ದೆಹಲಿಯಲ್ಲಿ ಆಪರೇಷನ್ ಕಮಲ – ಕೇಜ್ರೀವಾಲ್ ಗುಡುಗು

ರಾಷ್ಟ್ರರಾಜಧಾನಿ ದೆಹಲಿಯಲ್ಲಿ 7 ಆಮ್ ಆದ್ಮಿ ಪಕ್ಷದ (AAP MLAs) ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಫರ್‌ ನೀಡುವ ಮೂಲಕ ಆಪ್‌ ಸರ್ಕಾರವನ್ನು ಕೆಡವಲು ಸಂಚು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ‌ ಪೋಸ್ಟ್‌ ಹಂಚಿಕೊಂಡಿರುವ ಕೇಜ್ರಿವಾಲ್‌, ಬಿಜೆಪಿ ಆಪ್‌ ಶಾಸಕರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದು, ಆಪ್‌ ಸರ್ಕಾರವನ್ನು ಸಂಪೂರ್ಣವಾಗಿ ಮುಗಿಸಲು ಪ್ಲ್ಯಾನ್‌ ಮಾಡಿದೆ. ಆದ್ದರಿಂದ ದೆಹಲಿ ಮದ್ಯ ನೀತಿ ಪ್ರಕರಣಕ್ಕೆ (Delhi liquor Policy Case) ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದೆ ಎಂದು ಈ ಮೂಲಕ ಕಿಡಿ ಕಾರಿದ್ದಾರೆ.

ಕೇಜ್ರಿವಾಲ್ ಮಾಡಿರುವ ಆರೋಪ ಏನು?

ಇತ್ತೀಚೆಗೆ ಬಿಜೆಪಿ ನಾಯಕರು ಎಎಪಿಯ 7 ಶಾಸಕರನ್ನ ಸಂಪರ್ಕಿಸಿದ್ದಾರೆ. ಕೆಲ ದಿನಗಳ ನಂತರ ನಾವು ಕೇಜ್ರಿವಾಲ್‌ ಅವರನ್ನ ಬಂಧಿಸುತ್ತೇವೆ. ನಂತರ ಶಾಸಕರನ್ನ ಇಬ್ಭಾಗ ಮಾಡಿ ದೆಹಲಿಯ ಆಪ್‌ ಸರ್ಕಾರವನ್ನ ಸಂಪೂರ್ಣವಾಗಿ ಉರುಳಿಸುತ್ತೇವೆ. ಈಗಾಗಲೇ 21 ಶಾಸಕರೊಟ್ಟಿಗೆ ಮಾತುಕತೆ ನಡೆಸಿದ್ದೇವೆ. ನೀವೂ ಬಂದುಬಿಡಿ, ಪ್ರತಿಯೊಬ್ಬರಿಗೆ ತಲಾ 25 ಕೋಟಿ ರೂ. ಕೊಡುತ್ತೇವೆ. ಜೊತೆಗೆ ಬಿಜೆಪಿಯಿಂದ ಟಿಕೆಟ್‌ ನೀಡುತ್ತೇವೆ ಎಂದು ಆಮಿಷ ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದು ಬಿಜೆಪಿಯ ನಡವಳಿಕೆಯನ್ನು ತೋರಿಸುತ್ತದೆ. ಮದ್ಯ ನೀತಿ ಹಗರಣ ತನಿಖೆಯಲ್ಲಿ ನನ್ನನ್ನು ಬಂಧಿಸಲಾಗುತ್ತಿಲ್ಲ. ಆದ್ದರಿಂದ ಆಪ್‌ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸುತ್ತಿದ್ದಾರೆ. ಅವರ ಷಡ್ಯಂತ್ರ ಇದೇ ಮೊದಲೇನಲ್ಲ.

ಕಳೆದ 9 ವರ್ಷಗಳಿಂದಲೂ ಇಂತಹ ಅನೇಕ ಷಡ್ಯಂತ್ರಗಳನ್ನು ಮಾಡುತ್ತಲೇ ಬಂದಿದ್ದಾರೆ. ಯಾವುದೂ ಸಕ್ಸಸ್‌ ಆಗಿಲ್ಲ. ಏಕೆಂದರೆ ದೇವರು ಮತ್ತು ಈ ರಾಜ್ಯದ ಜನತೆ ಸದಾ ನಮ್ಮನ್ನು ಬೆಂಬಲಿಸಿದ್ದಾರೆ. ನಮ್ಮ ಎಲ್ಲ ಶಾಸಕರೂ ಬಲವಾಗಿ ಜೊತೆಯಲ್ಲಿದ್ದು ಆಫರ್‌ ಅನ್ನು ದೃಢವಾಗಿ ತಿರಸ್ಕರಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

You might also like
Leave A Reply

Your email address will not be published.