ಶೋಭಾಗೆ ಒಲಿಯುತ್ತಾ ಮತದಾರನ ಆಶೀರ್ವಾದ? – ಬೆಂಗಳೂರು ಉತ್ತರ ಕ್ಷೇತ್ರದ ಪೂರ್ಣ ಮಾಹಿತಿ ಇಲ್ಲಿದೆ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿಹೆಚ್ಚು ಮತದಾರರನ್ನು ಹೊಂದಿರುವುದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ಮಾರ್ಚ್ ಹದಿನಾರಕ್ಕೆ ಚುನಾವಣಾ ಆಯೋಗ ಹೊರಡಿಸಿದ ಸರ್ಕ್ಯೂಲರ್ ಪ್ರಕಾರ ಇಲ್ಲಿ ಪುರುಷರು 16,29,089, ಮಹಿಳೆಯರು 15,44,415, ಇತರರು 594 ಸೇರಿದಂತೆ ಒಟ್ಟು 31,74,098 ಮತದಾರರಿದ್ದಾರೆ. ಕಳೆದ ನಾಲ್ಕು ಬಾರಿ ಬಿಜೆಪಿ ಗೆಲ್ಲಿಸಿದ ಮತದಾರರ ಮೂಡ್ ಈ ಬಾರಿ ಹೇಗಿದೆ? ನೋಡೋಣ ಬನ್ನಿ..

ಕಳೆದ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅನ್ನೇ ಗೆಲ್ಲಿಸಿದ ಮತದಾರರು ಈ ಬಾರಿ ಏನ್ ಮಾಡ್ತಾರೆ? ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈ ಕ್ಷೇತ್ರದಿಂದ ಗೆದ್ದ ಸಂಸದರಲ್ಲಿ ಕೆಲವರು ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅಲ್ಲದೇ ಕಾಂಗ್ರೆಸ್ಸಿನ ಸಿ.ಕೆ.ಜಾಫರ್ ಷರೀಫ್ ಈ ಕ್ಷೇತ್ರದಿಂದ ಸತತ ಐದು ಬಾರಿ, ನಂತರ ಎರಡು ಬಾರಿ ಗೆದ್ದಿದ್ದರು. ಬಟ್ ಬಿಜೆಪಿಗೆ ಮಾತ್ರ ಅವರ ಸೇಫ್ ಕ್ಷೇತ್ರಗಳಲ್ಲಿ ಬೆಂಗಳೂರು ಉತ್ತರವೂ ಒಂದು.

ಒಟ್ಟಾರೆಯಾಗಿ 1952 ರಿಂದ 2019ರವರೆಗಿನ ಹದಿನೇಳು ಚುನಾವಣೆಯಲ್ಲಿ ಹನ್ನೆರಡು ಬಾರಿ ಕಾಂಗ್ರೆಸ್, ನಾಲ್ಕು ಬಾರಿ ಬಿಜೆಪಿ ಮತ್ತು ಒಮ್ಮೆ ಜೆಡಿಎಸ್ ಗೆಲುವು ಸಾಧಿಸಿದ್ದರು. 2004ರಿಂದ ಈಚೆಗಿನ ನಾಲ್ಕು ಚುನಾವಣೆಯಲ್ಲಿ ತಲಾ ಒಮ್ಮೆ, ಎಚ್.ಟಿ.ಸಾಂಗ್ಲಿಯಾನ, ಡಿ.ಬಿ.ಚಂದ್ರೇಗೌಡ ಮತ್ತು ಎರಡು ಬಾರಿ ಡಿ.ವಿ.ಸದಾನಂದ ಗೌಡ ಗೆಲುವು ಸಾಧಿಸಿದ್ದರು.

ಬಿಜೆಪಿಯಿಂದ ಶೋಭಾ; ಕಾಂಗ್ರೆಸ್ಸಿನಿಂದ ರಾಜೀವ್ ಗೌಡ: ಯಾರಿಗೆ ಒಲಿಯುತ್ತೆ ಈ ಕ್ಷೇತ್ರ?

ಬಿಜೆಪಿಯಿಂದ ಶೋಭಾ; ಕಾಂಗ್ರೆಸ್ಸಿನಿಂದ ರಾಜೀವ್ ಗೌಡ: ಯಾರಿಗೆ ಒಲಿಯುತ್ತೆ ಈ ಕ್ಷೇತ್ರ?

ಎರಡು ಬಾರಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಹಲವು ಖಾತೆಯನ್ನು ನಿಭಾಯಿಸಿದ್ದ ಹಾಲೀ ಸಂಸದ ಸದಾನಂದ ಗೌಡ್ರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಲಿಲ್ಲ. ಬದಲಿಗೆ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲಾಗಿದೆ. ಇನ್ನು, ಕಾಂಗ್ರೆಸ್ಸಿನಿಂದ ಪ್ರೊ.ರಾಜೀವ್ ಗೌಡ ಸ್ಪರ್ಧಿಸಲಿದ್ದಾರೆ. ಇಬ್ಬರೂ, ಒಕ್ಕಲಿಗ ಸಮುದಾಯದವರು.

ಇನ್ನೂ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಐವರು (ಕೆ.ಆರ್.ಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ), ಇನ್ನು ಕಾಂಗ್ರೆಸ್ಸಿನ ಮೂವರು (ಬ್ಯಾಟರಾಯನಪುರ, ಹೆಬ್ಬಾಳ, ಪುಲಿಕೇಶಿನಗರ) ಶಾಸಕರಿದ್ದಾರೆ. ಇದರಲ್ಲಿ ಯಶವಂತಪುರ ಶಾಸಕರಾದ ಎಸ್.ಟಿ.ಸೋಮಶೇಖರ್ ಅವರ ಬೆಂಬಲವನ್ನು ಬಿಜೆಪಿ ನಿರೀಕ್ಷಿಸುವಂತಿಲ್ಲ.

ಒಕ್ಕಲಿಗರ ಆಯ್ಕೆಯೇ ಯಾಕೆ?

ಕ್ಷೇತ್ರದ ಜಾತಿಲೆಕ್ಕಾಚಾರದ ಕಡೆ ಹೋಗುವುದಾದರೆ, ನಿರ್ಣಾಯಕ ಪಾತ್ರವಹಿಸುವುದು ಒಕ್ಕಲಿಗ ಸಮುದಾಯದವರು (ಅಂದಾಜು 13.5 ಲಕ್ಷ). ಈ ಕಾರಣಕ್ಕಾಗಿಯೇ ಇಲ್ಲಿ ಎರಡೂ ಪಕ್ಷಗಳು ಒಕ್ಕಲಿಗರನ್ನೇ ಅಭ್ಯರ್ಥಿಯನ್ನಾಗಿ ಮಾಡಿದೆ. ಇನ್ನು, ಎಸ್ಸಿ / ಎಸ್ಟಿ – 6.5 ಲಕ್ಷ, ಮುಸ್ಲಿಂ – 7 ಲಕ್ಷ, ಕುರುಬ 5.5 ಲಕ್ಷ, ಲಿಂಗಾಯತ 5 ಲಕ್ಷ, ಇತರರು 2 ಲಕ್ಷ ಅಂದಾಜು ಮತದಾರರಿದ್ದಾರೆ.

ಸಮೀಕ್ಷೆಗಳ ಪ್ರಕಾರ, ಬಿಜೆಪಿ ನಾಲ್ಕು ಸ್ಥಾನವನ್ನು ಗೆಲ್ಲಲಿದೆ:

ಇತ್ತೀಚಿನ ಎಲ್ಲಾ ಸಮೀಕ್ಷೆಗಳ ಪ್ರಕಾರ, ಬಿಜೆಪಿಯು ಬೆಂಗಳೂರಿನ ಎಲ್ಲಾ ನಾಲ್ಕು ಸ್ಥಾನವನ್ನು ಗೆಲ್ಲಲಿದೆ, ಜೊತೆಗೆ, ಒಟ್ಟಾರೆಯಾಗಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಮಹಿಳೆಯರು ಮತ್ತು ಯುವ ಸಮುದಾಯದ ಬೆಂಬಲ ಮೋದಿ ಪರವಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಮತವಿಭಜನೆಯಾಗಿತ್ತು, ಈ ಬಾರಿ ಬಿಜೆಪಿಗೆ ಆ ಭಯವಿಲ್ಲ. ಒಟ್ಟಾರೆಯಾಗಿ, ಇಲ್ಲಿನ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

You might also like
Leave A Reply

Your email address will not be published.