ಹಿಮಾಚಲದಲ್ಲೂ ಕರಗುತ್ತಿರುವ ಕಾಂಗ್ರೆಸ್ – ರಾಜೀನಾಮೆ ನೀಡಿದ ಈ ಪ್ರಮುಖ ಸಚಿವ!

ಲೋಕಸಭಾ ಚುನಾವಣೆಗೆ ಇನ್ನೇನು ತಿಂಗಳಷ್ಟೇ ಬಾಕಿಯಿರುವಂತೆ, ರಾಜಕೀಯ ಪಕ್ಷಗಳ ಹಾರಾಟ ಜೋರಾಗಿದೆ. ಈ ನಡುವೆ, ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದ ಇಂಡಿ ಒಕ್ಕೂಟಕ್ಕೆ ಕ್ಷಣಕ್ಷಣಕ್ಕೂ ಭಿನ್ನಾಭಿಪ್ರಾಯದ ಬಿಸಿ ಮುಟ್ಟುತ್ತಿದ್ದು, ಈಗಾಗಲೇ ಬಹಳಷ್ಟು ಮಂದಿ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿ ಬಿಜೆಪಿ ಬಾಗಿಲು ತಟ್ಟಿದ್ದಲ್ಲದೇ, I.N.D.I ಒಕ್ಕೂಟದ ಪ್ರಾದೇಶಿಕ ಪಕ್ಷಗಳು ಕೂಡ ಒಕ್ಕೂಟಕ್ಕೆ ಗುಡ್ ಬೈ ಹೇಳಿವೆ. ಈ ನಡುವೆ ಹಿಮಾಚಲ ಪ್ರದೇಶದ ಈ ಮಂತ್ರಿಗಳು ರಾಜೀನಾಮೆ ನೀಡಿರುವುದು ರಾಜಕೀಯ ರಂಗದಲ್ಲಿ ಕಾಂಗ್ರೆಸ್ಸಿಗೆ ಭಯ ಹುಟ್ಟಿಸಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ನಾಯಕತ್ವದ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ ಬೆನ್ನಲ್ಲೇ ತನ್ನ ಪಿಡಬ್ಲ್ಯೂ ಖಾತೆಗೆ ರಾಜೀನಾಮೆ‌ ನೀಡಿರುವ ಸಚಿವ ವಿಕ್ರಮಾದಿತ್ಯ ಸಿಂಗ್ ನಡೆ ಹಿಮಾಚಲ ಪ್ರದೇಶದ ರಾಜಕೀಯ ರಂಗದಲ್ಲಿ ಧೂಳೆಬ್ಬಿಸಿದೆ.

“ಈ ಸಂದರ್ಭದಲ್ಲಿ ಪ್ರಸ್ತುತ ಸರ್ಕಾರದೊಂದಿಗೆ ನಡೆಯುವುದರಲ್ಲಿ ನನಗೆ ಯಾವುದೇ ಪ್ರಯೋಜನ‌ ಕಾಣುತ್ತಿಲ್ಲ. ಹಾಗಾಗಿ ನನ್ನ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಮ್ಮ ಜನರೊಂದಿಗೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದೇನೆ” ಎಂದು ಮಾಧ್ಯಮಕ್ಕೆ ತಿಳಿಸಿದ ಸಚಿವ ವಿಕ್ರಮಾದಿತ್ಯ ಸಿಂಗ್, ಪರೋಕ್ಷವಾಗಿ ತನ್ನ ತಾಯಿ ಹಾಗೂ ರಾಜ್ಯ ಘಟಕದ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು ಸಿಎಂ ಸುಖ್ವಿಂದರ್ ಸಿಂಗ್ ನಡುವಿನ ಭಿನ್ನಾಭಿಪ್ರಾಯಕ್ಕೆ ಇನ್ನಷ್ಟು ಪುಷ್ಟಿ ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ರಾಜಕೀಯದ ಬಿರುಗಾಳಿ ಎದ್ದಿದ್ದು, ಆರು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ‌ ಮಾಡಿ‌ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರ ಸೋಲಿಗೆ ಕಾರಣರಾಗಿರುವ ನಡುವೆಯೇ, ಪಿಡಬ್ಲ್ಯೂ ಸಚಿವರ ಈ ನಡೆ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಇಂತಹ ಅನಿರೀಕ್ಷಿತ ನಡೆಗಳಿಂದ ಈಗಾಗಲೇ ಕುಗ್ಗಿಹೋಗಿರುವ ಕಾಂಗ್ರೆಸ್ ಅಥವಾ I.N.D.I ಒಕ್ಕೂಟವು ಹಲ್ಲಿಲ್ಲದ ಹಾವಿನಂತೆ ಗೆಲುವಿನ ಕನಸು ಕಾಣುತ್ತಾ ಮುಂದುವರೆಯುತ್ತಿರುವಂತೆ ಭಾಸವಾಗುತ್ತಿದೆ.

You might also like
Leave A Reply

Your email address will not be published.