ರೆಬೆಲ್‌ ಶಾಸಕರ ವಕ್ರದೃಷ್ಟಿ ಶಮನಕ್ಕೆ ಯತ್ನ : ಮೂವರು ಹಿರಿಯ ಶಾಸಕರಿಗೆ ಒಲಿದ ಹೊಸ ಹುದ್ದೆ

ತಮ್ಮ ಹಿರಿತನವನ್ನು ಪರಿಗಣಿಸದೇ ಪಕ್ಷ ತಮ್ಮನ್ನು ಮೂಲೆಗುಂಪು ಮಾಡುವ ಕೆಲಸ ಮಾಡುತ್ತಿದೆ. ಅಲ್ಲದೇ, ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸರ್ಕಾರ ಮೇಲೆ ಪದೇ ಪದೇ ಮುಗಿಬೀಳುತ್ತಿದ್ದ ಹಿರಿಯ ಶಾಸಕರ ವಕ್ರದೃಷ್ಟಿಯಿಂದ ಸರ್ಕಾರವನ್ನು ಪಾರು ಮಾಡಲು, ರಾಜ್ಯ ಕಾಂಗ್ರೆಸ್‌ ನೂತನ ಸೂತ್ರ ಹೆಣೆದಿದೆ.

ಸಚಿವ ಸ್ಥಾನದಿಂದ ವಂಚಿತನಾಗಿ, ವಿಧಾನಸಭಾ ಸ್ಪೀಕರ್‌ ಹುದ್ದೆಯನ್ನು ತಳ್ಳಿಹಾಕಿದ್ದ ಹಳಿಯಾಳದ ಶಾಸಕ ಆರ್.‌ ವಿ. ದೇಶಪಾಂಡೆ, ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವನಾಗಿ ಉತ್ತಮ ಕಾರ್ಯನಿರ್ವಹಿಸಿದ್ದರೂ ನೂತನ ಸಚಿವ ಸಂಪುಟದಲ್ಲಿ ಸ್ಥಾನ ನೀಡದೇ ಇರುವುದು ಹಾಗೂ ತನಗಿಂತ ಕಿರಿಯರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಅಸಮಾಧಾನಗೊಂಡಿದ್ದ ಯಲಬುರ್ಗಾದ ಶಾಸಕ ಬಸವರಾಜ ರಾಯರೆಡ್ಡಿ ಹಾಗೂ ಕಾಂಗ್ರೆಸ್‌ ಪಕ್ಷಕ್ಕಾಗಿ ಸಾಕಷ್ಟು ದುಡಿದ್ದೇನೆ, ಹಲವು ಭಾರಿ ಶಾಸಕನಾಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ನೀಡಿಲ್ಲ ಎಂಬ ಕಾರಣದಿಂದ ಅಸಮಾಧಾನಗೊಂಡಿದ್ದ ಆಳಂದದ ಶಾಸಕ ಬಿ. ಆರ್‌ ಪಾಟೀಲ್‌ ಅವರ ಸಿಟ್ಟನ್ನು ಶಮನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಅಸಮಾಧಾನಿತರಿಗೆ ನೂತನ ಹುದ್ದೆ ನೀಡಿ ಆದೇಶ ಹೊರಡಿಸಿದ್ದಾರೆ.

ಆರ್.ವಿ. ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ, ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ಹಾಗೂ ಬಿ. ಆರ್. ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.

ಈ ಮೂರು ಹಿರಿಯ ಶಾಸಕರು ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿ ಮುಖ್ಯಮಂತ್ರಿಗಳಿಗೆ ಆಗಾಗ ಪತ್ರ ಬರೆಯುತ್ತಲೇ ಇದ್ದರು. ಈ ವಿಷಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇತ್ತು. ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನೂ ಈ ಶಾಸಕರುಗಳ ಒಪ್ಪಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಅಸಮಾಧಾನ ತಣಿಸುವ ಮುಖ್ಯಮಂತ್ರಿಗಳು ಈ ಪ್ರಯತ್ನ ಮಾಡಿದ್ದಾರೆ. ಮುಂದಿನ ಹಂತದಲ್ಲಿ ಶಾಸಕರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ.

You might also like
Leave A Reply

Your email address will not be published.