ಭಗವಾನ್ ರಾಮ ಹಾಗೂ ಸೀತಾಮಾತೆಗೆ ಅವಮಾನ – ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಖಂಡನೆ

ಸಾವಿತ್ರಿಬಾಯಿ ಫುಲೆ ಪುಣೆ ಯುನಿವರ್ಸಿಟಿಯಲ್ಲಿ ‘ಜಬ್ ವಿ ಮೆಟ್’ ಎನ್ನುವ ನಾಟಕ ಪ್ರದರ್ಶಿಸುವ ಸೋಗಿನಲ್ಲಿ ಪ್ರಭು ರಾಮ‌ ಮತ್ತು ಸೀತಾ ಮಾತೆಯನ್ನು ಅವಮಾನಿಸಿದ ಘಟನೆ ನಡೆದಿದ್ದು, ಅಖಿಲಭಾರತ ವಿದ್ಯಾರ್ಥಿ ಪರಿಷತ್‌ನ ಸದಸ್ಯರು ಈ ಘಟನೆಯನ್ನು ಖಂಡಿಸಿದ್ದಾರೆ.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ನಾಟಕವನ್ನು ಮಧ್ಯದಲ್ಲಿ ನಿಲ್ಲಿಸಿ ಆಕ್ಷೇಪಣೆ ಮಾಡಿದ ಕಾರಣ ನಡೆದ ಗಲಾಟೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ‌. ಘಟನೆಯನ್ನು ಖಂಡಿಸುವಾಗ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ‌ನ ವಿದ್ಯಾರ್ಥಿಗಳು ರಾಮಾಯಣವು ಪುರಾಣವಲ್ಲ ಅದು ನಮ್ಮ ಇತಿಹಾಸ ಎಂದು ಒತ್ತಿ ಹೇಳಿದರು.

ವಿವಾದ ಸೃಷ್ಟಿಯಾದ ವಿಡಿಯೋದಲ್ಲಿ ಸೀತಾಮಾತೆಯು ಸಿಗರೇಟ್ ಸೇದುತ್ತಿರುವ ಹಾಗೆ ಶ್ರೀ ರಾಮನು ಲೈಟರ್ ಹೊತ್ತಿಸುತ್ತಿರುವ ಹಾಗೆ ತೋರಿಸಲಾಗಿದೆ. ನಾಟಕದ ವಿಷಯವು ರಾಮಲೀಲಾದಲ್ಲಿ ತಮ್ಮನ್ನು ತೊಡಗಿಸಿಕೊಂಡ‌ ನಟರ ಅಭ್ಯಾಸದ ದೃಶ್ಯಗಳು ಎಂದು ಸಮಜಾಯಿಷಿ ನೀಡಲಾಗಿದೆ.

ಇನ್ನು ಎಕ್ಸ್‌ನಲ್ಲಿ ಎಬಿವಿಪಿ ಪುಣೆಯು ಆ ವಿಡಿಯೋವನ್ನು ಹಂಚಿಕೊಂಡು, ಸಾವಿತ್ರಿಬಾಯಿ ಫುಲೆ ಪುಣೆ ಯುನಿವರ್ಸಿಟಿಯ ಲಲಿತಕಲಾ ಕೇಂದ್ರದ ವಿಭಾಗವು ಪ್ರಸ್ತುತ ಪಡಿಸಿದ ನಾಟಕದಲ್ಲಿ ಸೀತಾಮಾತೆ ಮತ್ತು ಪ್ರಭು ಶ್ರೀ ರಾಮನನ್ನು ಜೋಕರ್‌ಗಳಂತೆ ಬಿಂಬಿಸಲಾಗಿದೆ ಹಾಗೂ ಎಬಿವಿಪಿ ಪುಣೆಯು ಹಿಂದೂ ದೇವತೆಗಳ ಬಗೆಗಿನ ಇಂತಹ ಭಾಷೆಗಳನ್ನು ಸಹಿಸುವುದಿಲ್ಲ, ಇದಕ್ಕೆ ಸಂಬಂಧಿಸಿದ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಘಟನೆಯ ಬಗ್ಗೆ ಮಾತನಾಡಿದ SPPU ಭದ್ರತಾ ವಿಭಾಗದ ಸುರೇಶ್ ಭೋಂಸ್ಲೆ, ನಮಗೆ ಈ ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಘಟನೆಯ ನಂತರವೇ ಇದರ ಬಗ್ಗೆ ತಿಳಿದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಎರಡೂ ಕಡೆಯವರು ಚತುಃಶ್ರುಂಗಿ ಪೋಲಿಸ್ ಠಾಣೆಯಲ್ಲಿ ದೂರು, ಪ್ರತಿದೂರುಗಳನ್ನು ದಾಖಲಿಸಿದ್ದು ಪರಿಶೀಲನೆಯ ನಂತರ ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ನಾಟಕದ ಆಯೋಜಕರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ಪೋಲಿಸ್ ಇಲಾಖೆಯು ಹೇಳಿದೆ.

You might also like
Leave A Reply

Your email address will not be published.