ಬಿಸಿಸಿಐ‌ ಕ್ರಿಕೆಟ್ ರಾಜಕೀಯ – ಚರ್ಚೆಗೆ ಗ್ರಾಸವಾದ ವಾರ್ಷಿಕ ಕಾಂಟ್ರ್ಯಾಕ್ಟ್

ಬಿಸಿಸಿಐ‌ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ.‌ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ, ಈ ಹಿಂದೆ ಅಧ್ಯಕ್ಷ ಸ್ಥಾನದ ವಿಚಾರ, ಕಿಂಗ್ ಕೊಹ್ಲಿ- ರೋಹಿತ್ ಕ್ಯಾಪ್ಟನ್ಸಿ ವಿಚಾರ, ಸೆಲೆಕ್ಷನ್ ಕಮಿಟಿ ವಿಚಾರವಾಗಿ ಸುದ್ದಿಯಾಗುತ್ತಿತ್ತು. ಆದರೆ ಇದೀಗ, ಆಟಗಾರರಿಗೆ ಸೆಂಟ್ರಲ್ ಕಾಂಟ್ರ್ಯಾಕ್ಟ್ ನೀಡುವ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದೆ.

ಕ್ರಿಕೆಟ್ ಆಟಗಾರರಿಗೆ ಅವರವರ ರೋಲ್ ಗೆ ತಕ್ಕಂತೆ ವಾರ್ಷಿಕ ಗುತ್ತಿಗೆಯನ್ನು ನೀಡಲಾಗುತ್ತದೆ. ಅದರಲ್ಲಿ ಅತ್ಯುತ್ತಮ ಹಾಗೂ ಅತೀ ಅನುಭವಿ ಆಟಗಾರರಿಗೆ ಎ+, ನಂತರ ಎ, ಬಿ, ಸಿ ಹಾಗೂ Uncapped Players ಎನ್ನುವ ಹಣೆಪಟ್ಟಿ ನೀಡಿ ಅವರಿಗೆ ವಾರ್ಷಿಕ ಗುತ್ತಿಗೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ಗುತ್ತಿಗೆ ಕಳೆದುಕೊಂಡ ಇಶಾನ್-ಅಯ್ಯರ್

ಮಧ್ಯಮ ಕ್ರಮಾಂಕದಲ್ಲಿ ಗಟ್ಟಿಯಾಗಿ ಬೇರೂರಿದ್ದಾರೆ ಎನ್ನುವ ಭರವಸೆ ಮೂಡಿಸಿದ್ದ ಯುವ ಆಟಗಾರರಾದ ಇಶಾನ್ ಕಿಶಾನ್, ತಮ್ಮ ಕ್ರಿಕೆಟ್ ಕೆರಿಯರ್ ನಲ್ಲಿ ಈಗಾಗಲೇ ಬಹಳಷ್ಟು ದಾಖಲೆ ನಿರ್ಮಿಸಿದ್ದಾರೆ. ಏಕದಿನ, ಟ್ವೆಂಟಿ, ಹಾಗೂ ಟೆಸ್ಟ್ ಈ ಮೂರೂ ಮಾದರಿಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದ ಈ ಬಿ ಗ್ರೇಡ್ ಗುತ್ತಿಗೆ ಹೊಂದಿದ್ದ ಆಟಗಾರರು ಒಮ್ಮಿಂದೊಮ್ಮೆಗೇ ಗುತ್ತಿಗೆ ಕಳೆದುಕೊಂಡಿದ್ದು ಹೇಗೆ? ಈ ಸ್ಟೋರಿ ಓದಿ.

BCCI Cricket Politics - Debated Annual Contract

ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಈ ಆಟಗಾರರು

ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಟವಾಡುವ ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ಕೆಲವೊಂದು ಷರತ್ತುಗಳನ್ನು ವಿಧಿಸಿರುತ್ತದೆ. ಯಾವುದೇ ಸಮಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲಿ ಅವಕಾಶ ದೊರೆಯದ ಸಮಯದಲ್ಲಿ ಅಥವಾ ಗಾಯಾಳುವಾಗಿ ಮತ್ತೆ ಚೇತರಿಸಿಕೊಂಡು ಮರಳಬೇಕಾದ ಸಮಯದಲ್ಲಿ, ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿ, ತಮ್ಮ ಫಿಟ್’ನೆಸ್ ಸಾಬೀತುಪಡಿಸುವುದರ ಜೊತೆಗೆ ಫಾರ್ಮ್ ನಲ್ಲಿ ಲಯ ಕಂಡುಕೊಳ್ಳುವಂತೆ ಈ ಷರತ್ತು ಅನ್ವಯಿಸುತ್ತದೆ. ಯಾವುದೇ ಗ್ರೇಡ್ ನ ಆಟಗಾರನಾದರೂ ಕೂಡ ಈ ರೂಲ್ಸ್ ಅನ್ವಯವಾಗುವ ಕಾರಣ ಪ್ರತಿಯೊಬ್ಬ ಆಟಗಾರರೂ ಕೂಡ ಸಕಾರಣವಿಲ್ಲದೇ ದೇಶೀಯ ಟೂರ್ನಿಗಳನ್ನು ಸ್ಕಿಪ್ ಮಾಡುವಂತಿಲ್ಲ. ಆದರೆ, ಇಶಾನ್ ಕಿಶಾನ್ ಮತ್ತು ಶ್ರೇಯಸ್ ಅಯ್ಯರ್ ಮಾಡಿದ್ದೇ ಬೇರೆ.

2023 ವಿಶ್ವಕಪ್ ನಲ್ಲಿ ತಂಡದಲ್ಲಿದ್ದರೂ ಅವಕಾಶ ಸಿಗದೆ ಮಂಕಾಗಿದ್ದ ಇಶಾನ್ ಕಿಶಾನ್, ತನ್ನ ಮಾನಸಿಕ ಸ್ಥಿತಿ ಸುಧಾರಿಸಿಕೊಳ್ಳಲು ಬಿಸಿಸಿಐ ಗೆ ಬಿಡುವು ಕೋರಿದ್ದರು ಹಾಗೂ ಅದಕ್ಕೆ ಬಿಸಿಸಿಐ ಸಮ್ಮತಿಸಿತ್ತು. ಆದರೆ ನಂತರದ ಯಾವುದೇ ಟೂರ್ನಿಗಳಿಗೆ ತಾನು ಲಭ್ಯರಿರುವುದನ್ನು ಖಚಿತಪಡಿಸದ ಇಶಾನ್, ಟೆಸ್ಟ್ ಸರಣಿಗಳನ್ನೂ ಆಡಿರಲಿಲ್ಲ. ಆದರೆ, ಈಗಾಗಲೇ ಇಂಜುರಿಯಿಂದ ಹೊರಗುಳಿದು ಚೇತರಿಸಿಕೊಳ್ಳುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೆ ಫಿಟ್ ನೆಸ್ ಜಿಮ್ ನಲ್ಲಿ ಅಭ್ಯಾಸ ಮಾಡಿತ್ತಿರುವ ವಿಡಿಯೋ ಹರಿದಾಡಿದ್ದು, ಸಕಾರಣವಿಲ್ಲದೇ ಅವಕಾಶಗಳನ್ನು ತಳ್ಳಿಹಾಕಿದ ಇಶಾನ್ ಕಿಶಾನ್ ವಿರುದ್ಧದ ಕ್ರಮಕ್ಕೆ ಬಿಸಿಸಿಐ ಅನ್ನು ಪ್ರೇರೇಪಿಸಿತ್ತು. ಈ ನಡುವೆ ಇಶಾನ್ ಸಾಥ್ ಕೊಟ್ಟ ಮತ್ತೊಬ್ಬ ಆಟಗಾರ ಶ್ರೇಯಸ್ ಅಯ್ಯರ್.

ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಈಗಾಗಲೇ ಬಹಳಷ್ಟು ಅತ್ಯುತ್ತಮ ಪ್ರದರ್ಶನ ನೀಡಿ, ನಾಯಕನಾಗಿಯೂ ಹೆಸರು ಗಳಿಸಿರುವ ಶ್ರೇಯಸ್ ಅಯ್ಯರ್, ಪ್ರಸ್ತುತ ಭಾರತದ ಮೂರೂ ಕ್ರಿಕೆಟ್ ಫಾರ್ಮ್ಯಾಟ್ ಗಳಲ್ಲಿ ನಾಲ್ಕನೇ ಕ್ರಮಾಂಕದ ಉತ್ತಮ ಆಟಗಾರನಾಗಿ ಗುರುತಿಸಿಕೊಂಡವರು. ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೂಡ, ಸೆಮಿಫೈನಲ್ ಮತ್ತು ಫೈನಲ್’ನಲ್ಲಿ ನಿರಾಸೆ ಮೂಡಿಸಿದ್ದ ಈ ಆಟಗಾರ ನಂತರದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ಕ್ರಮೇಣ ತನ್ನ ಫಾರ್ಮ್ ಅನ್ನು ಕಳೆದುಕೊಂಡರು. ಆದರೂ ಇವರ ಮೇಲೆ ಭರವಸೆಯಿಟ್ಟ ಬಿಸಿಸಿಐ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿತಾದರೂ, ಮೊದಲೆರಡು ಪಂದ್ಯಗಳಲ್ಲಿ ಕೇವಲ 30 ಕ್ಕಿಂತ ಕಡಿಮೆ ಮೊತ್ತಕ್ಕೆ ಶ್ರೇಯಸ್ ಅಯ್ಯರ್ ತನ್ನ ಸ್ಥಾನದ ಆಟವಾಡದೇ ವಿಫಲರಾದ ಕಾರಣ, ಇನ್ನುಳಿದ ಪಂದ್ಯಗಳಿಗೆ ಅವರನ್ನು ಕೈಬಿಡಲಾಗಿತ್ತು. ಈ ನಡುವೆ ಅವರ ಸ್ಥಾನಕ್ಕೆ ಬಂದ ಧ್ರುವ್ ಜುರೆಲ್ ಹಾಗೂ ಸರ್ಫರಾಜ್ ಖಾನ್, ಅತ್ಯುತ್ತಮ ಪ್ರದರ್ಶನ ನೀಡಿ ಭರವಸೆಯನ್ನು ಮೂಡಿಸಿದ್ದಾರೆ.

ಬಿಸಿಸಿಐ ಬಳಸಿದ ವಾರ್ಷಿಕ ಗುತ್ತಿಗೆಯ ಅಸ್ತ್ರ:

ಈ ನಡುವೆ ತನಗೆ ಬೆನ್ನುನೋವಿದೆ ಎಂದು ಕಾರಣ ಹೇಳಿ ಟೂರ್ನಿಯಿಂದ ಬ್ರೇಕ್ ತೆಗೆದುಕೊಂಡ ಶ್ರೇಯಸ್ ಅಯ್ಯರ್ ಅವರಿಗೆ ಎನ್.ಸಿ.ಎ ಕೆಲವೊಂದು ಪರೀಕ್ಷೆಗಳನ್ನು ನಡೆಸಿ, ಅವರಿಗೆ ಯಾವುದೇ ಬೆನ್ನುನೋವಿನ ಸಮಸ್ಯೆ ಇಲ್ಲದಿರುವುದನ್ನು ಖಚಿತಪಡಿಸಿತ್ತು. ಆದರೆ, ಫಿಟ್ ಎಂದು ಸಾಬೀತಾದ ಮೇಲೆಯೂ ಕೂಡ, ಯಾವುದೇ ರಣಜಿ ಮತ್ತು ದೇಶೀಯ ಟೂರ್ನಿಗಳಿಗೆ ಲಭ್ಯರಿಲ್ಲದೇ ಹಾಗೂ ಗುಟ್ಟಾಗಿ ತನ್ನ ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಾಲೀಮು ಸ್ಥಳಕ್ಕೆ ಭೇಟಿ ನೀಡಿ ಸುಳ್ಳು ಹೇಳಿದರೆನ್ನುವ ಪರಿಣಾಮ, ಶ್ರೇಯಸ್ ಅಯ್ಯರ್ ಅವರ ಮೇಲೆಯೂ ಕ್ರಮಕ್ಕೆ ಬಿಸಿಸಿಐ ಮುಂದಾಯಿತು. ಆಗ ಸಿಕ್ಕ ಅಸ್ತ್ರ ವಾರ್ಷಿಕ ಗುತ್ತಿಗೆ.

BCCI Cricket Politics - Debated Annual Contract

ದೇಶೀಯ ಕ್ರಿಕೆಟ್ ಟೂರ್ನಿಯನ್ನು ತಪ್ಪಿಸಿಕೊಂಡ ಈ ಇಬ್ಬರೂ ಆಟಗಾರರಿಗೆ ಅವರವರ ಶ್ರೇಣಿಯ ಗುತ್ತಿಗೆಯನ್ನಷ್ಟೇ ಅಲ್ಲದೇ, ವಾರ್ಷಿಕ ಗುತ್ತಿಗೆಯನ್ನೇ ತುಂಡರಿಸಿದ ಬಿಸಿಸಿಐ, ಈ ಕ್ರಮದ ಮೂಲಕ ಉಳಿದೆಲ್ಲಾ ಆಟಗಾರರಿಗೆ ಎಚ್ಚರಿಕೆಯನ್ನು ರವಾನಿಸಿದೆ. ಯಾವುದೇ ಕಾರಣಕ್ಕೂ, ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ನಗಣ್ಯವಾಗಿ ಪರಿಗಣಿಸುವಂತಿಲ್ಲ ಎಂದು ಆದೇಶಿಸಿದೆ.

ಈ ಬೆಳವಣಿಗೆಯ ನಂತರ ಶ್ರೇಯಸ್ ಅಯ್ಯರ್, ಮುಂಬೈ ತಂಡದ ಪರವಾಗಿ ತಮಿಳುನಾಡು ವಿರುದ್ಧದ ಸೆಮಿಫೈನಲ್ ಗೆ ಲಭ್ಯರಿರುವುದನ್ನು ಘೋಷಿಸಿಕೊಂಡು, ಪಂದ್ಯವನ್ನೂ ಆಡಿದ್ದಾರೆ. ಆದರೆ, ಓಂದಂಕಿಯ ಮೊತ್ತಕ್ಕೆ ಔಟಾಗಿ ಮತ್ತೆ ಫಾರ್ಮ್ ನಲ್ಲಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಆದರೆ, ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಇಶಾನ್ ಕಿಶಾನ್ ಯಾವುದೇ ಟೂರ್ನಿಗೆ ಲಭ್ಯರಿಲ್ಲದ್ದು, ಕ್ರಿಕೆಟ್ ಪ್ರಿಯರಲ್ಲಿ ಬಹಳಷ್ಟು ಗೊಂದಲಗಳನ್ನು ಹುಟ್ಟುಹಾಕಿದೆ.

ಬಿಸಿಸಿಐ ನ ಈ ಕ್ರಮದ ಕುರಿತು ಸಾಕಷ್ಟು ಪರ-ವಿರೋಧ ಚರ್ಚೆಗಳು ವ್ಯಕ್ತವಾದರೂ, ಕ್ರಮ ಸರಿಯಾಗಿಯೇ ಇದೆ ಎನ್ನುವ ಅಭಿಪ್ರಾಯವನ್ನು ಬಹಳಷ್ಟು ಕ್ರಿಕೆಟ್ ದಿಗ್ಗಜರು ವ್ಯಕ್ತಪಡಿಸಿದ್ದಾರೆ.

ಏನೇ ಇರಲಿ, ಕ್ರಿಕೆಟ್ ಅಥವಾ ಯಾವುದೇ ಗೇಮ್ ಅನ್ನು ಸೀರಿಯಸ್ ಆಗಿ ಪರಿಗಣಿಸದ ಆಟಗಾರರಿಗೆ ಈ ನಡೆ ಎಚ್ಚರಿಕೆಯ ಘಂಟೆಯಾಗಿ ಪರಿಣಮಿಸಿರುವುದಂತೂ ಸತ್ಯ.

You might also like
Leave A Reply

Your email address will not be published.