Ayodhya Rama Mandir : 24 ಅರ್ಚಕರಲ್ಲಿ SC, OBC ಜಾತಿಯವರೆಷ್ಟು ಗೊತ್ತೇ? ಅರ್ಚಕರಿಗೆ ಗುರುಕುಲ ಮಾದರಿಯ ತರಬೇತಿ

ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನಕ್ಕಾಗಿ 5 ಶತಮಾನಗಳ ಕಾಯುವಿಕೆ ಹಾಗೂ 1 ಶತಮಾನದ ಹೋರಾಟ ಇದೇ ಜನವರಿ 22 ರಂದು ಅಂತ್ಯಗೊಳ್ಳಲಿದೆ. ಭವ್ಯ ರಾಮಮಂದಿರದಲ್ಲಿ (Ayodhya Rama Mandir) ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯಾಗಲಿದೆ. ಕರ್ನಾಟಕದವರೇ ಆದ ಅರುಣ್ ಯೋಗಿರಾಜ್ ಅವರು ವಿನ್ಯಾಸಗೊಳಿಸಿದ ರಾಮಲಲ್ಲಾ ಮೂರ್ತಿಯೇ ಗರ್ಭಗುಡಿಯ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ಕನ್ನಡಿಗರೆಲ್ಲರಿಗೂ ಸಂತೋಷದ ಸಂಗತಿ.

ಜ.22 ರಿಂದ ರಾಮಮಂದಿರದಲ್ಲಿ (Ayodhya Rama Mandir) ನಿರಂತರವಾಗಿ ಪೂಜಾ ಪ್ರಕ್ರಿಯೆ ನಡೆಯಲಿದ್ದು, ಇದಕ್ಕಾಗಿ 24 ಜನ ಅರ್ಚಕರನ್ನು ಆಯ್ಕೆಮಾಡಲಾಗಿದೆ. ಆಯ್ಕೆಯಾಗಿರುವ ಅರ್ಚಕರಿಗೆ 3 ತಿಂಗಳುಗಳ ಕಾಲ ಗುರುಕುಲ ಪದ್ಧತಿಯಲ್ಲಿ ತರಬೇತಿ ನೀಡಲಾಗುತ್ತಿದೆ.

ಶ್ರೀರಾಮ ಮಂದಿರದ ಅರ್ಚಕರ ಆಯ್ಕೆ ಪ್ರಕ್ರಿಯೆ ಹೇಗಿತ್ತು?

ಶ್ರೀರಾಮ ಮಂದಿರದ (Ayodhya Rama Mandir) ಶ್ರೀರಾಮನ ಪೂಜೆಗಾಗಿ ದೇಶಾದ್ಯಂತ ಅರ್ಚಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಜಾತಿ, ವಯಸ್ಸಿನ ಮಿತಿಯಿರಲಿಲ್ಲ. 3240 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 25 ಜನ ಅರ್ಚಕರನ್ನು ಆಯ್ಕೆ ಮಾಡಲಾಗಿತ್ತು. 25 ಅರ್ಚಕರ ಪೈಕಿ ಒಬ್ಬರಾದ ಆಚಾರ್ಯ ದೈವಜ್ಞ ಕೃಷ್ಣಶಾಸ್ತ್ರಿಯವರು ಹಿಂದೆ ಸರಿದಿದ್ದಾರೆ.

ಅರ್ಜಿ ಸಲ್ಲಿಸಿದ 3240 ಅಭ್ಯರ್ಥಿಗಳಿಗೆ 3 ಸುತ್ತಿನ ಸಂದರ್ಶನಗಳಲ್ಲಿ 14 ಪ್ರಶ್ನೆಗಳನ್ನು ಕೇಳುವ ಮೂಲಕ ಅವರಲ್ಲಿ 25 ಜನರನ್ನು ಆಯ್ಕೆಮಾಡಲಾಗಿತ್ತು. ಕೊನೆಯ 3 ಸುತ್ತಿನ ಪ್ರಶ್ನೆಗಳಾದ ಹನುಮಾನ್ ವೇದ ಧ್ಯಾನ ಮಂತ್ರ, ಸೀತೆಯ ಧ್ಯಾನ ಮಂತ್ರ ಹಾಗೂ ಭರತ ಧ್ಯಾನ ಮಂತ್ರಗಳು ಕಠಿಣವಾಗಿದ್ದವು ಎಂದು ತಿಳಿದುಬಂದಿದೆ. ಈ ಪ್ರಕ್ರಿಯೆ ನವೆಂಬರ್ ತಿಂಗಳಿನಲ್ಲಿಯೇ ಮುಕ್ತಾಯಗೊಂಡಿದ್ದು, 24 ಜನ ಅರ್ಚಕರನ್ನು ಆಯ್ಕೆಮಾಡಲಾಗಿದೆ.

ಅರ್ಚಕರ ಜಾತಿ ಪಟ್ಟಿ :


ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ 24 ಜನ ಅರ್ಚಕರಲ್ಲಿ ಇಬ್ಬರು ಪರಿಶಿಷ್ಟ ಜಾತಿ (SC) ಸಮುದಾಯಕ್ಕೆ ಹಾಗೂ ಒಬ್ಬರು ಒಬಿಸಿ ಸಮುದಾಯಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಬ್ರಾಹ್ಮಣೇತರ ಜಾತಿಯವರನ್ನು ಆಯ್ಕೆ ಮಾಡಿರುವುದು ಇದೇ ಮೊದಲಲ್ಲ. ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಶೈವ ಸಂಪ್ರದಾಯದವರೇ ಹೆಚ್ಚಿನ ಪ್ರಮಾಣದಲ್ಲಿ ಅರ್ಚಕರಾಗಿ ದೇವರಪೂಜೆ ಸಲ್ಲಿಸುತ್ತಿದ್ದಾರೆ.

ಆಯ್ಕೆಯಾದ ಅರ್ಚಕರಿಗೆ ತರಬೇತಿ ಹೇಗಿದೆ?

ಆಯ್ಕೆಯಾಗಿರುವ 24 ಜನ ಅರ್ಚಕರಿಗೆ ಈಗಾಗಲೇ ಗುರುಕುಲ ಮಾದರಿಯ 3 ತಿಂಗಳ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯ ನಂತರ ಎಲ್ಲರೂ ಶ್ರೀರಾಮ ಮಂದಿರದ (Ayodhya Rama Mandir) ಅರ್ಚಕರಾಗಿ ನಿಯುಕ್ತಿಗೊಳ್ಳಲಿದ್ದಾರೆ. ಶ್ರೀರಾಮ ಮಂದಿರದ ಪ್ರಮುಖ ಅರ್ಚಕರಾಗಿರುವ ಆಚಾರ್ಯ ಸತ್ಯನಾರಾಯಣ ದಾಸ್ ಹಾಗೂ ಸಹ ಅರ್ಚಕ ಆಚಾರ್ಯ ಮಿಥಿಲೇಶ್ ನಂದಿನಿ ಶರಣ್ ಅವರು ದೇವಾಲಯದ ವಿಗ್ರಹ ಪೂಜಿಸಲು ಪೌರೋಹಿತ್ಯ ಮತ್ತು ಆಚರಣೆಗಳ ತರಬೇತಿಯನ್ನು ನೀಡುತ್ತಿದ್ದಾರೆ. ತರಬೇತಿ ಅವಧಿಯಲ್ಲಿ ಅರ್ಚಕರು ಮೊಬೈಲ್ ಬಳಸುವಂತಿಲ್ಲ ಹಾಗೂ ಹೊರಗಿನ ವ್ಯಕ್ತಿಗಳನ್ನು ಸಂಪರ್ಕಿಸುವಂತಿಲ್ಲ ಎಂಬ ನಿಯಮಗಳನ್ನು ವಿಧಿಸಲಾಗಿದೆ.

You might also like
Leave A Reply

Your email address will not be published.