ಹಂಪಿ ಉತ್ಸವಕ್ಕೆ ಹೋಗೋಣ‌ ಬನ್ನಿ

ವಿಜಯನಗರ ಸಾಮ್ರಾಜ್ಯ ಎಂದಾಕ್ಷಣ ನೆನಪಿಗೆ ಬರುವುದೇ ಕೊರತೆಯೇ ಇಲ್ಲದ ಸಿರಿತನ ಹಾಗೂ ಕಣ್ಮನ ಸೆಳೆಯುವ ವೈಭವೋಪೇತವಾದ ಅರಮನೆ, ಮಹಲುಗಳು, ದೇವಸ್ಥಾನಗಳು.‌ ದೇವರು, ಧರ್ಮ, ದೇಶ, ಭಾಷೆ, ಎಲ್ಲವೂ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲವದು. ರಸ್ತೆಯಲ್ಲಿ ವಜ್ರ ವೈಡೂರ್ಯಗಳನ್ನು ಮಾರುತ್ತಿದ್ದ ಕಾಲವೆಂದರೆ ಸಾಮಾನ್ಯದ್ದಂತೂ ಆಗಿರಲಿಲ್ಲ. ‌ಹಂಪಿಯಲ್ಲಿ ಅಂದು ನಡೆಯುತ್ತಿದ್ದ ವೈಭವೋಪೇತ ವಿಜಯದಶಮಿ ಮುಂದೆ ಮೈಸೂರು ಸಂಸ್ಥಾನದವರು ಆಚರಿಸುವ ದಸರಾವಾಯ್ತು ಹಾಗೂ ಅದು ಇಂದು ಕರ್ನಾಟಕದ ನಾಡ ಹಬ್ಬವಾಗಿ ಪರಿವರ್ತನೆಯಾಯಿತು.

Hampi Festival

ಒಂದು ಕಾಲದಲ್ಲಿ ವೈಭವೋಪೇತವಾಗಿ ಮೆರೆದ ವಿಜಯನಗರ ಸಾಮ್ರಾಜ್ಯದ ‘ವಿಜಯ ಉತ್ಸವ’ ಎಂದು ಕರೆಯಲ್ಪಡುತ್ತಿದ್ದ ಹಬ್ಬ ‘ಹಂಪಿ ಉತ್ಸವ’ ಎಂಬ ಹೆಸರಿನೊಂದಿಗೆ ಮತ್ತೆ ಜೀವಂತವಾಗುತ್ತಿದೆ. ನಿನ್ನೆ ಸಂಜೆ ಆರು ಗಂಟೆಯಿಂದ ಆರಂಭವಾಗಿ ಮೂರು ದಿನ ನಡೆಯುವ ಈ ಉತ್ಸವವು ವಿಜಯನಗರ ಸಾಮ್ರಾಜ್ಯದಲ್ಲಿದ್ದ ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸಲಿದ್ದು ಆ ಭಾಗದ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಲಿದೆ. ರಾಜ ಮನೆತನದ ನಂಟಿನಲ್ಲಿ ಬೇರೂರಿರುವ ಹಂಪಿ ಉತ್ಸವವು ಯಾವುದೇ ಕ್ಯಾಲೆಂಡರ್‌ನ ನಿಗದಿತ ದಿನಾಂಕದ ಹಂಗಿಗೆ ಒಳಪಡದೆ ಧಾರ್ಮಿಕ ಗಡಿಗಳನ್ನೂ ಕೂಡಾ ಮೀರಿದ ಆಚರಣೆಯಾಗಿದೆ‌. ಹಂಪಿಯ ಇತಿಹಾಸವನ್ನು ಅಂದಿನಿಂದಲೂ ಇಂದಿನ ತನಕ ಸಾಕ್ಷಿಯಾಗಿ ನೋಡಿದ ವಿರೂಪಾಕ್ಷ ದೇಗುಲದ ಇತಿಹಾಸದೊಂದಿದೆ ತೆರೆದುಕೊಳ್ಳುವ ಇತಿಹಾಸ ಪ್ರಸಿದ್ಧ ಈ ಉತ್ಸವ ಹಲವು ವೈಭವಗಳಿಗೆ ಸಾಕ್ಷಿಯಾಗಲಿದೆ‌.

ಹಂಪಿ ಉತ್ಸವ ಕೇವಲ ಧಾರ್ಮಿಕ ಹಬ್ಬವಲ್ಲ, ಹಂಪಿಯ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಇತಿಹಾಸವನ್ನು ತೋರುವ ಆಚರಣೆಯಾಗಿದೆ. ಈ ಉತ್ಸವದಲ್ಲಿ ನಾಡಿನ ಪ್ರಸಿದ್ಧ ಕಲಾವಿದರಿಂದ ಹಂಪಿಯ ಶ್ರೀಮಂತ ಸಾಂಸ್ಕೃತಿಕ ವೈಭವವನ್ನು ತೋರಿಸುವ ವೇದಿಕೆಯಾಗಲಿದ್ದು ಜಾನಪದ ಹಾಡು, ನೃತ್ಯ, ಜನಪದ ಕಲಾವಾಹಿನಿ, ಜನಪದ ಗೀತೆಗಳ ಸಂಗೀತ ಕಛೇರಿ, ಮನಮೋಹಕ ಬೆಳಕು ಮತ್ತು ಧ್ವನಿ ಕಾರ್ಯಕ್ರಮಗಳು ಆಚರಣೆಯ ಆಕರ್ಷಣೆಯನ್ನು ಹೆಚ್ಚಿಸಲಿದ್ದು ವಿಜಯನಗರ ಸಾಮ್ರಾಜ್ಯದ ಭವ್ಯ ಆಳ್ವಿಕೆಗೆ ಗೌರವ ಸಲ್ಲಿಸುವ ಜಂಬೂ ಸವಾರಿಯು ಉತ್ಸವದ ಪ್ರಮುಖ ಅಂಶವಾಗಿದೆ. ಕಾಲ್ನಡಿಗೆಯ ಮೂಲಕ ಹಾಗೂ ಕುದುರೆಯ ಮೇಲೆ ಮಧ್ಯಕಾಲೀನ ಮಿಲಿಟರಿ ಪೋಷಾಕು ಧರಿಸಿ ಹೋಗುವ ಮೆರವಣಿಗೆ ಇನ್ನೊಂದು ಆಕರ್ಷಣೆಯಾಗಿದೆ‌. ರಾಜ ಮಾರ್ಗವೆಂದು ಹೆಸರಾದ ವಿರೂಪಾಕ್ಷ ದೇವಾಲಯದ ರಸ್ತೆಯು ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸಲಿದ್ದು, ವರ್ಷಪೂರ್ತಿ ಶಾಂತವಾಗಿ ಸಣ್ಣದಾಗಿರುವ ಹಂಪಿಯು ಈ ಉತ್ಸವದಲ್ಲಿ ಒಮ್ಮೆಲೆ ಗದ್ದಲಗಳಿಂದ ಕೂಡಿ ಮದುಮಗಳಂತೆ ಕಂಗೊಳಿಸಲಿದೆ.

Let us go to the Hampi festival.

ಅದಷ್ಟೇ ಅಲ್ಲದೇ, ವಿವಿಧ ಸ್ಥಳಗಳಲ್ಲಿ ಬೊಂಬೆ ಪ್ರದರ್ಶನಗಳನ್ನು ಸಹ ವೀಕ್ಷಿಸಬಹುದಾಗಿದ್ದು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೆ ಜಲಕ್ರೀಡೆ, ಛಾಯಾಗ್ರಹಣ ಸ್ಪರ್ಧೆಗಳು, ಬಂಡೆ ಹತ್ತುವ ಆಧುನಿಕ ಅಂಶಗಳ ಜೊತೆಗೆ ಗ್ರಾಮೀಣ ಮತ್ತು ಸ್ಥಳೀಯ ಕ್ರೀಡೆಗಳನ್ನು ಕೂಡಾ ಹಂಪಿ ಉತ್ಸವ ಒಳಗೊಂಡಿದೆ. ಇನ್ನು ಉತ್ಸವದಲ್ಲಿ, ಸ್ಥಳೀಯ ಆಹಾರದ ರುಚಿ ಸವಿಯುವವರಿಗೆ ಅದೂ ಲಭ್ಯವಿರಲಿದ್ದು, ಕರಕುಶಲ ವಸ್ತುಗಳ ಖರೀದಿಯನ್ನೂ ಮಾಡಬಹುದಾಗಿದೆ.

ಹಂಪಿಯ ಅಂದಿನ ದಿನಗಳನ್ನಂತು ನೋಡಲಿಲ್ಲ‌, ಇಂದಿನ ವೈಭವಗಳನ್ನಾದರು ಕಣ್ತುಂಬಿಕೊಳ್ಳೋಣ.

You might also like
Leave A Reply

Your email address will not be published.