ಡಿಕೆಶಿಗೆ ಬೆನ್ನುಬಿಡದ ಸಂಕಷ್ಟಗಳ ಸರಮಾಲೆ : ಹೈಕೋರ್ಟ್‌ ಮೆಟ್ಟಿಲೇರಿದ ಸಿಬಿಐ

ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿಕೆ ಶಿವಕುಮಾರ್‌ (DK Shivakumar) ಅವರು ನಿಟ್ಟುಸಿರು ಬಿಡುವ ಸಮಯದಲ್ಲಿಯೇ ಮತ್ತೊಂದು ಸಂಕಷ್ಟ ಹೆಗಲೇರಿದೆ. ಈ ಹಿಂದಿನ ಬಿಜೆಪಿ ಸರ್ಕಾರ ತಮ್ಮ ಮೇಲೆ ಸಿಬಿಐ ತನಿಖೆಗೆ ನೀಡಿದ್ದ ಆದೇಶವನ್ನು ತಮ್ಮ ಅಧಿಕಾರದ ಪ್ರಭಾವಳಿಯಿಂದ ಹಿಂಪಡೆದಿದ್ದರು. ಇದೀಗ, ಸರ್ಕಾರದ ಈ ಆದೇಶದ ವಿರುದ್ಧ ಸಿಬಿಐ ಹೈಕೋರ್ಟ್‌ ಮೆಟ್ಟಿಲೇರಿದೆ.

ರಾಜ್ಯ ಸರ್ಕಾರವು ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಕೇಸ್‌ ಅನ್ನು‌ ಸಿಬಿಐನಿಂದ ಹಿಂಪಡೆದು, ಲೋಕಾಯುಕ್ತಕ್ಕೆ ತನಿಖೆಯ ಆದೇಶ ಮಾಡಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ʼನಲ್ಲಿ ಅರ್ಜಿ ಸಲ್ಲಿಸಿದೆ. ಸಚಿವ ಸಂಪುಟದ ಆದೇಶದ ಬೆನ್ನಲ್ಲೇ, ಈ ಪ್ರಕರಣವನ್ನು ಲೋಕಾಯುಕ್ತಕ್ಕೆ‌ ವರ್ಗಾಯಿಸಲಾಗಿತ್ತು.

 

ಡಿ.22 ರಂದು ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಈ ಆದೇಶವನ್ನು ಹೊರಡಿಸಿತ್ತು. ಅಧಿಕೃತ ಆದೇಶ ಪ್ರತಿ ತಲುಪಿದ ಬಳಿಕ ಸಿಬಿಐ ಹೈಕೋರ್ಟ್‌ ಮೆಟ್ಟಿಲೇರಿದೆ. ರಾಜ್ಯ ಸರ್ಕಾರ ಡಿಕೆಶಿ ಪ್ರಕರಣವನ್ನು ಸಿಬಿಐನಿಂದ ಹಿಂಪಡೆದ ಬಳಿಕ ಈ ಆದೇಶದ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೈಕೋರ್ಟ್‌ʼನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಯತ್ನಾಳ್‌ ಅವರ ಅರ್ಜಿ ಹಾಗೂ ಸಿಬಿಐ ಅರ್ಜಿಗಳೆರೆಡೂ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ಬರುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರವು ಉಪಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್‌ (DK Shivakumar) ಮೇಲಿನ ತನಿಖೆಯ ಪ್ರಕರಣವನ್ನು ಸಚಿವ ಸಂಪುಟದಲ್ಲಿ ಹಿಂಪಡೆದ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷ ಬಿಜೆಪಿಯೂ ತನ್ನ ಪ್ರತಿಭಟನೆಯನ್ನು ದಾಖಲಿಸಿತ್ತು.

You might also like
Leave A Reply

Your email address will not be published.