ವಿದ್ಯುತ್ ಬಿಲ್ ಹೆಸರಲ್ಲಿ ಸೈಬರ್ ವಂಚಕರು ನಿಮ್ಮ ಖಾತೆಗಳಿಗೆ ಕನ್ನ ಹಾಕಬಹುದು, ಎಚ್ಚರವಿರಲಿ! ವಿವರ ಇಲ್ಲಿದೆ ನೋಡಿ

ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರು ಆನ್’ಲೈನ್’ಗೆ ಅವಲಂಬಿತರಾಗಿರುವುದರಿಂದ ಎ.ಟಿ.ಎಂ ಕಾರ್ಡ್, ಕ್ರೆಡಿಟ್ ಕಾರ್ಡ್, ಪಾವತಿ ವೆಬ್’ಸೈಟ್ ಸೇವಾಕೇಂದ್ರಗಳ ಮೂಲಕ ಬಿಲ್’ಗಳನ್ನು ಪಾವತಿಸುವ ಸುಲಭ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

ಆನ್’ಲೈನ್ ಪಾವತಿ ವಿಧಾನಗಳನ್ನು ಬಳಸುವಾಗ ಕೆಲವು ಎಚ್ಚರಿಕಾ ಕ್ರಮಗಳು ಅತ್ಯಗತ್ಯವಾಗಿದೆ. ವಿದ್ಯುತ್ ಬಿಲ್ ಪಾವತಿಸಲು ಆನ್’ಲೈನ್ ವಿಧಾನಗಳನ್ನು ಅನುಸರಿಸುವ ಗ್ರಾಹಕರ ಖಾತೆಗಳಿಗೆ ಕನ್ನ ಹಾಕುವ ಸೈಬರ್ ವಂಚಕರ ಜಾಲ ವ್ಯಾಪಕವಾಗಿ ಹೆಚ್ಚಿದೆ.

ಬೆಸ್ಕಾಂನ ಅಧಿಕಾರಿಗಳ ಸೋಗಿನಲ್ಲಿ ಕರೆಮಾಡುವ ವಂಚಕರು:

ತಾವು ಬೆಸ್ಕಾಂನ ಅಧಿಕಾರಿಗಳು ಎಂದು ಹೇಳಿಕೊಂಡು, ಅಪರಿಚಿತ ಸಂಖ್ಯೆಗಳಿಂದ ಗ್ರಾಹಕರಿಗೆ ಕರೆಮಾಡಿ, ‘ನೀವು ವಿದ್ಯುತ್ ಬಿಲ್ ಪಾವತಿಸಿಲ್ಲ ಹಾಗೂ ಕೂಡಲೇ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ’ ಎನ್ನುವ ಬೆದರಿಕೆ ಹಾಕುತ್ತಾರೆ. ಅನಂತರ ಗ್ರಾಹಕರ ಮೊಬೈಲ್ ಸಂಖ್ಯೆಗೆ ಓಟಿಪಿಯನ್ನು ಕಳುಹಿಸಿ, ಆ ಓಟಿಪಿ ಮೂಲಕ ಗ್ರಾಹಕರ ಖಾತೆಗೆ ಸುಲಭವಾಗಿ ಕನ್ನ ಹಾಕುತ್ತಾರೆ.

ಸೈಬರ್ ವಂಚನೆಯ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸುವಲ್ಲಿ ಬಹಳಷ್ಟು ಪ್ರಯತ್ನಗಳನ್ನು ಬೆಸ್ಕಾಂ ಮಾಡುತ್ತಿದ್ದರೂ ಸಹ ಸೈಬರ್ ವಂಚಕರ ಜಾಲಕ್ಕೆ ಗ್ರಾಹಕರು ಬಲಿಯಾಗುತ್ತಿದ್ದಾರೆ. ಬೆಸ್ಕಾಂನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್ ವಂಚಕರು ಕನ್ನ ಹೇಗೆ ಹಾಕುತ್ತಾರೆ, ಇದರಿಂದಾಗುವ ಅನಾನುಕೂಲಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಪ್ರತಿದಿನವೂ ಪೋಸ್ಟ್ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರು ಎಚ್ಚೆತ್ತುಕೊಂಡು ಸೈಬರ್ ವಂಚಕರಿಂದ ಮೋಸ ಹೋಗದಿರಲಿ ಎಂಬ ಆಶಯವಿದೆ.

ಯಾವುದೇ ಸೈಬರ್ ವಂಚನೆಗೆ ಒಳಗಾದಲ್ಲಿ ಕೂಡಲೇ ಸೈಬರ್ ಸಹಾಯವಾಣಿ ಸಂಖ್ಯೆ 112ಗೆ ಕರೆಮಾಡಿ ತಿಳಿಸಿ ಅಥವಾ ಬೆಸ್ಕಾಂನ ಸಹಾಯವಾಣಿ ಸಂಖ್ಯೆ 1912ಗೆ ಕರೆಮಾಡಿ ತಿಳಿಸಿ. ವಂಚನೆಗೆ ಒಳಗಾದ ನಂತರದ ಎರಡು ಗಂಟೆಯನ್ನು ‘GOLDEN HOUR’ ಎಂದು ಪರಿಗಣಿಸಲಾಗುತ್ತದೆ. ಆ ಎರಡು ಗಂಟೆಯ ಒಳಗೆ ಗ್ರಾಹಕರು ಪ್ರಕರಣವನ್ನು ವರದಿ ಮಾಡಿದಲ್ಲಿ, ಗ್ರಾಹಕರಿಗೆ ಕಳೆದುಕೊಂಡ ಮೊತ್ತ ಹಿಂದಿರುಗಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

Beware! Cybercriminals have the ability to steal your accounts under the guise of an electricity bill. View information here.

ಸೈಬರ್ ವಂಚಕರು ಹೇಗೆ ಕನ್ನ ಹಾಕುತ್ತಾರೆ?

– ಗ್ರಾಹಕರಿಗೆ ಕರೆಮಾಡಿ ಓಟಿಪಿ/ಪಾಸ್’ವರ್ಡ್’ಗಳನ್ನು ಪಡೆದು, ಖಾತೆಗೆ ಕನ್ನ ಹಾಕುವುದು.
– ವಿದ್ಯುತ್ ಬಿಲ್ ಪಾವತಿಸಿಲ್ಲ ಎನ್ನುವ ಸಂದೇಶವನ್ನು ಅಪರಿಚಿತ ಮೂಲಗಳಿಂದ ಕಳುಹಿಸಿ, ಅವರ ವೈಯುಕ್ತಿಕ ಮೊಬೈಲ್ ಸಂಖ್ಯೆಗೆ ಪಾವತಿಸುವಂತೆ ಬೇಡಿಕೆಯಿಡುತ್ತಾರೆ.
– ಅಧಿಕಾರಿಗಳ ನೆಪದಲ್ಲಿ ವೈಯುಕ್ತಿಕ ದಾಖಲೆಗಳನ್ನು ಪಡೆದು, ಗ್ರಾಹಕರ ಅಧಿಕೃತ ದಾಖಲೆಗಳನ್ನು ಕದಿಯುವುದು, ಇತ್ಯಾದಿ.

ಸೈಬರ್ ವಂಚನೆಯನ್ನು ತಡೆಗಟ್ಟುವ ವಿಧಾನಗಳು:
– ಅಪರಿಚಿತರಿಗೆ ನಿಮ್ಮ ವೈಯುಕ್ತಿಕ ಪಾಸ್’ವರ್ಡ್’ಗಳನ್ನು ನೀಡದಿರುವುದು.
– ಅಪರಿಚಿತ ಲಿಂಕ್, ಸಂದೇಶಗಳಿಗೆ ಪ್ರತಿಕ್ರಿಯಿಸದಿರುವುದು.
– ವೈಯುಕ್ತಿಕ ದಾಖಲೆಗಳನ್ನು, ಪಾಸ್’ವರ್ಡ್’ಗಳನ್ನು ಅಪರಿಚಿತರಿಗೆ ನೀಡದಿರುವುದು, ಇತ್ಯಾದಿ.
– ವೈಯುಕ್ತಿಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಿರುವುದು.

ಸೈಬರ್ ವಂಚನೆಯ ಕುರಿತಾದ ಜಾಹಿರಾತುಗಳನ್ನು ನೋಡಲು ಬೆಸ್ಕಾಂನ ಅಧಿಕೃತ ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡಿ.

ಸಾಮಾಜಿಕ ಜಾಲತಾಣಗಳು:

ಫೇಸ್ ಬುಕ್ ಖಾತೆ – https://www.facebook.com/bescomblr
ಎಕ್ಸ್ ಖಾತೆ –  https://twitter.com/NammaBESCOM
ಇನ್ಸ್ಟಾಗ್ರಾಮ್ ಖಾತೆ –  https://www.instagram.com/namma_bescom/

ಸೈಬರ್ ಪ್ರಕರಣಗಳಿಗೆ ಒಳಗಾಗದಿರಿ, ಸುರಕ್ಷಿತವಾಗಿರಿ.

You might also like
Leave A Reply

Your email address will not be published.