ಚಾರಣಿಗರ ಸ್ವರ್ಗ ದೇವ ಭೂಮಿ ಉತ್ತರಾಖಂಡ

ಚಳಿಗಾಲ ಬಂತೆಂದರೆ ಸಾಕು ಚಾರಣಿಗರಿಗೆ ಒಂಥರಾ ಹಬ್ಬವಿದ್ದಂತೆ. ಹಿಮಾಲಯ ಪರ್ವತ ಶ್ರೇಣಿಗಳು ವಿಂಟರ್ ವಂಡರ್ ಲ್ಯಾಂಡ್ ಆಗಿ ಪರಿವರ್ತನೆ ಗೊಳ್ಳುತ್ತವೆ.‌ ಚಳಿಗಾಲದ ಚಾರಣಗಳು ಇತರೇ ಸಮಯಕ್ಕಿಂತ ತುಸು ಭಿನ್ನವೇ ಎನಿಸುತ್ತವೆ.‌ ಅಲ್ಲಲ್ಲಿ ಸಿಗುವ ಕಾಡು, ಹೇರಳವಾಗಿ ಸಿಗುವ ಪೈನ್ ಮರಗಳು, ಹೆಪ್ಪುಗಟ್ಟಿದ ತೊರೆಗಳು, ಹೀಗೆ ಹಿಮದ ನಡುವೆ ಒಂದು ಅದ್ಭುತ ಜಗತ್ತು ಚಾರಣಿಗರಿಗೆ ತೆರೆದುಕೊಳ್ಳುತ್ತದೆ.‌

ಹಾಗಾದರೆ ಚಳಿಗಾಲದ ಅತ್ಯಂತ ಮೋಹಕ ಮತ್ತು ಹೋಗಲೇಬೆಕು ಎಂದೆನಿಸುವ ಉತ್ತರಾಖಂಡದ ಐದು ಚಾರಣಗಳು ಯಾವುವು? ನೋಡೋಣ ಬನ್ನಿ.‌

1. ನಾಗ್ ಟಿಬ್ಬಾ.

ನಾಗ್ ಟಿಬ್ಬಾವು ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿದ್ದು ಸಮುದ್ರ ಮಟ್ಟದಿಂದ 9915 ಅಡಿ ಎತ್ತರದಲ್ಲಿದ್ದು ಮಸ್ಸೂರಿಗೆ ಸಮೀಪದಲ್ಲಿದೆ. ಇದು ಹಿಮಾಲಯದ ಚಾರಣವನ್ನು ಪ್ರಥಮಬಾರಿ ಮಾಡುವವರಿಗೆ ಹೇಳಿ ಮಾಡಿಸಿದ ಹಾಗಿದ್ದು, ಕೆಳಗಿನ ಹಿಮಾಲಯದಲ್ಲಿದೆ ಹಾಗೂ Altitude Sickness ಬಗ್ಗೆ ಚಾರಣಿಗರು ಚಿಂತಿಸಬೇಕಾಗಿಲ್ಲ. ಈ ಚಾರಣವನ್ನು ಪೂರ್ಣಗೊಳಿಸಲು ಗರಿಷ್ಠ ಎರಡು ದಿನ ಬೇಕಿದ್ದು ವಾರಾಂತ್ಯದ ದಿನಗಳಲ್ಲಿ ಆರಾಮವಾಗಿ ಮುಗಿಸಬಹುದು‌. ಈ ಚಾರಣದಲ್ಲಿ ಓಕ್‌ ಮತ್ತು ರೋಡೋಡೆಂಡ್ರಾನ್ ಮರಗಳ ಮಧ್ಯೆ ಹಾದು ಹೋಗಲಿದ್ದು ಸುತ್ತಲೂ ಹಿಮದ ಸುಂದರ ಹೊದಿಕೆಗಳಿಂದ ಕೂಡಿರುತ್ತದೆ ಹಾಗೂ ನಾಗ್ ಟಿಬ್ಬಾ ದೇವಸ್ತಾನದ ಬಳಿಯಿಂದ ಹಾದು ಹೋದರೆ ಗರ್ವಾಲ್ ಹಿಮಾಲಯದ ಅಧ್ಬುತ ಸೌಂದರ್ಯ ಸವಿಯಬಹುದಾಗಿದೆ.

Nag Tibba.

2. ಕೇದಾರಕಾಂತ.‌

ಕೇದಾರಕಾಂತವು ಆರಂಭಿಕರ ಚಾರಣವೆಂದೇ ಹೆಸರುವಾಸಿಯಾಗಿದೆ. ಚಳಿಗಾಲದಲ್ಲಿ ಕೇದಾರಕಾಂತ ಚಾರಣವು ಅತೀ ಸುಂದರವಾಗಿ ಕಾಣಲಿದ್ದು ಹಿಮದ ಹೊದಿಕೆಗಳು ಇದರ ಸೌಂದರ್ಯವನ್ನು ದುಪ್ಪಟ್ಟುಗೊಳಿಸುತ್ತವೆ.

ಸಮುದ್ರ ಮಟ್ಟದಿಂದ 12,500 ಅಡಿ ಎತ್ತರವಿರುವ ಈ ಚಾರಣವನ್ನು 6 ದಿನಗಳಲ್ಲಿ ಪೂರೈಸಬಹುದಾಗಿದೆ. ಪೈನ್ ಮರಗಳ ಮೇಲೆ ಹಿಮಪಾತವಾದ ಸುಂದರ ನೋಟವು ಇಪ್ಪತ್ತು ಕಿಲೋಮೀಟರ್ ತನಕವೂ ಸಿಗಲಿದೆ.

ಆರಂಭಿಕರಿಗೆ ಆರಾಮದಾಯಕ ಟ್ರೆಕ್ ಇದು ಎಂದು ಹೇಳಲಾಗುತ್ತದೆಯಾದರೂ ಇತ್ತೀಚಿನ ದಿನಗಳಲ್ಲಿ ಕೆಲವರು ತೊಂದರೆ ಅನುಭವಿಸಿದ್ದೂ ಇದೆ ಹಾಗಾಗಿ ಬೇಸಿಕ್ ಫಿಟ್ನೆಸ್ ಇದ್ದರೆ ಈ ಚಾರಣ ಅತೀ ಸುಲಭದಾಯಕವಾಗಿದೆ.

Kedarkanta.

3. ತುಂಗನಾಥ ಮತ್ತು ಚಂದ್ರಶಿಲಾ

ತುಂಗನಾಥ ಮತ್ತು ಚಂದ್ರಶಿಲಾ ಚಾರಣವು ಚಳಿಗಾಲದಲ್ಲಿ ಅಂದರೆ ಈಗ ತುಂಗನಾಥ ದೇವಾಲಯವು ಮುಚ್ಚಿರಲಿದ್ದು ಆದರೆ ಹಿಮದ ಬೆಟ್ಟದ ಮೇಲೆ ನಡೆದು ಚಂದ್ರಶಿಲಾ ತಲುಪಿದ ಮೇಲೆ ನಂದಾ ದೇವಿ, ತ್ರಿಶೂಲ್, ಚೌಕಂಬ ಮತ್ತು ಕೇದಾರನಾಥ ಶಿಖರಗಳ ಮನಮೋಹಕ ದೃಶ್ಯಗಳು ಎಂತವರನ್ನೂ ಸೆಳೆಯುತ್ತದೆ.

ತುಂಗನಾಥ ದೇವಾಲಯವು ಜಗತ್ತಿನ ಅತೀ ಎತ್ತರದ ಜಾಗದಲ್ಲಿ ಇರುವ ಶಿವನ ಆಲಯವಾಗಿದ್ದು ಈ ಚಾರಣವು ಸಮುದ್ರ ಮಟ್ಟದಿಂದ 13,124 ಅಡಿಗಳಷ್ಟು ಎತ್ತರವಿದೆ. ‌

Tunganath and Chandrashila

4. ದಯಾರ ಬುಗ್ಯಾಲ್

ಈ ಚಾರಣದಲ್ಲಿ ನೀವು ಹಿಮಾಲಯದ ವಿಹಂಗಮ ದೃಶ್ಯಗಳನ್ನು ಒಳಗೊಂಡಿದ್ದು, ದಯಾರ ಬುಗ್ಯಾಲ್ ಚಾರಣಕ್ಕೆ ಡಿಸೆಂಬರ್ ನಿಂದ ಮಾರ್ಚ್ ತನಕದ ಅವಧಿ ಅತ್ಯುತ್ತಮವಾದುದ್ದಾಗಿದೆ‌.‌ ಸಮುದ್ರ ಮಟ್ಟದಿಂದ 12,303 ಅಡಿ ಎತ್ತರದಲ್ಲಿರುವ ಇದನ್ನು ಭಾರತದ ಅಧ್ಬುತ ಆಲ್ಪೈನ್ ಹುಲ್ಲುಗಾವಲುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

Dayara Bugyal

5. ಹರ್ ಕಿ ಧುನ್

ಸಮುದ್ರ ಮಟ್ಟದಿಂದ 11,811 ಅಡಿ ಎತ್ತರದ ಪ್ರದೇಶದಲ್ಲಿ ಇರುವ ಈ ಚಾರಣವು ಗೋವಿಂದ್ ಬಲ್ಲಭ್ ಪಂತ್ ರಾಷ್ಟ್ರೀಯ ಉದ್ಯಾನವನದ ಹೃದಯಭಾಗದಲ್ಲಿರುವ ತೊಟ್ಟಿಲು ಆಕಾರದ ಕಣೆವೆಯಲ್ಲಿದೆ.

Har Ki Dhun

ಚಳಿಗಾಲದ ಅತ್ಯದ್ಭುತ ಜಾಗಗಳಲ್ಲಿ ಒಂದಾಗಿದ್ದು ಮೋಡಿ ಮಾಡುವ ಪೈನ್ ಮರಗಳು ಹಾಗೂ ಆಲ್ಪೈನ್ ಹುಲ್ಲುಗಾವಲುಗಳ ಮಧ್ಯೆ ಹಾಗೂ 3000 ವರ್ಷಗಳ ಇತಿಹಾಸ ಹೊಂದಿದ ಪ್ರಾಚೀನ ಹಳ್ಳಿಗಳ ಮಧ್ಯೆ ಸಾಗಲಿರುವ ಈ ಚಾರಣದಲ್ಲಿ ಅಲ್ಲಿನ ಜನರ ಸಂಸ್ಕೃತಿ, ಮತ್ತು ಜೀವನ ಶೈಲಿಯನ್ನು ಅರಿಯಲು ಸಹಾಯಕವಾಗುತ್ತದೆ.

ಇನ್ನೂ ಈ ತರಹದ ಅನೇಕ ಚಾರಣಗಳಿದ್ದು ಅವೆಲ್ಲವನ್ನೂ ಮತ್ತೊಮ್ಮೆ ಪರಿಚಯಿಸುವ ಪ್ರಯತ್ನ ಮಾಡುತ್ತೇವೆ.

You might also like
Leave A Reply

Your email address will not be published.