ನೀರಿಲ್ಲಾ…. ನೀರಿಲ್ಲಾ…. ಬೆಂಗಳೂರಿನಲ್ಲಿ ನೀರಿಲ್ಲ

ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ನಾಡಿನ ಜಲಾಶಯಗಳಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅಲ್ಲದೇ ವಾಡಿಕೆ ಪ್ರಮಾಣದಲ್ಲಿ ಮಳೆಯಾಗದ ಕಾರಣ ಅಂತರ್ಜಲ ಮಟ್ಟವು ಕುಸಿಯುತ್ತಿದೆ. ಜಲಮಂಡಳಿಗಳು ವಾರಕ್ಕೊಮ್ಮೆ ಇಲ್ಲ ಹದಿನೈದು ದಿನಕ್ಕೊಮ್ಮೆ ಕುಡಿಯುವ ನೀರು ಬಿಡುತ್ತಿದ್ದು, ಬೆಂಗಳೂರಿನ ಹಲವೆಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಈಗಾಗಲೇ ಬೀಗ ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಬೋರ್ ವೆಲ್ನಲ್ಲಿ ನೀರಿನ ಮಟ್ಟ ಕುಸಿದ ನಿಟ್ಟಿನಲ್ಲಿ ಯಶವಂತಪುರ, ಕೆಂಗೇರಿ ಸೇರಿದಂತೆ ಸುತ್ತಮುತ್ತಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಈಗಾಗಲೇ ಬಂದ್ ಮಾಡಲಾಗಿದ್ದು, ನೀರಿಗಾಗಿ ಜನರು ಟ್ಯಾಂಕರ್ಗಳ ಮೊರೆ ಹೋಗುತ್ತಿದ್ದಾರೆ ಎಂದು ಖುದ್ದಾಗಿ ಅಧಿಕಾರಿಗಳೇ ತಿಳಿಸಿದ್ದಾರೆ.

ಕೆ‌ಆರ್‌ಎಸ್ ನಿಂದ ನೀರು ಸರಬರಾಜು ಆಗುತ್ತೆ. ಪ್ರತಿ ತಿಂಗಳಿಗೆ 1.5 ಟಿಎಂಸಿ ನೀರು ಬೇಕು. ಈಗಾಗಲೇ ಬೆಂಗಳೂರು ಜಲಮಂಡಳಿ ಕಾವೇರಿ ನಿಗಮಕ್ಕೆ 2.4 ರಿಂದ 2.5 ಟಿಎಂಸಿ ನೀರು ಬೇಡಿಕೆಗೆ ಪತ್ರ ಬರೆದಿದೆ. ಆದರೆ, ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಕೆ‌ಆರ್‌ಎಸ್‌ನಲ್ಲಿ ಸದ್ಯ 18 ಟಿಎಂಸಿ ನೀರು ಇದೆ. ಜಲಾಶಯದಲ್ಲಿ 8 ಟಿಎಂಸಿ ಡೆಡ್ ಸ್ಟೋರೆಜ್ ನೀರು ಕಾಯ್ದಿರಿಸಲೇಬೇಕು. ಇನ್ನುಳಿದ 10 ಟಿಎಂಸಿ ನೀರು ಬೆಂಗಳೂರು ಹಾಗೂ ತಮಿಳುನಾಡಿಗೂ ಹೋಗಬೇಕು.

ನೀರಿನ ಬೇಡಿಕೆಗೆ ಹೆಚ್ಚಿದ ಟ್ಯಾಂಕರ್ ಬೆಲೆ:

ಮಾಲೀಕರು ಒಂದು ಟ್ಯಾಂಕರ್’ಗೆ ಈ ಹಿಂದೆ 400 ರಿಂದ 500 ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಆದರೆ, ಇದೀಗ ನೀರಿನ ಬೇಡಿಕೆ ಹೆಚ್ಚಿದ ಹಿನ್ನೆಲೆ 800 ರಿಂದ 1 ಸಾವಿರ ರೂಪಾಯಿವರೆಗೆ ದುಡ್ಡು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಟ್ಯಾಂಕರ್’ನವರಿಗೆ ಇವತ್ತು ಕರೆ ಮಾಡಿದರೆ ನಾಳೆ ತಂದು ಸಂಪ್’ಗಳಿಗೆ ನೀರು ಬಿಡುತ್ತಾರೆ. ಕೇಳಿದ ಸಮಯಕ್ಕೆ ಇಲ್ಲೂ ನೀರು ಕೊಡದ ಕಾರಣ, ನೀರಿನ ಅಭಾವ ಹೆಚ್ಚಾಗಿದೆ.

Drinking water crisis- In Bengaluru, there's no water to drink.

ಗ್ಯಾರೆಂಟಿ ಯೋಜನೆ ಬೇಡ; ನೀರು ಬೇಕು – ಮಹಿಳೆಯರ ತೀರ್ಮಾನ

ಬೆಂಗಳೂರಿನಲ್ಲಿ ಬೇಸಿಗೆಗೂ ಮುನ್ನವೇ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರಸ್ತುತ ಒಂದು ಟ್ಯಾಂಕರ್ ನೀರಿಗೆ 800 ರಿಂದ 1 ಸಾವಿರ ರೂ. ಇದ್ದು ಮುಂದೆ ಇನ್ನಷ್ಟು ಬೆಲೆ ಏರಿಕೆ ಆದರೆ ನಮ್ಮಂತಹ ಮಧ್ಯಮ ಮತ್ತು ಬಡ ಕುಟುಂಬದವರು ಎಲ್ಲಿಗೆ ಹೋಗುವುದು? ಸರ್ಕಾರ ಕೊಡುವ ಗ್ಯಾರಂಟಿ ಬೇಡ. ನಮಗೆ ನೀರು ಬೇಕು ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ ಮಹಿಳೆಯರು.

ಬೆಂಗಳೂರು ನಗರ ತಾಲೂಕುಗಳಲ್ಲೂ ಅಂತರ್ಜಲ ಮಟ್ಟ ಕುಸಿತ

ಬೆಂಗಳೂರು ನಗರ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕಳೆದ ಕೆಲವು ತಿಂಗಳುಗಳಿಂದ ನಗರದ ಹಲವು ಬೋರ್’ವೆಲ್‌ಗಳು ಬತ್ತಿ ಹೋಗಿರುವುದರಿಂದ ನಗರದ ಹಲವು ಪ್ರದೇಶಗಳು ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಅಂಕಿ-ಅಂಶಗಳ ಪ್ರಕಾರ, ಆನೇಕಲ್‌ನಲ್ಲಿ ಸುಮಾರು 7.42 ಮೀಟರ್, ಯಲಹಂಕದಲ್ಲಿ 7.31 ಮೀಟರ್, ಬೆಂಗಳೂರು ಪೂರ್ವದಲ್ಲಿ 5.81 ಮೀಟರ್ ಮತ್ತು ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರದಲ್ಲಿ ಒಂದು ಮೀಟರ್‌ಗಿಂತ ಕಡಿಮೆ ಅಂತರ್ಜಲ ಕುಸಿದಿದೆ.

Drinking water crisis- In Bengaluru, there's no water to drink.

ಈ ಕುರಿತು ನೀರಿನ ತಜ್ಞರು ಹೇಳಿದ್ದೇನು?

ಬೆಂಗಳೂರು ಹಿಂದಿನಿಗಿಂತ ಈ ಬಾರಿ ಹೆಚ್ಚು ನೀರಿನ ತೊಂದರೆ ಅನುಭವಿಸುತ್ತಿದೆ. ತೀವ್ರವಾದ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಒಂದು ಸಾವಿರ ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಇನ್ನೂ ಸಾವಿರ ಅಡಿಗಳಲ್ಲಿ ಸಿಗುವ ನೀರು ಅತ್ಯಂತ ಗಡಸು. ಇದರಲ್ಲಿ ಕ್ಯಾಲ್ಸಿಯಂ, ಮ್ಯಾಗ್ನೆಶೀಯಂ, ಆರ್ಸೆನಿಕ್, ಫ್ಲೋರೈಡ್ ಸೇರಿ ವಿವಿಧ ಖನಿಜಾಂಶಗಳ ಪ್ರಮಾಣ ಹೆಚ್ಚಾಗಿರುವುದರಿಂದ ನೀರು ಕುಡಿಯೋದಕ್ಕೆ ಸೂಕ್ತವಲ್ಲ.

ಸರಿಯಾಗಿ ಮಳೆ‌ ಆಗುತ್ತಿಲ್ಲವಾದ್ದರಿಂದ ಪ್ರತಿ ವರ್ಷ ಅಂತರ್ಜಲ ಮಟ್ಟ ಕುಸಿತ ಕಾಣುತ್ತಿದೆ. ಅಲ್ಲದೇ ಕಾಂಕ್ರೀಟ್ ರಸ್ತೆಗಳು, ಕೆರೆಗಳ ಒತ್ತುವರಿ ಹಾಗೂ ಕೊಳಚೆ ನೀರು ಹೆಚ್ಚಾಗುತ್ತಿರುವುದರಿಂದ ನೀರಿನಲ್ಲಿ‌ ಕೆಮಿಕಲ್ ಅಂಶ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಹೆಚ್ಚಾಗಿ ಬೋರ್‌ವೆಲ್‌ಗಳು ಕೊರೆದಿರುವುದು ಕೂಡ ನೀರಿನ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗಿದೆ. ಹೀಗಿರುವಾಗ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರಿಗಾಗಿ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಜಲಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಈ ಬಾರಿ ಬೇಸಿಗೆಗೆ ನೀರಿನ ಕಂಟಕ ಎದುರಾಗಲಿದೆ ಎನ್ನುತ್ತಾರೆ ತಜ್ಞರು.

You might also like
Leave A Reply

Your email address will not be published.