ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗುವ ದಿನಾಂಕ ಬಿಡುಗಡೆ

ರಾಜ್ಯ ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಬಹುತೇಕ ಪೂರ್ಣಗೊಂಡಿದ್ದು, ಎಂಟೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆದಿರುವ ಅಂಕಗಳ ಗಣಕೀಕರಣ ಪ್ರಕ್ರಿಯೆ ನಡೆಯುತ್ತಿದೆ. ಇದು ಪೂರ್ಣಗೊಳ್ಳಲು ನಾಲ್ಕೈದು ದಿನಗಳು ಬೇಕಾಗಬಹುದು. ಒಟ್ಟಾರೆಯಾಗಿ, ರಾಜ್ಯ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶವು ಮೇ 8 ರಂದು ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೌದು, ಸದ್ಯ ಎಲ್ಲ ಅಂದುಕೊಂಡಂತೆ ನಡೆದರೆ ಮೇ 8ರಂದು ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಚಿಂತನೆ ನಡೆಸಿದೆ. ಒಂದು ವೇಳೆ ಗಣಕೀಕರಣ ಕಾರ್ಯ ವಿಳಂಬವಾದರೆ ಅಥವಾ ಸಮಯಕ್ಕೆ ಸರಿಯಾಗಿ ಮುಗಿಯದೆ ಹೋದರೆ ಒಂದೆರಡು ದಿನ ತಡವಾಗಬಹುದು.

ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯು ಮಾ.25 ರಿಂದ ಏ.6 ರವರೆಗೆ 2,750 ಕೇಂದ್ರಗಳಲ್ಲಿ ನಡೆದಿತ್ತು. ಸುಮಾರು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

SSLC result will be announced soon

ಸಿಬಿಎಸ್‌ಇ ಫಲಿತಾಂಶ :

ಇನ್ನು ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಮೇ 12ರ ಆಸುಪಾಸಿನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಸಿಬಿಎಸ್‌ಇ ಮಂಡಳಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇನ್ನೂ ಪಾಲಿಕೆಯ ಶಾಲಾ-ಕಾಲೇಜುಗಳನ್ನು ರಾಜ್ಯ ಶಿಕ್ಷಣ ಇಲಾಖೆಯ ಸುಪರ್ದಿಗೆ ನೀಡುವುದಕ್ಕೆ ಬಿಬಿಎಂಪಿಯು ಅಂತಿಮ ಹಂತದ ಸಿದ್ಧತೆ ನಡೆಸಿದ್ದು, ಹೊಸ ಶೈಕ್ಷಣಿಕ ವರ್ಷ ಆರಂಭಗೊಳ್ಳುವ ವೇಳೆಗೆ ಶಾಲಾ – ಕಾಲೇಜು ಹಸ್ತಾಂತರಗೊಳ್ಳುವ ಸಾಧ್ಯತೆ ಇದೆ. ಹಲವಾರು ವರ್ಷದಿಂದ ಬಿಬಿಎಂಪಿಯ ಶಾಲಾ ಕಾಲೇಜುಗಳನ್ನು ಶಿಕ್ಷಣ ಇಲಾಖೆಯ ಸುಪರ್ದಿಗೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಬಿಬಿಎಂಪಿಯ ಶಾಲಾ-ಕಾಲೇಜುಗಳಿಗೆ ಹೊರ ಗುತ್ತಿಗೆ ಶಿಕ್ಷಕರ ನೇಮಕಾತಿ ಸಂಬಂಧಿಸಿದಂತೆ ಉಂಟಾದ ಗೊಂದಲದ ಪರಿಣಾಮ ಇದೀಗ ಬಿಬಿಎಂಪಿಯ ಎಲ್ಲಾ ಶಾಲಾ- ಕಾಲೇಜುಗಳನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಹಲವು ಬಾರಿ ಬಿಬಿಎಂಪಿ ಶಿಕ್ಷಣ ವಿಭಾಗ ಹಾಗೂ ರಾಜ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.

ಇದೀಗ ಅಂತಿಮವಾಗಿ ಜೂನ್‌ನಿಂದ ಆರಂಭಗೊಳ್ಳುವ 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಬಿಬಿಎಂಪಿಯ ಶಾಲೆ-ಕಾಲೇಜುಗಳನ್ನು ಹಸ್ತಾಂತರ ಮಾಡುವುದಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಮತ್ತು ರಾಜ್ಯ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬಿದ್ದಿಲ್ಲ ಎಂದು ಮೂಲಗಳು ತಿಳಿಸಿವೆ.

You might also like
Leave A Reply

Your email address will not be published.