ಎಲ್ಲಿ ರಾಮನೋ ಅಲ್ಲೇ ಹನುಮ

ರಾಮ ಜನ್ಮಭೂಮಿ ಅಯೋಧ್ಯೆ ಮತ್ತು ಹನುಮನ ನಾಡು ಕರ್ನಾಟಕದ ಸಂಬಂಧ ಎಂದಿನಂತೆ ಮತ್ತೆ ಮುಂದುವರೆದಿದೆ. ಹೌದು, ಅಯೋಧ್ಯೆಯ ಗರ್ಭಗುಡಿಯಲ್ಲಿ ಸ್ಥಾಪನೆಗೊಳ್ಳಲಿರುವ ಬಾಲರಾಮನ ವಿಗ್ರಹವನ್ನು ಕೆತ್ತಿರುವುದು, ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ಧಾಮದಲ್ಲಿ ಶಂಕರಾಚಾರ್ಯರ ವಿಗ್ರಹ ಕೆತ್ತನೆ ಮಾಡಿರುವ ಮೈಸೂರಿನ ಅರುಣ್ ಯೋಗಿರಾಜ್ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.

ಗರ್ಭಗುಡಿಯ ಒಳಗೆ ಸ್ಥಾಪನೆಗೊಳ್ಳಲು ಕೆತ್ತಲಾದ ಮೂರು ವಿಗ್ರಹಗಳಲ್ಲಿ ಅಂತಿಮವಾಗಿ ಅರುಣ್ ಅವರು ಕೆತ್ತಿರುವ ವಿಗ್ರಹ ಆಯ್ಕೆಯಾಗಿದ್ದು, ವಿಗ್ರಹಗಳಲ್ಲಿ ಯಾವುದೇ ಸ್ಪರ್ಧೆಯಿರಲಿಲ್ಲ. ಕರ್ನಾಟಕದ ಗಣೇಶ್ ಭಟ್ ಹಾಗೂ ಜೈಪುರದ ಸತ್ಯನಾರಾಯಣ ಪಾಂಡೆ ಅವರು ಕೆತ್ತಿರುವ ಇನ್ನುಳಿದ ಎರಡು ವಿಗ್ರಹಗಳನ್ನು ಕೂಡಾ ರಾಮಮಂದಿರದ ಒಳಗಡೆಯೇ ಸ್ಥಾಪಿಸಲಾಗುತ್ತದೆ ಎಂದು ರಾಮ ಮಂದಿರ ಟ್ರಸ್ಟ್‌‌ನ ಸದಸ್ಯರಾದ ಕಾಮೇಶ್ವರ್ ಚೌಪಾಲ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಸ್ಟ್‌‌ನ ಮೂಲಗಳ ಪ್ರಕಾರ ಬಾಲರಾಮನ ವಿಗ್ರಹ ಕೆತ್ತಲು ಬಳಸಿದ ಕೃಷ್ಣ ಶಿಲೆ ಕೂಡ ಕೃಷ್ಣನ ನಾಡು, ದೇಗುಲಗಳ ಬೀಡಾದ ಉಡುಪಿಯ ಕಾರ್ಕಳದ‌ ನೆಲ್ಲಿಕಾರಿನದ್ದು ಎಂಬುದು ಮತ್ತೊಂದು ವಿಶೇಷ.

ರಾಮಲಲ್ಲಾ ವಿಗ್ರಹವನ್ನು ಕೆತ್ತಲು ಆಧಾರವಾಗಿಟ್ಟುಕೊಂಡ ಸ್ಕೆಚ್ ಕೂಡಾ ಖ್ಯಾತ ಅಂತರಾಷ್ಟ್ರೀಯ ಸ್ಕೆಚ್ ಆರ್ಟಿಸ್ಟ್ ಆದ ಕಾರ್ಕಳದ ವಾಸುದೇವ ಕಾಮತ್ ಅವರದ್ದಾಗಿದ್ದು, ಒಟ್ಟಿನಲ್ಲಿ ಹೇಳುವುದಾದರೆ ಹನುಮನ ನಾಡಿಂದ ಪ್ರಭು ಶ್ರೀ ರಾಮನಿಗೆ ನಾನಾತರದ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಕನ್ನಡಿಗರ ಪಾಲಿಗೆ ದಕ್ಕಿದ ಪುಣ್ಯ.

ಅಂತರಾಷ್ಟ್ರೀಯ ಸ್ಕೆಚ್ ಆರ್ಟಿಸ್ಟ್ , ಕಾರ್ಕಳದ ವಾಸುದೇವ ಕಾಮತ್
You might also like
Leave A Reply

Your email address will not be published.