ಕ್ರಿಕೆಟ್ – 2024 ಈ ಸ್ಟಾರ್ ಆಟಗಾರನಿಗೆ ದಾಖಲೆಗಳ ವರ್ಷ – ಯಾರದು?

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 765 ರನ್ ಗಳಿಸಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವಿರಾಟ್ ಕೊಹ್ಲಿ, ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ ಶತಕದ ದಾಖಲೆ ಮುರಿದಿದ್ದಲ್ಲದೆ, 50 ಏಕದಿನ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಮೈಲುಗಲ್ಲು ನಿರ್ಮಿಸಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ.

ಭಾರತೀಯ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 2023 ರಲ್ಲೇ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದರೆ, 2024ರಲ್ಲಿ ಅನೇಕ ದಾಖಲೆಗಳನ್ನು ಸೃಷ್ಟಿಸಲು ಮಹಾದಾರಿ ಸಜ್ಜಾಗಿದೆ. ಅಲ್ಲದೇ ಈ ದಾಖಲೆಗಳಿಗಾಗಿ ವಿರಾಟ್ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ವಿರಾಟ್ ಕೋಹ್ಲಿ ಅವರ 2023ರ ದಾಖಲೆಗಳನ್ನು ನೋಡುವುದಾದರೆ,

• ಒಂದೇ ವರ್ಷದಲ್ಲಿ 35 ಪಂದ್ಯಗಳಿಂದ 8 ಶತಕ ಹಾಗೂ 10 ಅರ್ಧಶತಕದ ಮೂಲಕ 2048 ರನ್ ಬಾರಿಸಿ ಶುಭಮನ್ ಗಿಲ್ ನಂತರ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ 2ನೇ ಆಟಗಾರ ಎಂಬ ದಾಖಲೆ.

• ಗಿಲ್ ನಂತರ 2000 ರನ್ ಗಳಿಸಿದ ಎರಡನೇ ಆಟಗಾರನೆಂಬ ಹೆಗ್ಗಳಿಕೆ.

2024ರಲ್ಲಿ ವಿರಾಟ್ ಅವರು ಮುರಿಯಬಲ್ಲ ದಾಖಲೆಗಳು ಯಾವುದು?

1. ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ

• ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್: ಈ ಪಂದ್ಯದಲ್ಲಿ ಅತಿ ವೇಗದ 14 ಸಾವಿರ ರನ್ ಪೂರೈಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಲು ಕೊಹ್ಲಿಗೆ 152 ರನ್ ಅಗತ್ಯವಿದೆ. ಸಚಿನ್ ತೆಂಡೂಲ್ಕರ್ ತಮ್ಮ 350ನೇ ಏಕದಿನ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಕೊಹ್ಲಿ 292 ಪಂದ್ಯಗಳಿಂದ 13,848 ರನ್ ಬಾರಿಸಿದ್ದಾರೆ.

• ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್: ಜನವರಿ 25 ರಿಂದ ಇಂಗ್ಲೆಂಡ್ ಹಾಗೂ ಭಾರತ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಈ ಸರಣಿಯಲ್ಲಿ 544 ರನ್ ಗಳಿಸಿದರೆ ಸಚಿನ್ ತೆಂಡೂಲ್ಕರ್ (2535 ರನ್) ಅವರ ಮತ್ತೊಂದು ದಾಖಲೆ ಮುರಿದು ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟರ್ ಎಂಬ ಮೈಲುಗಲ್ಲು ಸ್ಥಾಪಿಸಬಹುದಾಗಿದೆ. ಕೊಹ್ಲಿ ಇಂಗ್ಲೆಂಡ್ ವಿರುದ್ಧ 50 ಇನಿಂಗ್ಸ್‌ಗಳಿಂದ 1991 ರನ್ ಗಳಿಸಿದ್ದಾರೆ.

• ಈಗಾಗಲೇ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆ ಮುರಿದಿರುವ ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ತವರು ಅಂಗಣದ ಪಂದ್ಯಗಳಲ್ಲಿ ಇದುವರೆಗೂ 38 ಶತಕ ಸಿಡಿಸಿದ್ದಾರೆ. ಈ ವರ್ಷದಲ್ಲಿ ತವರು ಪಂದ್ಯಗಳಲ್ಲಿ 5 ಶತಕ ಬಾರಿಸಿದರೆ ಸಚಿನ್ ತೆಂಡೂಲ್ಕರ್ ಅವರ ಶತಕದ (42) ದಾಖಲೆಯನ್ನು ವಿರಾಟ್ ಕೊಹ್ಲಿ ಹಿಂದಿಕ್ಕಲಿದ್ದಾರೆ.

2. ಗೇಲ್ ದಾಖಲೆ ಮುರಿಯಲು ಸಜ್ಜಾದ ವಿರಾಟ್:

ಟಿ20ಯ ಎಲ್ಲಾ ಮಾದರಿಯಲ್ಲಿ ಇದುವರೆಗೂ 357 ಇನಿಂಗ್ಸ್‌ಗಳಿಂದ 11,965 ರನ್ ಗಳಿಸಿದ್ದಾರೆ. ಇನ್ನೂ 35 ರನ್ ಬಾರಿಸಿದರೆ ಅತಿ ವೇಗವಾಗಿ 12000 ಟಿ20-ಐ ರನ್ ಗಳಿಸಿ ಸ್ವಘೋಷಿತ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ದಾಖಲೆ ಮುರಿಯುವ ಅವಕಾಶವನ್ನು ಕೊಹ್ಲಿ ಹೊಂದಿದ್ದಾರೆ.

3. ಇಂಗ್ಲೆಂಡ್ ವಿರುದ್ಧ 4000 ಅಂತಾರಾಷ್ಟ್ರೀಯ ರನ್

ಇಂಗ್ಲೆಂಡ್ ವಿರುದ್ಧ ಈ ವರ್ಷ 21 ರನ್ ಗಳಿಸಿದರೆ ಭಾರತ ತಂಡದ ಪರ ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ವಿರಾಟ್ ಕೊಹ್ಲಿ ಗುರುತಿಸಿಕೊಳ್ಳಲಿದ್ದಾರೆ. ಅಲ್ಲದೆ 30ರನ್ ಬಾರಿಸಿದರೆ ಇಂಗ್ಲೆಂಡ್ ವಿರುದ್ಧ 4000 ಅಂತಾರಾಷ್ಟ್ರೀಯ ರನ್ ‌ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆಯಲಿದ್ದಾರೆ.

4. ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಮೂರನೇ ಆವೃತ್ತಿಯ ಅಂಗವಾಗಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಅಕ್ಟೋಬರ್‌ನಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಒಂದು ಶತಕ ಸಿಡಿಸಿದರೆ ಕಿವೀಸ್ ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದ ಭಾರತ ತಂಡದ ಬ್ಯಾಟರ್ ಎಂಬ ದಾಖಲೆ ಬರೆಯಲಿದ್ದಾರೆ. ಪ್ರಸ್ತುತ ವಿರಾಟ್ ಮತ್ತು ಸಚಿನ್ ತಲಾ 9 ಶತಕ ಸಿಡಿಸಿ ಜಂಟಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

5. ಬಾಂಗ್ಲಾದೇಶ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್

ಸೆಪ್ಟೆಂಬರ್ ತಿಂಗಳಲ್ಲಿ ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಯೋಜಿಸಲಾಗಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ 383 ರನ್ ಗಳಿಸಿದರೆ ಬಾಂಗ್ಲಾದೇಶ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಬರೆಯಲಿದ್ದಾರೆ. ಪ್ರಸ್ತುತ ಸಚಿನ್ ತೆಂಡೂಲ್ಕರ್ 820 ರನ್ ಗಳಿಸಿ ಅಗ್ರ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 437 ರನ್ ಬಾರಿಸಿದ್ದಾರೆ.

ಈ ಅಂಕಣ ಓದುತ್ತಿರುವ ನಿಮ್ಮೆಲ್ಲರ ಪರವಾಗಿ ಹಾಗೂ ಇತಿಹಾಸ ವೆಬ್ಸೈಟ್ ಪರವಾಗಿ ಭಾರತದ ಹೆಮ್ಮೆಯ ಪುತ್ರ ವಿರಾಟ್ ಕೋಹ್ಲಿ ಅವರ ಮುಂದಿನ ಹಾದಿಗೆ ಆಲ್ ದಿ ಬೆಸ್ಟ್! ಈ 2024ನೇ ವರ್ಷ ಮತ್ತಷ್ಟು ದಾಖಲೆಗಳನ್ನು ನಿರ್ಮಿಸಿ ಎಂದು ಈ ಮೂಲಕ ಹಾರೈಸುತ್ತೇವೆ.

You might also like
Leave A Reply

Your email address will not be published.