ಅಂತರ್ ಜಾತೀಯ ವಿವಾಹ – ಬೆಂಗಳೂರು ಮುಂದೆ, ಮೈಸೂರು ಅದರ ಹಿಂದೆ

ಜಾತಿರಹಿತ ಸಮಾಜ ನಿರ್ಮಿಸುವಲ್ಲಿ ಅಂತರ್ ಜಾತಿ ವಿವಾಹಗಳು ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ಕಾರ ಕೂಡ ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತ ಬಂದಿದ್ದಲ್ಲದೇ, ಈ ರೀತಿಯ ಮದುವೆಗಳನ್ನು ಉತ್ತೇಜಿಸುವ ಸಲುವಾಗಿ ಪ್ರೋತ್ಸಾಹಧನವನ್ನು ಕೊಡುತ್ತಿದೆ. ಅಂತರ್ಜಾತಿ ವಿವಾಹಗಳಲ್ಲಿ ಬೆಂಗಳೂರಿನ ನಂತರ ಸಾಂಸ್ಕೃತಿಕ ರಾಜಧಾನಿ ಮೈಸೂರು ಎರಡನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಶ್ರೇಣಿಕೃತ ಸಮಾಜ ವ್ಯವಸ್ಥೆಯ ಭಾರತದಲ್ಲಿ ಪರಜಾತಿಯ ವಿವಾಹದ ಬಗ್ಗೆ ಬಹಳ ಹಿಂದಿನಿಂದಲೂ ನಕರಾತ್ಮಕ ಮನೋಭಾವವೇ ಮನೆ ಮಾಡಿಕೊಂಡಿತ್ತು. ಜಗತ್ತು ಆಧುನಿಕತೆಯತ್ತ ತೆರೆದುಕೊಂಡು ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಕ್ರಾಂತಿ ಉಂಟಾಗುತ್ತಿದ್ದಂತೆಯೇ ಅಂತರ್ ಜಾತಿ ವಿವಾಹ ವರ್ಜ್ಯ ಅಲ್ಲ ಎನ್ನುವ ಸ್ವೀಕಾರಾರ್ಹ ಗುಣ ಕಾಣಿಸಿಕೊಳ್ಳುತ್ತಿರುವುದು ಇತ್ತೀಚಿನ ದಶಕಗಳಲ್ಲಿ ಉಂಟಾಗುತ್ತಿರುವ ಬೆಳವಣಿಗೆ ಆಗಿದೆ.

ಕಾಲಕಾಲಕ್ಕೆ ಸರ್ಕಾರದಿಂದ ನಡೆಯುವ ಜಾಗೃತಿ ಕಾರ್ಯಕ್ರಮಗಳು ಸಾಕಷ್ಟು ಪರಿಣಾಮ ಬೀರುತ್ತಿದ್ದು, ಯುವ ಜೋಡಿಗಳು ಜಾತಿಯ ಎಲ್ಲೆ ಮೀರಿ ವಿವಾಹ ಬಂಧನಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಈ ವಿಷಯದಲ್ಲಿ ಪೋಷಕರು ಕೂಡ ಮೆದುವಾಗುತ್ತಿರುವುದು ಅಂತರ್ ಜಾತಿಯ ವಿವಾಹಗಳ ಸಂಖ್ಯೆ ವೃದ್ಧಿಸುತ್ತಿರುವುದಕ್ಕೆ ಕಾರಣವಾಗಿದೆ.

ಹೆಚ್ಚುತ್ತಿರುವ ಅಂತರ್ ಜಾತಿ ವಿವಾಹ: ಅಂಕಿ-ಅಂಶಗಳೆಷ್ಟು?

2023-24 ರಲ್ಲಿ, ಮೈಸೂರು ಜಿಲ್ಲೆ 242 ಅಂತರ್ಜಾತಿ ವಿವಾಹಗಳಾಗಿದ್ದು 2ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 720 ಜೋಡಿ ಅಂತರ್ಜಾತೀಯ ವಿವಾಹ ನಡೆದಿದೆ. 2022-23ರಲ್ಲಿ ಮೈಸೂರಿನಲ್ಲಿ 253 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದವು. ಅದಾದ ನಂತರ ಸಂಖ್ಯೆಯಲ್ಲಿ ಸ್ವಲ್ಪ ಏರಿಳಿತಗಳು ಕಂಡುಬಂದಿತ್ತು. 2021-22ರಲ್ಲಿ 226 ಅಂತರ್ ಜಾತಿಯ ವಿವಾಹವಾಗಿದ್ದರೇ 2020-21ರಲ್ಲಿ 217 ಜೋಡಿ ವಿವಾಹವಾಗಿತ್ತು. ಇನ್ನೂ ಡಿಸೆಂಬರ್ 2023 ರ ವೇಳೆಗೆ ಒಟ್ಟು 90 ಜೋಡಿಗಳು 2.48 ಕೋಟಿ ಪ್ರೋತ್ಸಾಹ ಧನವನ್ನು ಪಡೆದಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

Intercaste Marriage

ಪ್ರೋತ್ಸಾಹಧನ ಎಷ್ಟು?

ಅನ್ಯ ಜಾತಿಯ ಪುರುಷನನ್ನು ಮದುವೆಯಾದ ಪರಿಶಿಷ್ಟ ಜಾತಿಯ ಮಹಿಳೆಯರಿಗೆ 3 ಲಕ್ಷ ರೂ., ಇತರೆ ಜಾತಿಯ ಹುಡುಗಿಯನ್ನು ಮದುವೆಯಾದ ಎಸ್‌ಸಿ ಪುರುಷನಿಗೆ 2.5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ಮೈಸೂರು ತಾಲೂಕಿನಲ್ಲಿ ಈ ವರ್ಷ ಅಂತರ್ಜಾತಿ ವಿವಾಹವಾದ ದಂಪತಿಗಳಿಂದ ಪ್ರೋತ್ಸಾಹಧನಕ್ಕಾಗಿ ಇಲಾಖೆಯು 143 ಹೊಸ ಅರ್ಜಿಗಳನ್ನು ಸ್ವೀಕರಿಸಿದೆ. ಹಿರಿತನದ ಆಧಾರದ ಮೇಲೆ ಪ್ರೋತ್ಸಾಹಧನ ಹಂಚಿಕೆ ಮಾಡಲಾಗುವುದು. ಈ ಮೊತ್ತವನ್ನು ದಂಪತಿಗಳ ಜಂಟಿ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

ಆದರೆ, ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹ, ವಿಧವಾ ಮರು ವಿವಾಹ ಹಾಗೂ ಸರಳ ವಿವಾಹ ಪ್ರಕರಣಗಳು ಕಡಿಮೆಯಾಗಿವೆ. ಅಂತರ್ಜಾತಿ ವಿವಾಹಕ್ಕೆ 13 ಅರ್ಜಿಗಳು ಬಂದಿದ್ದರೆ, ವಿಧವಾ ಮರು ವಿವಾಹಕ್ಕೆ ಕೇವಲ ಒಂದು ಮತ್ತು ಸರಳ ವಿವಾಹಕ್ಕೆ 19 ಅರ್ಜಿಗಳು ಬಂದಿವೆ. ಅಂಕಿಅಂಶಗಳ ಪ್ರಕಾರ, ಒಂಬತ್ತು ಜೋಡಿಗಳು ಅಂತರ್ಜಾತಿ ವಿವಾಹಕ್ಕೆ 18 ಲಕ್ಷ ರೂ., ಆರು ಜೋಡಿಗಳು ಮರು ವಿವಾಹಕ್ಕಾಗಿ ರೂ. 18 ಲಕ್ಷ ಪಡೆದಿದ್ದರೆ, 32 ಜೋಡಿಗಳು ಡಿಸೆಂಬರ್ 2023 ರ ಅಂತ್ಯದವರೆಗೆ ಸರಳ ವಿವಾಹಕ್ಕಾಗಿ ರೂ. 16 ಲಕ್ಷ ಪ್ರೋತ್ಸಾಹಧನ ಪಡೆದಿದ್ದಾರೆ. ಮಾನವ ಮಂಟಪ ಕನ್ನಡ ಕವಿ ಕುವೆಂಪು ಅವರು ಪ್ರತಿಪಾದಿಸಿದ ಪರಿಕಲ್ಪನೆಯಂತೆ ಯಾವುದೇ ವೈದಿಕ ಆಚರಣೆಗಳು ಅಥವಾ ಸಂಸ್ಕೃತ ಶ್ಲೋಕಗಳ ಪಠಣವಿಲ್ಲದೆ ಅಂತರ್ಜಾತಿ ವಿವಾಹಗಳಿಗೆ ವೇದಿಕೆಯಾಗಿದೆ.

ದೇಶದಲ್ಲೇ ಅತಿ ಹೆಚ್ಚು ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹ ಮಾಡಿಸಿದ ಹೆಗ್ಗಳಿಕೆಗೆ ಪಾತ್ರವಾದ ಮಾನವ ಮಂಟಪ:

2006ರ ಜೂನ್‌ನಲ್ಲಿ ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸಲು, ಅಂತಹ ವಿವಾಹಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಪೊಲೀಸರಿಂದ ದಂಪತಿಗಳಿಗೆ ರಕ್ಷಣೆ ನೀಡುವಂತೆ ಎಲ್ಲಾ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿತ್ತು. ಮಾನವ ಮಂಟಪವು 27 ವರ್ಷಗಳಲ್ಲಿ ಸುಮಾರು 900 ವಿವಾಹ ಮಾಡುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳನ್ನು ನಡೆಸಿದೆ ಎಂದು ಮಾನವ ಮಂಟಪದ ಸಂಸ್ಥಾಪಕ ಉಗ್ರನರಸಿಂಹೇಗೌಡ ತಿಳಿಸಿದರು.

You might also like
Leave A Reply

Your email address will not be published.