ಪಾಕಿಸ್ತಾನವು ರಾಹುಲ್‌ ಗಾಂಧಿ ಪ್ರಧಾನಿಯಾಗಲು ಬಯಸುತ್ತಿದೆ – ನರೇಂದ್ರ ಮೋದಿ

ಮೇ 2 ರಂದು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಅಹ್ಮದ್ ಹುಸೇನ್ ಚೌಧರಿ ಅವರು ರಾಹುಲ್ ಗಾಂಧಿಯನ್ನು ಸಾಮಾಜಿಕ ಮಾಧ್ಯಮ ಪೋಸ್ಟ್‌ ಒಂದರಲ್ಲಿ ಹೊಗಳಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ರ್ಯಾಲಿಯೊಂದರಲ್ಲಿ ಮಾತನಾಡುವಾಗ ವಾಗ್ದಾಳಿ ನಡೆಸಿದರು. “ಇಲ್ಲಿ ಕಾಂಗ್ರೆಸ್ ಸಾಯುತ್ತಿದೆ ಆದರೆ ಅದಕ್ಕಾಗಿ ಪಾಕಿಸ್ತಾನವು ಅಳುತ್ತಿದೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಈಗ ಪಾಕಿಸ್ತಾನದ ನಾಯಕರು ಕಾಂಗ್ರೆಸ್‌ಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ನೀವು ಕೇಳಿರಬೇಕು. “ಶೆಹಜಾದಾ” (ರಾಹುಲ್ ಗಾಂಧಿ) ಅವರನ್ನು ಪ್ರಧಾನಿ ಮಾಡಲು ಪಾಕಿಸ್ತಾನ ಉತ್ಸುಕವಾಗಿದೆ. ನೀವೆಲ್ಲರು ಅದನ್ನು ನಿನ್ನೆ ನೋಡಿರಬೇಕು. ಕಾಂಗ್ರೆಸ್ ಪಾಕಿಸ್ತಾನವನ್ನು ಇಷ್ಟಪಡುತ್ತದೆ ಎಂಬುದು ನಮಗೆ ಈಗಾಗಲೇ ತಿಳಿದಿದೆ ಆದರೆ ಈಗ ಇವರಿಬ್ಬರ ನಡುವಿನ ಮೈತ್ರಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿದೆ” ಎಂದು ಗುಜರಾತ್‌ನ ಆನಂದ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.

ಮುಂದೆವರೆದು ಮಾತನಾಡಿದ ಪ್ರಧಾನಿಯವರು “ಸಹೋದರ ಸಹೋದರಿಯರೇ, ಭಾರತದ ವಿರೋಧಿಗಳು ಸಹಜವಾಗಿಯೇ ಭಾರತದಲ್ಲಿ ಬಲವಾದ ಸರ್ಕಾರವನ್ನು ಬಯಸುವುದಿಲ್ಲ. 26/11 ಮುಂಬೈ ಭಯೋತ್ಪಾದನಾ ದಾಳಿಯ ಸಮಯದಲ್ಲಿ ಇದ್ದಂತಹ ದುರ್ಬಲ ಆಡಳಿತವನ್ನು ಅವರು ಬಯಸುತ್ತಾರೆ. ದೇಶದ ಶತ್ರುಗಳು 2014ರ ಹಿಂದೆ ಇದ್ದಂತಹ ಭ್ರಷ್ಟ ಮತ್ತು ಅಸ್ಥಿರ ಸರ್ಕಾರವನ್ನು ಬಯಸುತ್ತಾರೆ. ನಮ್ಮ ಬಲಿಷ್ಠ ಆಡಳಿತವು ತಲೆಬಾಗುವುದಿಲ್ಲ ಅಥವಾ ಹಿಂದೆ ಸರಿಯುವುದಿಲ್ಲ. ಆದ್ದರಿಂದಲೇ ಭಾರತದಿಂದ ಮಾತ್ರ ತನ್ನ ಅಭಿವೃದ್ಧಿಯನ್ನು ವೇಗಗೊಳಿಸಲು ಸಾಧ್ಯ ಎಂದು ಹೇಳಿದರು.

ರಾಹುಲ್ ಗಾಂಧಿಯನ್ನು ಬೆಂಬಲಿಸುವ, ಪ್ರಧಾನಿ ಇಮ್ರಾನ್ ಖಾನ್ ಅವರ ಅಡಿಯಲ್ಲಿ ಸೇವೆ ಸಲ್ಲಿಸಿದ ಹಾಗೂ 2019 ರ ಪುಲ್ವಾಮಾ ದಾಳಿಯಲ್ಲಿ ತನ್ನ ದೇಶವು ಭಾಗಿಯಾಗಿದೆ ಎಂದು ಹೆಮ್ಮೆಪಡುವ ಪಾಕಿಸ್ತಾನದ ಮಾಜಿ ಸಚಿವರ ಹೇಳಿಕೆಯು ಚುನಾವಣಾ ಸಮಯದಲ್ಲಿ ಹೊಸ ರಾಜಕೀಯ ಪ್ರಕ್ಷುಬ್ಧತೆಯನ್ನು ಹುಟ್ಟುಹಾಕಿತು.

“ಹಮ್ನೆ ಹಿಂದೂಸ್ತಾನ್ ಕೊ ಘುಸ್ ಕೆ ಮಾರ (ನಾವು ಭಾರತಕ್ಕೆ ಹೊಕ್ಕು ಅವರಿಗೆ ಹೊಡೆದಿದ್ದೇವೆ). ಪುಲ್ವಾಮಾದಲ್ಲಿ ನಮ್ಮ ಯಶಸ್ಸು ಇಮ್ರಾನ್ ಖಾನ್ ನಾಯಕತ್ವದ ಜನರ ಯಶಸ್ಸು. ನೀವು ಮತ್ತು ನಾವೆಲ್ಲರೂ ಆ ಯಶಸ್ಸಿನ ಭಾಗವಾಗಿದ್ದೇವೆ” ಎಂದು 2020 ರಲ್ಲಿ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಫವಾದ್ ಚೌಧರಿ ಘೋಷಿಸಿದರು. ಚಂದ್ರಯಾನ 2 ಮಿಷನ್ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಭಾರತವನ್ನು ಅಪಹಾಸ್ಯ ಮಾಡುವುದು ಸೇರಿದಂತೆ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವ ಸುದೀರ್ಘ ಇತಿಹಾಸವನ್ನು ಅವರು ಹೊಂದಿದ್ದಾರೆ.

You might also like
Leave A Reply

Your email address will not be published.