ಅಕ್ರಮ ಮನೆ ನಿರ್ಮಿಸಿದವರಿಗೆ ತೆರಿಗೆ ಬರೆ – ಬಿಬಿಎಂಪಿ

ಮಹಾನಗರ ಪಾಲಿಕೆ ವ್ಯಾಪ್ತಿಯಡಿ ನಿಯಮ ಉಲ್ಲಂಘಿಸಿ ಮನೆ ನಿರ್ಮಿಸಿಕೊಂಡವರಿಗೆ ಸರ್ಕಾರದಿಂದ ಬಿಗ್ ಶಾಕ್! ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿದವರಿಗೆ ಬಿಬಿಎಂಪಿ ಮಾದರಿ ಶೈಲಿಯಲ್ಲೇ ದಂಡ ವಿಧಿಸಲು ಸರ್ಕಾರ ಸಜ್ಜಾಗಿದೆ. ಹಾಗಾದರೆ, ಸರ್ಕಾರ ರೂಪಿಸಿರುವ ನಿಯಮಗಳೇನು? ಅಕ್ರಮ ಮನೆ ನಿರ್ಮಸಿದವರು ಮುಂದೇನು ಮಾಡಬೇಕು? ಎಂಬಿತ್ಯಾದಿ ಮಾಹಿತಿಗಳ ಕುರಿತಾದ ವರದಿ ಇಲ್ಲಿದೆ.

ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಗುರುವಾರ ನಡೆದ ಬಿಬಿಎಂಪಿ ಕಾಯ್ದೆ 2020ರ ಕಲಂ 144 (6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಸಂಬಂಧ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ-ಬಾಧಕ ಪರಿಶೀಲಿಸಲು ಸೂಕ್ತ ತೀರ್ಮಾನ ಕೈಗೊಳ್ಳುವ ಸಲುವಾಗಿ ರಚಿಸಲಾಗಿರುವ ಉಪಸಮಿತಿ ಸಭೆಯನ್ನು ಆಯೋಜಿಸಲಾಗಿತ್ತು.

ಬಡಾವಣೆ ಅನುಮೋದನೆ, ನಕ್ಷೆ ಮಂಜೂರಾತಿ ಇಲ್ಲದೆ ನಿಯಮ ಉಲ್ಲಂಘಿಸಿ ಕಂದಾಯ ಭೂಮಿಯಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟಡಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರೀತಿಯಲ್ಲೇ ರಾಜ್ಯಾದ್ಯಂತ ಏಕರೂಪವಾಗಿ ತೆರಿಗೆ ವಿಧಿಸುವುದು ಸೂಕ್ತ ಎಂದು ಉಪಸಮಿತಿ ಸಭೆಯ ಅಧ್ಯಕ್ಷ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಈವರೆಗೆ ನಡೆದಿರುವ ಎಲ್ಲ ಸಭೆಗಳಲ್ಲಿ ನಡೆದ ಚರ್ಚೆಯ ಅಂಶಗಳನ್ನು ಕ್ರೋಢೀಕರಿಸಿ, ಮಸೂದೆ ರೂಪಿಸಲು ಮತ್ತು ಬಿಬಿಎಂಪಿಯಲ್ಲಿ ‘ಬಿ’ ಕಟ್ಟಡ ತೆರಿಗೆ ವಿಧಿಸುತ್ತಿರುವ ರೀತಿಯಲ್ಲೇ ರಾಜ್ಯದ ಇತರ ಪ್ರದೇಶಗಳಲ್ಲೂ ತೆರಿಗೆ ಸಂಗ್ರಹಿಸಲು ನಿಯಮಾವಳಿ ರೂಪಿಸುವಂತೆ ಸೂಚಿಸಿದರು.

ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.

ಉಪಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿಯಮಗಳೇನು:

1. ನಕ್ಷೆ ಮಂಜೂರಾತಿ ಪಡೆದ ಬಳಿಕ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ವಿರುದ್ಧ ಹಾಗೂ ನಿರ್ಮಾಣ ಹಂತದಲ್ಲೇ ಇಂತಹ ಕಟ್ಟಡ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು.
2. ನ್ಯಾಯಸಮ್ಮತವಾಗಿ ಸಾರ್ವಜನಿಕ ಉದ್ದೇಶಕ್ಕೆ ಜಾಗ ಬಿಟ್ಟು ಬಡಾವಣೆ ನಿರ್ಮಿಸಲು ಮುಂದಾದರೆ ಮತ್ತು ಮನೆ ನಿರ್ಮಾಣ ಮಾಡಲು ನಿಯಮಾನುಸಾರ ನಕ್ಷೆ ಮಂಜೂರಾತಿ ಬಯಸಿದಲ್ಲಿ ನಿಯಮ ಸರಳಗೊಳಿಸಿ, ಮುಖಾಮುಖೀ ರಹಿತವಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಮಂಜೂರಾತಿ ಲಭಿಸುವಂತೆ ತಂತ್ರಾಂಶ ಅಭಿವೃದ್ಧಿಪಡಿಸುವ ಅಗತ್ಯವನ್ನೂ ಪ್ರತಿಪಾದಿಸಿದರು.
3. ಯಾರೊಬ್ಬರೂ ನಕಲಿ ಖಾತೆ ಪಡೆದು ನೋಂದಣಿ ಮಾಡಿಸದಂತೆ ಕಾವೇರಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಿದರೆ ಆಗ ಅನಧಿಕೃತ ಬಡಾವಣೆ, ಕಟ್ಟಡಗಳನ್ನು ನಿಯಂತ್ರಿಸಬಹುದು.
4. ನೂತನವಾಗಿ ಯಾವುದೇ ಸಮುಚ್ಚಯಗಳನ್ನು, ಗುಂಪು ಮನೆಗಳನ್ನು ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವಾಗ ವಾಯು, ಜಲ ಸಹಿತ ಪರಿಸರ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ವಿರುದ್ಧ ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

You might also like
Leave A Reply

Your email address will not be published.