ಹೆಣ್ಣು ನಿಮ್ಮ ಭೋಗದ ವಸ್ತುವಲ್ಲ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ ಇದೀಗ ಇಡೀ ರಾಜ್ಯ, ರಾಷ್ಟ್ರದಲ್ಲೇ ಸದ್ದು ಮಾಡಿದೆ. ಸರಿ ಸುಮಾರು 2976 ವಿಡಿಯೋ ಕ್ಲಿಪ್’ಗಳನ್ನು ಒಳಗೊಂಡಿರುವ ಈ ಪ್ರಕರಣದಲ್ಲಿ 300ಕ್ಕೂ ಹೆಚ್ಚು ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಸಾಧ್ಯತೆ ಇದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್ ಕೂಡ ನೀಡಲಾಗಿದೆ.

ಆದರೆ, ವಿದೇಶದಲ್ಲಿದ್ದಾರೆಂದು ಹೇಳಲಾಗಿರುವ ಪ್ರಜ್ವಲ್ ರೇವಣ್ಣ ಇನ್ನೂ ಎಸ್.ಐ.ಟಿ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಈ ಹಂತದಲ್ಲಿ ಎಸ್.ಐ.ಟಿ ಮುಂದಿರುವ ಸವಾಲುಗಳೇನು? ಸಂತ್ರಸ್ತೆಯರ ಮುಂದಿರುವ ಅವಕಾಶಗಳೇನು? ಇನ್ನು ಈ ಪ್ರಕರಣದಲ್ಲಿ ದುರ್ಬಲ ಎಫ್.ಐ.ಆರ್ ದಾಖಲು ಮಾಡಲಾಗಿದ್ಯಾ? ಡಿಎನ್.ಎ ಹಾಗೂ ಡಿಜಿಟಲ್ ಸಾಕ್ಷಿಗಳ ಮಹತ್ವವೇನು? ಹೀಗೆ ಅನೇಕ ಪ್ರಶ್ನೆಗಳ ಕುರಿತು ಈ ಲೇಖನವನ್ನು ಪ್ರಸ್ತುತಪಡಿಸಲಾಗಿದೆ.

ಕೇವಲ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಪೆನ್ ಡ್ರೈವ್ ಮಾತ್ರವಲ್ಲ. ಹಾಗೆ ಒಮ್ಮೆ ಹಿಂದಿರುಗಿ ನೋಡಿದರೆ ಇಲ್ಲಿಯವರೆಗೂ ನಡೆದ ಇಂತಹ ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ನಿಜಕ್ಕೂ ಬಾಧಿಸಲ್ಪಡುವುದು ಹೆಣ್ಣು ಮಾತ್ರ. ಹೆಣ್ಣು ಅಬಲೆ ಅಲ್ಲ ಸಬಲೆ. ಅದು ಇದು ಎಂಬ ಹಲವು ಗಾದೆಗಳು ಇಂತಹ ಸಂದರ್ಭದಲ್ಲಿ ಹಿಂದೆ ಸರಿದುಬಿಡುತ್ತದೆ. ಇಂತಹ ಪ್ರಕರಣಗಳನ್ನು ರಾಜಕೀಯವಾಗಿಯೋ, ಸಾಮಾಜಿಕವಾಗಿಯೋ ಮುಚ್ಚಿಹಾಕಲಾಗುತ್ತದೆ ವಿನಃ ಸಾಕ್ಷ್ಯಧಾರಿತವಾಗಿ ನ್ಯಾಯ ಒದಗಿಸಿದ್ದಾದರೂ ಎಷ್ಟು ಪ್ರಕರಣಕ್ಕೆ ಎಂಬುದನ್ನು ನಾವು ಖುದ್ದಾಗಿ ಯೋಚಿಸಬೇಕಾಗುತ್ತದೆ.

ಯಾರದೋ ಬೇಳೆ ಬೇಯುದಕ್ಕೆ ಹೆಣ್ಣನ್ನು ತುಚ್ಛಿಕರಣವಾಗಿ, ತುಷ್ಠಿಕರಣವಾಗಿ ನೋಡಲಾಗುತ್ತಿದೆ. ಹೆಣ್ಣನ್ನು ವಸ್ತುವಾಗಿ ಇಟ್ಟುಕೊಂಡು ಓಲೈಕೆ ಮಾಡುವುದು ಪ್ರಸಕ್ತ ಕಾಲಮಾನದಲ್ಲಿ ಸರ್ವೇಸಾಮಾನ್ಯವಾಗಿದೆ. ಇದಕ್ಕೆ ಸೌಜನ್ಯ, ನೇಹ ಸೇರಿದಂತೆ ಹಲವು ಹೆಣ್ಣುಮಕ್ಕಳನ್ನು ನಿದರ್ಶನವನ್ನಾಗಿ ತೋರಿಸಬಹುದಾಗಿದೆ. ಮೊದಲು ನಾವು ಹೆಣ್ಣನ್ನು ತುಷ್ಠಿಕರಣವಾಗಿ, ತುಚ್ಛಿಕರಣವಾಗಿ ಕಾಣುವುದನ್ನು ಖಂಡಿಸಬೇಕಿದೆ. ಅಲ್ಲದೇ ಹೆಣ್ಣೊಬ್ಬಳು ಯಾವುದೇ ಪಕ್ಷದ ಅನುಯಾಯಿಯಾದರು ಇಂತಹ ಪ್ರಕರಣಗಳು ಎದುರಾದಾಗ, ಸಂತ್ರಸ್ತೆ ಪರವಾಗಿ ವಾದ ಮಾಡುವಾಗ ಪಕ್ಷತೀತವಾಗಿ, ಸಾಮಾಜಿಕವಾಗಿ ತಾವು ಹಾಕಿಕೊಂಡಿರುವ ಗಡಿಯನ್ನು ದಾಟಿ ಎಲ್ಲರೂ ಒಗ್ಗೂಡಿ ನಿಂತಾಗ ಮಾತ್ರ ನ್ಯಾಯ ದೊರಕುತ್ತದೆ.

Women are not your object of pleasure - A look at women's pain in the case of Prajwal Revanna

ಅಲ್ಲದೇ, ಇಂತಹ ಯಾವುದೇ ಪ್ರಕರಣಗಳನ್ನು ವಿಶ್ಲೇಷಿಸಿದಾಗ ಕಣ್ಣು ಕುಕ್ಕುವುದು ಮಹಿಳೆಯರು ಮಾತ್ರ. ಇದಕ್ಕೆ ನಿದರ್ಶನವೆಂದರೆ, ಈ ಮೇಲೆ ವಿವರಿಸಿರುವ ಪೆನ್ ಡ್ರೈವ್ ಪ್ರಕರಣದಲ್ಲಿರುವ 2976 ವಿಡಿಯೋಗಳ ಪೈಕಿ ಜನಸಾಮಾನ್ಯರು ಮೊದಲು ನೋಡುವುದು ಅದರಲ್ಲಿರುವ ಮಹಿಳೆಯನ್ನೆ ಹೊರತು ಗಂಡಸ್ಸನ್ನಲ್ಲ. ಪ್ರಕರಣದಲ್ಲಿ ಮಹಿಳೆಯರ ತಪ್ಪಿಲ್ಲದಿದ್ದರು, ಆಕೆ ಅನ್ಯಾಯಕ್ಕೆ ಒಳಗಾಗದಿದ್ದರು ಸಾಮಾಜಿಕವಾಗಿ ಆಕೆಗೆ ಸಿಗಬೇಕಾದ ಮನ್ನಣೆ, ಸಾಂತ್ವಾನ ಮಾತ್ರ ಸಿಗುವುದಿಲ್ಲ. ಬದಲಾಗಿ ಮೊಸರಲ್ಲಿ ಕಲ್ಲು ಹುಡುಕೋ ಗುಣ ಬರಬಾರದು.

ದೌರ್ಜನ್ಯಕ್ಕೆ ಒಳಗಾದ ಹೆಣ್ಣನ್ನು ಮಹಿಳೆಯರೇ ಖಂಡಿಸಿಲ್ಲವೆಂದರೆ ನಾಳೆ ಮಹಿಳೆಯರನ್ನು ಗಂಡು ಆಳುವುದರಲ್ಲಿ ಎರಡು ಮಾತಿಲ್ಲ. ಹಣ, ರಾಜಕೀಯ, ಸಾಮಾಜಿಕ ಹೀಗೆ ಯಾವುದೇ ಗಡಿಗಳಿಗೆ ಒಳಗಾಗದೇ ಅನ್ಯಾಯದ ವಿರುದ್ಧ ಮುಕ್ತವಾಗಿ ನಿಂತಾಗ ಮಾತ್ರ ದೌರ್ಜನ್ಯದಂತಹ ಪ್ರಕರಣಗಳನ್ನು ಎದುರಿಸಲು ಸಾಧ್ಯ.

ಹೌದು! ಪ್ರಜ್ವಲ್ ಪ್ರಕರಣ ಕ್ರಿಮಿನಲ್ ಅಪರಾಧ. ಇದರಲ್ಲಿ ಜನಪ್ರತಿನಿಧಿ ಎಂಬ ಕಾರಣಕ್ಕಾಗಿ ಯಾವುದೇ ರಿಯಾಯಿತಿ ನೀಡಬಾರದು. ಅತ್ಯಾಚಾರದ ಆರೋಪ ಹೊತ್ತವರಿಗೆ ಏನು ಕ್ರಮ ಆಗುತ್ತದೋ ಅದೇ ಕ್ರಮ ಇಲ್ಲಿ ಆಗಬೇಕು. ವಿಡಿಯೋ ಮಾಹಿತಿ ಪ್ರಕಾರ 300 ಜನ ಸಂತ್ರಸ್ತರು ಇದ್ದಾರೆ. ಅವರದ್ದು 2976 ವಿಡಿಯೋ ಕ್ಲಿಪ್ ಗಳಿವೆ. ಈ ನಿಟ್ಟಿನಲ್ಲಿ 300 ಮೊಕದ್ದಮೆ ದಾಖಲಾಗಬೇಕು. ವಿವಿಧ ಕಡೆಗಳಲ್ಲಿ, ಹಲವು ಮಹಿಳೆಯೆ ಜೊತೆಗೆ ಈ ಕೃತ್ಯಗಳನ್ನು ಎಸಗಲಾಗಿದೆ. ಈ ನಿಟ್ಟಿನಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲು ಮಾಡಬೇಕಿತ್ತು. ಆದರೆ ಒಂದೇ ಪ್ರಕರಣ ದಾಖಲಾಗಿದೆ. ಅದರಲ್ಲೂ ದುರ್ಬಲ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಆರೋಪಿಯ ವಿರುದ್ಧ 354(ಎ), 354(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ನೀಡಲಾಗಿದೆ. ತನಿಖೆಗಾಗಿ ಆರೋಪಿಯನ್ನು ಬಂಧನ ಮಾಡಲು ಅವಕಾಶ ಇದೆ. ಆದರೆ, 41(ಎ) ಸಿಆರ್’ಪಿಸಿ ಅಡಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ. ಆದರೆ ಇಂತಹ ಪ್ರಕರಣಗಳನ್ನು ಖುದ್ದಾಗಿ ಪೊಲೀಸರು ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಬೇಕಿದೆ.

ಸಂತ್ರಸ್ತ ಮಹಿಳೆಯರು ಇಂತಹ ಪ್ರಕರಣಗಳಲ್ಲಿ ದೂರು ಕೊಡಬೇಕಾಗಿಲ್ಲ. ಪೊಲೀಸರೇ ಖುದ್ದಾಗಿ ದೂರು ದಾಖಲು ಮಾಡಿಕೊಳ್ಳಲು ಅವಕಾಶವಿದೆ. 18 ವರ್ಷ ವಯಸ್ಸು ಮೇಲ್ಪಟ್ಟ ಸಂತ್ರಸ್ತರು ಆರೋಪಿಯ ಒತ್ತಡಕ್ಕೆ, ಬೆದರಿಕೆಗೆ ಮಣಿದು ಲೈಂಗಿಕ ಕಿರುಕುಳಕ್ಕೆ ಬಲಿಯಾಗಿರಬಹುದು. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರು ಹಣಕ್ಕಾಗಿ ಅಥವಾ ಇತರ ಆಮಿಷಕ್ಕಾಗಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ಸೂಚಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿಲ್ಲ. ಬದಲಾಗಿ ಒತ್ತಡದಿಂದಲೇ ಬಲಿಯಾಗಿರುವುದನ್ನು ಕಾಣಬಹುದಾಗಿದೆ.

– ಪ್ರೀತಿ.ಟಿ.ಎಸ್

You might also like
Leave A Reply

Your email address will not be published.