ಕಸದಿಂದ ರಸ – ಗುಜರಿ ಮಾರಾಟದಿಂದ ಬಂದ ಆದಾಯ ಎಷ್ಟು ಗೊತ್ತಾ?

ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರವು ಹಳೆ ಕಡತ, ಕಚೇರಿಯಲ್ಲಿನ ತುಂಡಾದ ಉಪಕರಣಗಳು ಹಾಗೂ ಬಳಕೆಯಲ್ಲಿಲ್ಲದ ವಾಹನ ಸೇರಿದಂತೆ ಗುಜರಿ ವಸ್ತುಗಳ ಮಾರಾಟದಿಂದ ಗಳಿಸಿದ ಹಣ ಎಷ್ಟು ಗೊತ್ತಾ? ಯಾವ ಯಾವ ಸಚಿವಾಲಯದಿಂದ ಎಷ್ಟೆಷ್ಟು ಹಣ ಗಳಿಸಿದೆ? ಗಳಿಸಿದ ಹಣವನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ? ಎಂಬಿತ್ಯಾದಿ ಮಾಹಿತಿಗಳ ಕುರಿತಾದ ವರದಿ ಇಲ್ಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಸ್ವಚ್ಛತೆಯ ಕಾರ್ಯಕ್ರಮದಿಂದ ಆಗುತ್ತಿರುವ ಲಾಭವನ್ನೊಮ್ಮೆ ನೋಡಿದರೆ ಅಚ್ಚರಿಯಾಗುವುದು ಖಂಡಿತ. ಸರ್ಕಾರದಲ್ಲಿರುವ ಹಳೇ ಕಡತ, ಕಚೇರಿಯಲ್ಲಿನ ತುಂಡಾದ ಉಪಕರಣಗಳು ಮತ್ತು ಬಳಕೆಯಲ್ಲಿಲ್ಲದ ವಾಹನ ಸೇರಿದಂತೆ ಇತರೆ ಗುಜರಿ ವಸ್ತುಗಳನ್ನು ಮಾರಾಟ ಮಾಡಿದ್ದು, ಅಕ್ಟೋಬರ್ 2021 ರಿಂದ ಇಲ್ಲಿಯವರೆಗೆ ಸುಮಾರು 1,163 ಕೋಟಿ ರೂಪಾಯಿಗಳನ್ನು ಗಳಿಸಿದೆ. 2023 ರಲ್ಲಿ 556 ಕೋಟಿ ರೂ. ಲಾಭ ಗಳಿಸಿದೆ.

ಗುಜಾರಿ ಮಾರಾಟದಲ್ಲಿ ಯಾವ ಯಾವ ಸಚಿವಾಲಯದಿಂದ ಎಷ್ಟೆಷ್ಟು ಲಾಭ?

2023 ರ ವರ್ಷದಲ್ಲಿ ಗುಜರಿ ಮಾರಾಟದಿಂದ ಬಂದ ಲಾಭದಲ್ಲಿ ರೈಲ್ವೆ ಸಚಿವಾಲಯದ್ದೇ ಮೇಲುಗೈ. ಹೌದು! ಸರ್ಕಾರವು ಗುಜರಿ ಮಾರಾಟದಿಂದ ಗಳಿಸಿದ 556 ಕೋಟಿ ರೂಪಾಯಿಗಳಲ್ಲಿ ಸುಮಾರು 225 ಕೋಟಿ ರೂಪಾಯಿಗಳನ್ನು ರೈಲ್ವೇ ಸಚಿವಾಲಯದಿಂದಲೇ ಗಳಿಸಿದೆ. ಇದರ ಹೊರತಾಗಿ ಹೆಚ್ಚು ಲಾಭ ಗಳಿಸಿದ ಸಚಿವಾಲಯಗಳ ಪೈಕಿ,

  • ರಕ್ಷಣಾ ಸಚಿವಾಲಯ – 168 ಕೋಟಿ ರೂ.
  • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ – 56 ಕೋಟಿ ರೂ.
  • ಕಲ್ಲಿದ್ದಲು ಸಚಿವಾಲಯ – 34 ಕೋಟಿ ರೂ.

ಸ್ವಚ್ಛತಾ ಅಭಿಯಾನದಿಂದ ಇ-ಫೈಲ್ ಅಳವಡಿಕೆಯು ಶೇ.96ಕ್ಕೆ ಏರಿಕೆ:

2023ರ ವರ್ಷದಲ್ಲಿ ಸುಮಾರು 24 ಲಕ್ಷ ಕಡತಗಳನ್ನು ನಾಶ ಮಾಡಲಾಗಿದ್ದು, ಗರಿಷ್ಠ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ 3.9 ಲಕ್ಷ ಕಡತಗಳನ್ನು ನಾಶಮಾಡಲಾಗಿದೆ. ಇನ್ನೂ ಸೇನಾ ವ್ಯವಹಾರಗಳ ಇಲಾಖೆಯಲ್ಲಿ 3.15 ಲಕ್ಷ ಕಡತಗಳನ್ನು ಈಗಾಗಲೇ ತೆಗೆಯಲಾಗಿದೆ.

ಅಕ್ಟೋಬರ್ 2021 ರಿಂದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ 96 ಲಕ್ಷ ಕಡತಗಳನ್ನು ಗುಜರಿಗೆ ಹಾಕಲಾಗಿದೆ. ಈ ಮೂಲಕ ಸರ್ಕಾರಿ ಕಚೇರಿಗಳಲ್ಲಿ ಸುಮಾರು 355 ಲಕ್ಷ ಚದರ ಅಡಿ ಜಾಗವನ್ನು ಖಾಲಿ ಮಾಡಲಾಗಿದೆ. ಇದರಿಂದ ಕಚೇರಿಗಳಲ್ಲಿನ ಕಾರಿಡಾರ್ಗಳನ್ನು ಸ್ವಚ್ಛಗೊಳಿಸಲು, ಮುಕ್ತ ಸ್ಥಳವನ್ನು ಮನರಂಜನಾ ಕೇಂದ್ರಗಳಾಗಿ ಮತ್ತು ಇತರ ಉಪಯುಕ್ತ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಸ್ವಚ್ಛತಾ ಅಭಿಯಾನದ ಪ್ರಭಾವದಿಂದಾಗಿ ಇ-ಫೈಲ್ ಅಳವಡಿಕೆಯು ಸರ್ಕಾರದಲ್ಲಿ ಸುಮಾರು ಶೇ.96ಕ್ಕೆ ಏರಿಕೆ ಆಗಿದ್ದು, ಸುಮಾರು 2.58 ಲಕ್ಷ ಕಚೇರಿ ಸೈಟ್ಗಳನ್ನು ಸ್ವಚ್ಛತಾ ಅಭಿಯಾನದಲ್ಲಿ ಒಳಪಡಿಸಲಾಗಿದೆ.

ಈ ವರ್ಷ ಮುಕ್ತಗೊಳಿಸಲಾದ ಒಟ್ಟು 164 ಲಕ್ಷ ಚದರ ಅಡಿ ಜಾಗದಲ್ಲಿ ಗರಿಷ್ಠ ಜಾಗವನ್ನು ಕಲ್ಲಿದ್ದಲು ಸಚಿವಾಲಯದಲ್ಲಿ 66 ಲಕ್ಷ ಚದರ ಅಡಿ ಮತ್ತು ಕೈಗಾರಿಕೆ ಸಚಿವಾಲಯ 21 ಲಕ್ಷ ಚದರ ಅಡಿಗಳಲ್ಲಿ ಮುಕ್ತಗೊಳಿಸಲಾಗಿದೆ. ರಕ್ಷಣಾ ಸಚಿವಾಲಯ 19 ಲಕ್ಷ ಚದರ ಅಡಿಗಳಲ್ಲಿ ಮುಕ್ತಗೊಳಿಸಿದೆ ಎಂದು ವರದಿ ನೀಡಿದೆ.

ಗುಜರಿ ಮಾರಿದ ಹಣದಿಂದ 2 ಚಂದ್ರಯಾನಕ್ಕಾಗುವಷ್ಟು ಹಣ ಸಂಗ್ರಹ:

ದೇಶದ ಪ್ರತಿಷ್ಠಿತ ಬಾಹ್ಯಕಾಶ ಸಂಸ್ಥೆ ಇಸ್ರೋ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಚಂದ್ರಯಾನ – 3 ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಸ್ವಾಗತಾರ್ಹ. ಆದರೆ, ಕೇಂದ್ರ ಸರ್ಕಾರವು 2021ರ ಅಕ್ಟೋಬರ್ ನಿಂದ ಇಲ್ಲಿಯವರೆಗೆ ಗುಜರಿ ಸಾಮಾಗ್ರಿಗಳನ್ನು ಮಾರಿ ಎರಡು ಚಂದ್ರಯಾನ ಕೈಗೊಳ್ಳುವಷ್ಟು ಹಣ ಸಂಪಾದಿಸಿರುವುದು ಅಚ್ಚರಿಯ ಸಂಗತಿಯಾಗಿದೆ.

You might also like
Leave A Reply

Your email address will not be published.