ಟೆಸ್ಟ್ ಕ್ರಿಕೆಟ್ – ಆಂಗ್ಲರ ವಿರುದ್ಧ ಭಾರತಕ್ಕೆ ಭರ್ಜರಿ ವಿಜಯ

ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್‌ ಪಂದ್ಯವನ್ನು ಟೀಂ ಇಂಡಿಯಾ 106 ರನ್’ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಗೆಲ್ಲಲು 399 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್‌ 69.2 ಓವರ್‌ಗಳಲ್ಲಿ 292 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಅಂಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದೆ.

5 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಮೂರನೇ ದಿನ 1 ವಿಕೆಟ್‌ ನಷ್ಟಕ್ಕೆ 67 ರನ್‌ಗಳಿಸಿದ್ದ ಇಂಗ್ಲೆಂಡ್‌ ಉಳಿದ 9 ವಿಕೆಟ್‌ಗಳಿಂದ 188 ರನ್‌ಗಳಿಸಿ ಸರ್ವಪತನಗೊಂಡಿತು. ಆರಂಭಿಕ ಆಟಗಾರ ಝಾಕ್ ಕ್ರಾಲಿ 73 ರನ್‌ (132 ಎಸೆತ, 8 ಬೌಂಡರಿ, 1 ಸಿಕ್ಸರ್)‌ ಹೊಡೆದರೆ ಕೊನೆಯಲ್ಲಿ ಬೆನ್‌ ಫೋಕ್ಸ್‌ 36 ರನ್‌, ಟಾಮ್‌ ಹಾರ್ಟ್ಲಿ 36 ರನ್‌ ಹೊಡೆಯುವ ಮೂಲಕ ಸ್ವಲ್ಪ ಪ್ರತಿರೋಧ ತೋರಿದರು.

ಬುಮ್ರಾ 46 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ರವಿಚಂದ್ರನ್‌ ಅಶ್ವಿನ್‌ 75 ರನ್‌ ನೀಡಿ 3 ವಿಕೆಟ್‌ ಕಿತ್ತರು. ಮುಕೇಶ್‌ ಕುಮಾರ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಮೂರನೇ ಟೆಸ್ಟ್‌ ಪಂದ್ಯ ರಾಜ್‌ಕೋಟ್‌ನಲ್ಲಿ ಫೆ.15 ರಿಂದ ಆರಂಭವಾಗಲಿದೆ.

ಎರಡನೇ ಸ್ಥಾನಕ್ಕೆ ಜಿಗಿತ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಂಕ ಪಟ್ಟಿಯಲ್ಲಿ ಭಾರತ ಈಗ ಎರಡನೇ ಸ್ಥಾನಕ್ಕೆ ಜಿಗಿದಿದೆ. 6 ಪಂದ್ಯಗಳಿಂದ ಭಾರತ 38 ಅಂಕ ಕಲೆ ಹಾಕಿದ್ದರೆ ಆಸ್ಟ್ರೇಲಿಯಾ 10 ಪಂದ್ಯಗಳಿಂದ 66 ಅಂಕ ಕಲೆ ಹಾಕಿ ಮೊದಲ ಸ್ಥಾನ ಪಡೆದಿದೆ.

ಸಂಕ್ಷಿಪ್ತ ಸ್ಕೋರ್

• ಭಾರತ ಮೊದಲ ಇನ್ನಿಂಗ್ಸ್ 396/10
• ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್ 253/10
• ಭಾರತ ಎರಡನೇ ಇನ್ನಿಂಗ್ಸ್ 255/10
• ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 292/10

You might also like
Leave A Reply

Your email address will not be published.