ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಬಿಜೆಪಿಯಿಂದ ಕಣಕ್ಕೆ – ಘರ್ ವಾಪ್ಸಿ ಮಾಡಲಿದ್ದಾರಾ ಸಿಕ್ಸರ್ ಸಿದ್ದು

ಬಿಜೆಪಿಯಿಂದ ಹೊರಬಂದು, ಪ್ರಧಾನಿ ಮೋದಿ ಅವರ ಕಟು ಟೀಕಾಕಾರರಾಗಿದ್ದ ‘ಸಿಕ್ಸರ್ ಸಿಧು’ ಖ್ಯಾತಿಯ ನವಜೋತ್ ಸಿಂಗ್ ಸಿಧು ಕೇಸರಿ ಪಕ್ಷಕ್ಕೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸತ್ಯವೋ? ವದಂತಿಯೋ? ಈ ಸ್ಟೋರಿ ಓದಿ..

ಮಾಜಿ ಆಲ್‌ ರೌಂಡರ್ ಯುವರಾಜ್ ಸಿಂಗ್ ಅವರನ್ನು ಗುರುದಾಸ್ಪುರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ರೈತರ ಪ್ರತಿಭಟನೆ ಸಂಗತಿಯನ್ನು ನಿರ್ವಹಿಸುತ್ತಿರುವ ರೀತಿ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ನವಜೋತ್ ಸಿಂಗ್ ಸಿಧು ಟೀಕಾಪ್ರಹಾರ ನಡೆಸಿದ್ದರೂ, ಅವರ ಬಿಜೆಪಿ ಸೇರ್ಪಡೆ ವದಂತಿ ಇನ್ನಷ್ಟು ದಟ್ಟವಾಗುತ್ತಿದೆ. ತಮ್ಮ ವಿಶಿಷ್ಟ ಮಾತಿನ ಶೈಲಿಗೆ ಹೆಸರಾದ ಸಿಧು, ಈ ಹಿಂದೆ ಬಿಜೆಪಿಗೆ ಉರುಳಾಗಿದ್ದಂತೆಯೇ ಕಾಂಗ್ರೆಸ್ ನಾಯಕತ್ವಕ್ಕೂ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ತಮ್ಮದೇ ಸ್ವಂತ ರಾಲಿಗಳನ್ನು ನಡೆಸುವ ಮೂಲಕ ಪಕ್ಷದ ಸೂಚನೆಗಳನ್ನು ಬಹಿರಂಗವಾಗಿ ಧಿಕ್ಕರಿಸುತ್ತಿದ್ದಾರೆ. ಪಂಜಾಬ್ ನಾಯಕತ್ವದ ಜತೆಗಿನ ಸಿಧು ಸಂಬಂಧ ತೀರಾ ಹಳಸಿದೆ.

Navajoth Singh Sidhu

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜತೆ ಸಿಧುಗೆ ಉತ್ತಮ ಸಂಬಂಧವಿದೆ. ಆದರೆ ಅವರು ತಮ್ಮ ಮೂಲ ಪಕ್ಷವನ್ನು ಮರಳಿ ಸೇರಿಕೊಳ್ಳಬಹುದು ಹಾಗೂ ಪಂಜಾಬ್‌ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಮಾಝಾ ಪ್ರದೇಶದ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಸಿಧು ಅವರು ಪಕ್ಷಕ್ಕೆ ವಾಪಸ್ ಬರುವ ಪ್ರಬಲ ಸೂಚನೆಗಳು ಇವೆ ಎಂದು ಬಿಜೆಪಿ ಪದಾಧಿಕಾರಿ ಸೋಮದೇವ್ ಶರ್ಮಾ ಹೇಳಿದ್ದಾರೆ. “ಸಿಧು ಬಿಜೆಪಿ ಸೇರ್ಪಡೆ ಕುರಿತು ಇತರೆ ಬಿಜೆಪಿ ನಾಯಕರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಜತೆ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಕುರಿತಾದ ವಿವರಗಳನ್ನು ಬಹಳ ಗೌಪ್ಯವಾಗಿ ಇರಿಸಲಾಗಿದೆ” ಎಂದು ತಿಳಿಸಿದ್ದಾರೆ.

ಅಮೃತಸರ ಲೋಕಸಭೆ ಕ್ಷೇತ್ರವು ಬಿಜೆಪಿಯ ಪ್ರಬಲ ನೆಲೆಯಾಗಿದ್ದು, ಅವರನ್ನು ಅಮೃತಸರದಿಂದ ಅಭ್ಯರ್ಥಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿದರೆ ಗೆಲುವು ಸಾಧಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಆದರೆ ಸಿಧು ಅವರು ಬಿಜೆಪಿಗೆ ಮರಳುವ ಸಾಧ್ಯತೆಯನ್ನು ಕಾಂಗ್ರೆಸ್ ಪದಾಧಿಕಾರಿ ರಮಣ್ ಬಕ್ಷಿ ನಿರಾಕರಿಸಿದ್ದಾರೆ. “ಒಂದು ಪಕ್ಷದಿಂದ ಮತ್ತೊಂದಕ್ಕೆ ಜಿಗಿಯುತ್ತಲೇ ಇರುವ ನಾಯಕ ತನ್ನ ವರ್ಚಸ್ಸು ಹಾಗೂ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಾನೆ” ಎಂದಿದ್ದಾರೆ.

ಅಮೃತಸರ ಬಿಟ್ಟು ಬೇರೆ ಕ್ಷೇತ್ರದಿಂದ ಸಿಧು ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಯುವರಾಜ್ ಸಿಂಗ್ ಸ್ಪರ್ಧೆ?

ಇನ್ನು ಪಂಜಾಬ್‌ನ ಗುರುದಾಸ್ಪುರ ಕ್ಷೇತ್ರದಿಂದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ಊಹಾಪೋಹ ಹರಡಿದೆ. ಕಳೆದ ಚುನಾವಣೆಯಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಸನ್ನಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ.

Yavaraj Singh

ಯುವರಾಜ್ ಸಿಂಗ್ ಅವರು ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದು ಇದಕ್ಕೆ ಸೂಚನೆಯಾಗಿದೆ ಎಂದು ಸೋಮದೇವ್ ಶರ್ಮಾ ತಿಳಿಸಿದ್ದಾರೆ. ಸಾಮಾನ್ಯವಾಗಿ ಇಲ್ಲಿಂದ ಬಿಜೆಪಿ ಸೆಲೆಬ್ರಿಟಿಗಳನ್ನು ಅಖಾಡಕ್ಕೆ ಇಳಿಸುತ್ತಿವೆ. ಈ ಹಿಂದೆ ವಿನೋದ್ ಖನ್ನಾ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

You might also like
Leave A Reply

Your email address will not be published.