100 ದಿನಗಳಲ್ಲಿ ದೇಶದ ಜನರ ವಿಶ್ವಾಸ ಗಳಿಸಿ, 400 ಸೀಟು ಗೆಲ್ಲಿ- ಪ್ರಧಾನಿ ಮೋದಿ ಕರೆ

2024ರ ಲೋಕಸಭಾ ಚುನಾವಣೆಯಲ್ಲಿ ಎನ್‌.ಡಿ.ಎ ಎರಡನೇ ಅವಧಿಗೆ 400 ಸ್ಥಾನಗಳಲ್ಲಿ ಗೆಲುವು ಸಾಧಿಸಲು, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಮುಂದಿನ 100 ದಿನಗಳಲ್ಲಿ ದೇಶಾದ್ಯಂತ ಜನರ ವಿಶ್ವಾಸ ಗಳಿಸಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮುಂದಿನ ನೂರು ದಿನಗಳಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಯೊಬ್ಬ ಹೊಸ ಮತದಾರನನ್ನು ತಲುಪಬೇಕು, ಪ್ರತಿಯೊಬ್ಬ ಫಲಾನುಭವಿ, ಪ್ರತಿಯೊಂದು ಸಮುದಾಯವನ್ನೂ ತಲುಪಬೇಕು. ನಾವು ಪ್ರತಿಯೊಬ್ಬರ ನಂಬಿಕೆಯನ್ನೂ ಗಳಿಸಬೇಕು ಎಂದು ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಅಧಿಕಾರದ ಆಸೆಗಿಂತ, ದೇಶದ ಏಳಿಗೆಗಾಗಿ ದುಡಿಯಬೇಕು :

ಎನ್‌.ಡಿ.ಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಬೇಕೆಂದರೆ ಬಿಜೆಪಿ 370ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲೇಬೇಕಾದ ಅಗತ್ಯತೆ ಇದೆ.‌ ಮೂರನೇ ಅವಧಿಗೆ ಸರ್ಕಾರ ರಚಿಸಿ ಅಧಿಕಾರವನ್ನು ಆನಂದಿಸಬೇಕೆಂದು ಬಯಸುತ್ತಿಲ್ಲ. ನಾವು ದೇಶಕ್ಕಾಗಿ ದುಡಿಯಬೇಕೆಂದು ಬಯಸಿದ್ದೇವೆ. ನಾನು ನನಗಾಗಿ ಮನೆ ಹೊಂದಬೇಕು ಎಂದು ಬಯಸಿದ್ದರೆ, ಈ ದೇಶದ ಕೋಟ್ಯಂತರ ಜನರಿಗೆ ಮನೆ ನಿರ್ಮಿಸಿಕೊಡಲು ಸಾಧ್ಯ ಆಗ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಷ್ಟ್ರ ನೀತಿಗಾಗಿ ಕೆಲಸ ಮಾಡಬೇಕೆ ಹೊರತು ರಾಜ್ಯ ನೀತಿಗಾಗಿ ಅಲ್ಲ :

ಈ ಹಿಂದೆ ಹಿರಿಯ ನಾಯಕರೊಬ್ಬರು ನನಗೆ ಬುದ್ದಿ ಮಾತು ಹೇಳಿದ್ದಾರೆ. ಸಿಎಂ ಆಗಿ ಹಾಗೂ ಪಿಎಂ ಆಗಿ ನೀವು ಸಾಕಷ್ಟು ದುಡಿದಿದ್ದೀರಿ. ಈಗ ನೀವು ವಿಶ್ರಾಂತಿ ತೆಗೆದುಕೊಳ್ಳುವ ಸಮಯ ಎಂದು ಹೇಳಿದ್ದರು. ಆದರೆ ನಾನು ‘ರಾಷ್ಟ್ರ ನೀತಿ’ಗಾಗಿ ಕೆಲಸ ಮಾಡುತ್ತಿದ್ದೇನೆ. ‘ರಾಜ ನೀತಿ’ಗಾಗಿ ಅಲ್ಲ ಎಂದು ಅವರಿಗೆ ಉತ್ತರಿಸಿದರು.

Modi Nadda Shah

ಇದಕ್ಕೂ ಮುನ್ನ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂಬರುವ ಲೋಕಸಭಾ ಚುನಾವಣೆಯನ್ನು ಮಹಾಭಾರತ ಯುದ್ದಕ್ಕೆ ಹೋಲಿಕೆ ಮಾಡಿದ್ದರು. ಪ್ರಧಾನಿ ಮೋದಿ ಸಾರಥ್ಯದ ಬಿಜೆಪಿ ದೇಶದ ಅಭಿವೃದ್ದಿ ದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿದ್ದರೆ, ಇಂಡಿ ಮೈತ್ರಿ ಕೂಟವು ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು.

ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಭರದ ಸಿದ್ದತೆಯಲ್ಲಿ ತೊಡಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಪ್ರತಿ ವಾರ ಮಂಗಳವಾರದಂದು ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಚುನಾವಣಾ ತಂತ್ರಗಾರಿಕೆ. ಅಭ್ಯರ್ಥಿಗಳ ಆಯ್ಕೆ, ಪ್ರತಿ ಕ್ಷೇತ್ರಕ್ಕೂ ರೂಪಿಸಬೇಕಾದ ಕಾರ್ಯತಂತ್ರ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರುತ್ತಿವೆ.

ಈ ರೀತಿಯ ಒಂದು ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಭಾಗಿಯಾಗಿದ್ದರು. ಈ ಸಭೆಯಲ್ಲಿ ಮೊದಲ ಬಾರಿಯ ಮತದಾರರು, ಕೇಂದ್ರದ ಯೋಜನೆಗಳ ಫಲಾನುಭವಿಗಳನ್ನು ತಲುಪಲು ನಿರ್ಧರಿಸಲಾಯ್ತು. ಜೊತೆಯಲ್ಲೇ ಯುವಕರು, ಮಹಿಳೆಯನ್ನು ಕೇಂದ್ರೀಕರಿಸಿ ಪ್ರಚಾರ ತಂತ್ರಗಾರಿಕೆ ರೂಪಿಸಲು ಬಿಜೆಪಿ ನಿರ್ಧರಿಸಿದೆ.

You might also like
Leave A Reply

Your email address will not be published.