ಮಧ್ಯಂತರ ಬಜೆಟ್ – ಜನಸಾಮಾನ್ಯರ ನಿರೀಕ್ಷೆ ಈಡೇರಲಿದೆಯಾ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ನಲ್ಲಿ ಮೊದಲ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಒಟ್ಟಾರೆಯಾಗಿ ಇದು ಅವರಿಗೆ ಸತತ ಆರನೇ ಬಜೆಟ್ ಆಗಿದೆ. ಈ ಮೂಲಕ ಮೊರಾರ್ಜಿ ದೇಸಾಯಿ ಅವರ ದಾಖಲೆ ಸರಿಗಟ್ಟಿದ್ದಾರೆ. ಅಲ್ಲದೇ ಎನ್ಡಿಎ-2 ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಬೆಳಗ್ಗೆ 11 ಗಂಟೆಗೆ ಅವರ ಬಜೆಟ್ ಭಾಷಣ ಶುರುವಾಗಿದ್ದು, ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಭಾಷಣ ಮುಂದುವರಿಯಬಹುದು.

ಚುನಾವಣೆಗೆ ಮುಂಚಿನ ಬಜೆಟ್ ಇದಾದ್ದರಿಂದ ಸಾಕಷ್ಟು ಕುತೂಹಲವೂ ಜನಮಾನಸದಲ್ಲಿ ಇದೆ. ಆದರೆ, ಚುನಾವಣೆ ಬಳಿಕ ಮತ್ತೆ ಪೂರ್ಣ ಬಜೆಟ್ ಮಂಡನೆ ಆಗುವುದರಿಂದ ಈ ಮಧ್ಯಂತರ ಬಜೆಟ್ಗೆ ಹೆಚ್ಚಿನ ಮಹತ್ವ ಇರುವುದಿಲ್ಲ. ಆದರೂ ಕೂಡ ಸರ್ಕಾರದ ಮುಂದಿನ ದಾರಿ ಬಗ್ಗೆ ಇರುವ ದೃಷ್ಟಿಕೋನ ಹೇಗಿರಬಹುದು ಎಂಬುದನ್ನು ಈ ಬಜೆಟ್ನಿಂದ ತಿಳಿಯಬಹುದು.

ಜನವರಿ 31ರಂದು ಬಜೆಟ್ ಅಧಿವೇಶನ ಚಾಲನೆಗೊಂಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ನಲ್ಲಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ್ದರು. ದೇಶದ ಆರ್ಥಿಕ ಬೆಳವಣಿಗೆಯ ಬಗೆಗೆ ವಿವರಿಸಿದರು. ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಜೆಟ್ ಅನ್ನು ನಾರಿ ಶಕ್ತಿ ವೈಭವ ಎಂದು ಬಣ್ಣಿಸಿದರು. ಹಾಗಾದರೆ ಮಹಿಳಾ ಪ್ರಧಾನವಾಗಿರಲಿದ್ಯಾ ಈ ಬಜೆಟ್ ಎಂಬ ಪ್ರಶ್ನೆ ಹಲವರಲ್ಲಿ ಮನೆ ಮಾಡಿತ್ತು.

Interim budget

ಬಜೆಟ್ ಅಧಿವೇಶನ ಫೆಬ್ರವರಿ 9ರವರೆಗೂ ನಡೆಯಲಿದೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳು ಸಂಸತ್ನಲ್ಲಿ ಅಧಿವೇಶನ ನಡೆಯಲಿದ್ದು, ಬಜೆಟ್ ಮೇಲೆ ಚರ್ಚೆಗಳಾಗಬಹುದು. ಬಜೆಟ್ ಹಿಂದಿನ ದಿನ ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ಈ ಬಾರಿ ಮಧ್ಯಂತರ ಬಜೆಟ್ ಆದ್ದರಿಂದ ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆ ಆಗಿಲ್ಲ. ಅದರ ಬದಲು ಜನವರಿ 29ರಂದು ಆರ್ಥಿಕ ವ್ಯವಹಾರಗಳ ಸಚಿವಾಲಯದಿಂದ ದೇಶದ ಆರ್ಥಿಕ ಪರಿಸ್ಥಿತಿಯ ಪರಾಮರ್ಶೆ ವರದಿ ಮಾತ್ರ ಪ್ರಕಟವಾಗಿತ್ತು. ಅದು ದೇಶದ ಮುಂದಿನ ಎರಡು ವರ್ಷಗಳ ಆರ್ಥಿಕ ಬೆಳವಣಿಗೆಯ ಅಂದಾಜು ಸೇರಿದಂತೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿತ್ತು.

ಈ ಮಧ್ಯಂತರ ಬಜೆಟ್ನಲ್ಲಿ ಲೇಖಾನುದಾನಕ್ಕೆ ಸಮ್ಮತಿ ಪಡೆಯಲಾಗುತ್ತದೆ. ಮುಂದಿನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಸರ್ಕಾರದ ಖರ್ಚು ವೆಚ್ಚಗಳಿಗೆ ಲೇಖಾನುದಾನ ಅನುವು ಮಾಡಿಕೊಡುತ್ತದೆ. ಈ ಬಜೆಟ್ನಲ್ಲಿ ಸಂಬಳದಾರರಿಗೆ ಬಹಳ ಮುಖ್ಯವಾದ ಆದಾಯ ತೆರಿಗೆ ನಿಯಮಗಳಲ್ಲಿ ಒಂದಿಷ್ಟು ಬದಲಾವಣೆಗಳಾಗಬಹುದು. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚುವ ಸಾಧ್ಯತೆ ಇದೆ ಎಂದು ಹಲವರು ನಿರೀಕ್ಷಿಸಿದ್ದಾರೆ. ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ ಇತ್ಯಾದಿ ವೆಚ್ಚಕ್ಕೆ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಬೇಕೆಂಬ ಕೂಗು ಇದೆ.

ಹಾಗೆಯೇ, ಇವಿ ವಲಯ, ಕೃಷಿ, ಸಣ್ಣ ಉದ್ದಿಮೆ ಮೊದಲಾದವುಗಳು ಒಂದಷ್ಟು ನೀತಿ ಬದಲಾವಣೆಗಳನ್ನು ಬಯಸಿವೆ. ಇದೀಗ ಬಜೆಟ್ ಮಂಡನೆಯಾಗುತ್ತಿದ್ದು ಯಾವೆಲ್ಲಾ ಹೂರಣಗಳಿವೆ ಎಂಬುದನ್ನು ಈ ಪೇಜ್ ಅಲ್ಲಿ ನೋಡ್ತಾ ಹೋಗಿ.

You might also like
Leave A Reply

Your email address will not be published.