರ ನಡುವೆ ಮಾತನಾಡಿ, ಬಾಂಬ್ ಸ್ಫೋಟದಿಂದ ಹೋಟೆಲ್’ಗೆ ಏನೂ ತೊಂದರೆಯಾಗಿಲ್ಲ. ಹೋಟೆಲ್’ನಿಂದ ಯಾವುದೇ ತಪ್ಪು ಆಗಿಲ್ಲ. ಹೀಗಾಗಿ ಅತಿ ಶೀಘ್ರದಲ್ಲಿ ಮತ್ತೆ ಹೋಟೆಲ್ ತೆರೆಯಲಾಗುವುದು ಎಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕೂಡಾ ಪೋಸ್ಟ್ ಹಾಕಿದ್ದರು. ಶಿವರಾತ್ರಿ ದಿನವಾದ ಮಾರ್ಚ್ 8ರಂದು ಮರು ಆರಂಭ ಮಾಡುವ ಬಗ್ಗೆ ಮಾತನಾಡಿದ್ದರು.

ಆದರೆ, ತನಿಖಾಧಿಕಾರಿಗಳು ಈ ಹೋಟೆಲ್’ನಲ್ಲಿ ಇನ್ನೂ ತನಿಖೆ ಪೂರ್ಣಗೊಂಡಿಲ್ಲ ಎಂದು ಹೇಳಿದ್ದರಿಂದ ಸದ್ಯ ಅದು ಮತ್ತೆ ತೆರೆಯುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗಿತ್ತು. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್’ನ್ನು ತೆಗೆದುಹಾಕಿದ್ದರು.

ರಾಮೇಶ್ವರಂ ಕೆಫೆ ಎದುರು ಫ್ಲೆಕ್ಸ್:

ಈ ನಡುವೆ, ರಾಮೇಶ್ವರಂ ಕೆಫೆನಲ್ಲಿ ರೀನೋವೇಶನ್ ಕಾರ್ಯ ಶುರುವಾಗಿದ್ದು, ಶನಿವಾರ (ಮಾರ್ಚ್ 9) ಬೆಳಗ್ಗೆ 6:30 ಕ್ಕೆ ಪುನಾರಂಭ ಮಾಡ್ತೇವೆ ಎಂದು ಫ್ಲೆಕ್ಸ್ ಹಾಕಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್’ಐಎ ಅಧಿಕಾರಿಗಳು ಈಗಾಗಲೇ ಇಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಿಸಿಬಿ ಕೂಡಾ ಪರಿಶೀಲನೆ ನಡೆಸಿದೆ. ನಂತರ ರಾಮೇಶ್ವರಂ ಕೆಫೆಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ. ಅದಾದ ಬಳಿಕ ಈಗ ಒಳಗಿನಿಂದ ದುರಸ್ತಿ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ. ಹೀಗಾಗಿ ಮಾರ್ಚ್ 9ರ ಬೆಳಗ್ಗೆ 6.30ರಿಂದ ಮತ್ತೆ ಹೋಟೆಲ್ ತೆರೆದುಕೊಳ್ಳಲಿದೆ.

You might also like
Leave A Reply

Your email address will not be published.