ಕಳಪೆ ಬೌಲಿಂಗ್‌ : ಹಾರ್ದಿಕ್‌ ಪಾಂಡ್ಯ ಮೇಲೆ ಸೀನಿಯರ್ಸ್‌ ಅಸಮಾಧಾನ

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಕಳಪೆ ಬೌಲಿಂಗ್‌ ಮಾಜಿ ಕ್ರಿಕೆಟಿಗರ ಬೇಸರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಪಾಂಡ್ಯ ಮಾಡಿದ್ದಾದರೂ ಏನು? ಮಾಜಿ ಕ್ರಿಕೆಟಿಗರ ವಿರೋಧಕ್ಕೆ ಗುರಿಯಾಗುವುದ್ದಕ್ಕೆ ಕಾರಣ ಏನು? ಎಂಬಿತ್ಯಾದಿ ಮಾಹಿತಿಗಾಗಿ ಈ ಸ್ಟೋರಿ ಓದಿ.

ಕಳೆದ 2 ಪಂದ್ಯಗಳಲ್ಲಿ ಬೌಲಿಂಗ್‌ ಮಾಡದ ಪಾಂಡ್ಯ ಸಿಎಸ್‌ಕೆ ವಿರುದ್ಧ ಹೆಚ್ಚು ರನ್‌ ಹೊಡೆಸಿಕೊಂಡಿದ್ದು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಪಾಂಡ್ಯ ವಿರುದ್ಧ ಸುನೀಲ್‌ ಗವಾಸ್ಕರ್‌, ಇರ್ಫಾನ್‌ ಪಠಾಣ್‌ ಅವರಂತಹ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದಾರೆ.

ಮುಂಬೈ ತಂಡದ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌, ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ಕಳಪೆಯಾಗಿತ್ತು. ಅವರ ಬೌಲಿಂಗ್‌ ಸಹ ಅಷ್ಟೇನು ಪರಿಣಾಮ ಬೀರಲಿಲ್ಲ, ಸಾಮಾನ್ಯ ಬೌಲಿಂಗ್‌ ಆಗಿತ್ತು. ಬಹುಶಃ ನಾನು ದೀರ್ಘಕಾಲದ ನಂತರ ನೋಡಿದ ಅತ್ಯಂತ ಕೆಟ್ಟ ಬೌಲಿಂಗ್‌ ಇದಾಗಿತ್ತು. ಯಾವುದೇ ಬ್ಯಾಟರ್‌ಗಳು ಸಾಮಾನ್ಯವಾಗಿ ಸ್ಟ್ರೈಟ್‌ ಲೆಂತ್‌ ಬಾಲ್‌ ಹಾಗೂ ಲೆಗ್‌ಸೈಡ್‌ ಫುಲ್‌ಟಾಸ್‌ ಬಾಲ್‌ಗಳನ್ನ ಹುಡುಕುತ್ತಾರೆ. ಅಂತಹ ಅವಕಾಶಗಳು ಸಿಕ್ಕಾಗ ಸಿಕ್ಸರ್‌ ಬಾರಿಸುತ್ತಾರೆ. ಮಹಿ ಈ ಅವಕಾಶವನ್ನೂ ಸರಿಯಾಗಿ ಬಳಸಿಕೊಂಡರು, ಆದ್ರೆ ಪಾಂಡ್ಯ ಅವರ ಬೌಲಿಂಗ್‌ ನಿಯಂತ್ರಿಸುವಲ್ಲಿ ವಿಫಲವಾಗಿತ್ತು ಎಂದು ಟೀಕಿಸಿದ್ದಾರೆ.

ಇನ್ನೂ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಕುರಿತು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌, ಕೊನೇ ಓವರ್‌ನಲ್ಲಿ ಕ್ಯಾಪ್ಟನ್‌ ಪಾಂಡ್ಯ ತಾವೇ ಬೌಲಿಂಗ್‌ಗೆ ಇಳಿದಿದ್ದು, ಆಕಾಶ್‌ ಮಧ್ವಾಲ್‌ ಅವರ ಬೌಲಿಂಗ್‌ ಮೇಲಿನ ನಂಬಿಕೆಯ ಕೊರತೆಯನ್ನು ತೋರಿಸಿದೆ. ಅಲ್ಲದೇ ಡೆತ್‌ ಓರವ್‌ ಬೌಲರ್‌ ಆಗಿ ಅವರ ಕೌಶಲ್ಯದ ಕೊರತೆಯನ್ನೂ ತೋರಿಸಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

ಕೊನೆ ಓವರ್‌ ಥ್ರಿಲ್ಲರ್‌:

ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಪರ ಕೊನೇ ಓವರ್‌ ರೋಚಕವಾಗಿತ್ತು. 19 ಓವರ್‌ಗಳಲ್ಲಿ ಸಿಎಸ್‌ಕೆ 180 ರನ್‌ಗಳನ್ನಷ್ಟೇ ಗಳಿಸಿತ್ತು. ಕೊನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಪಾಂಡ್ಯ ಒಂದು ಎಸೆತ ಪೂರೈಸುವಷ್ಟರಲ್ಲೇ 2 ವೈಡ್‌, 1 ಬೌಂಡರಿ ಚಚ್ಚಿಸಿಕೊಂಡು 6 ರನ್‌ ಬಿಟ್ಟುಕೊಟ್ಟಿದ್ದರು. 2ನೇ ಎಸೆತದಲ್ಲಿ ಡೇರಿಲ್‌ ಮಿಚೆಲ್‌ ಕ್ಯಾಚ್‌ ನೀಡಿ ಔಟಾದರು. ನಂತರ ಕ್ರೀಸ್‌ಗಿಳಿದ ಮಹಿ, ಪಾಂಡ್ಯ ಅವರ 3,4,5ನೇ ಎಸೆತಗಳನ್ನು ಸತತವಾಗಿ ಹ್ಯಾಟ್ರಿಕ್‌ ಸಿಕ್ಸರ್‌ಗಟ್ಟಿದರು, ಕೊನೇ ಎಸೆತದಲ್ಲಿ 2 ರನ್‌ ಬಾರಿಸಿದರು. ಇದರಿಂದ ಸಿಎಸ್‌ಕೆ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಕೊನೇ ಓವರ್‌ನಲ್ಲಿ 26 ರನ್‌ ಬಿಟ್ಟುಕೊಟ್ಟ ಪಾಂಡ್ಯ ತಾವು ಮಾಡಿದ 3 ಓವರ್‌ಗಳಲ್ಲಿ 2 ವಿಕೆಟ್‌ ಪಡೆದು 43 ರನ್‌ ಚಚ್ಚಿಸಿಕೊಂಡಿದ್ದರು.

ಹುಚ್ಚೆದ್ದು ಕುಣಿದ ಮಹಿ ಫ್ಯಾನ್ಸ್‌:

ಕೊನೇ 4 ಎಸೆತಗಳನ್ನ ಎದುರಿಸಿದರೂ 500 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಧೋನಿ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅಂತಿಮ ಓವರ್‌ನಲ್ಲಿ ಕಣಕ್ಕಿಳಿದರೂ ಕೇವಲ 4 ಎಸೆತಗಳಲ್ಲೇ 20 ರನ್‌ ಚಚ್ಚಿದರು. ಅಂತಿಮವಾಗಿ ಸಿಎಸ್‌ಕೆ ಮುಂಬೈ ವಿರುದ್ಧ 20 ರನ್‌ಗಳ ಜಯ ಸಾಧಿಸಿತು.

You might also like
Leave A Reply

Your email address will not be published.