ಅಜಾತಶತ್ರುವಿನ ಜನ್ಮದಿನ: ಹಲವು ಗಣ್ಯರಿಂದ ಪುಷ್ಪ ನಮನ

ಬಿಜೆಪಿ ನೇತಾರರಾಗಿ ಮೂರು ಬಾರಿ ರಾಷ್ಟ್ರದ ಪ್ರಧಾನಿಯಾಗಿ ಸೇವೆ ಸಲ್ಲಿಸಿ, ವಿರೋದ್ಧ ಪಕ್ಷದಿಂದಲೇ ಅಜಾತಶತ್ರು ಎಂಬ ಖ್ಯಾತಿ ಗಳಿಸಿದ ಏಕೈಕ ವ್ಯಕ್ತಿ. ಭಾರತದಲ್ಲಿ ರಾಮ ಮಂದಿರವನ್ನು ಕಟ್ಟಲೇಬೇಕು ಎಂಬ ಧ್ಯೇಯವನ್ನು ಹುಟ್ಟು ಹಾಕಿದ್ದಲ್ಲದೇ, ಕಾರ್ಗಿಲ್ ಯುದ್ಧದ ಅವಧಿಯಲ್ಲಿ ದೇಶ ಮುನ್ನಡೆಸಿದ ಚಾಣಕ್ಷರಾದ ಅಟಲ್ ಬಿಹಾರಿ ವಾಜಾಪೇಯಿ ಅವರ ಜನ್ಮದಿನವಿಂದು!

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ‘ಸದೈವ್ ಅಟಲ್’ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಮುಂತಾದ ನಾಯಕರು ಉಪಸ್ಥಿತರಿದ್ದು, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ದೇಶಾದ್ಯಂತ ಪಕ್ಷದ ಪದಾಧಿಕಾರಿಗಳು ಮತ್ತು ರಾಜ್ಯಾಧ್ಯಕ್ಷರುಗಳು ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಎಲ್ಲಾ ಬೂತ್ಗಳಲ್ಲಿ ಪುಷ್ಪ ನಮನ ಸಲ್ಲಿಸುವುದರೊಂದಿಗೆ, ಮಾಜಿ ಪ್ರಧಾನಿಯವರ ಅದ್ಭುತ ವ್ಯಕ್ತಿತ್ವ ಮತ್ತು ಕಾರ್ಯಗಳ ಬಗ್ಗೆ ಚರ್ಚಿಸಬೇಕು. ಹಾಗೂ ಪ್ರತಿ ಜಿಲ್ಲೆಯಲ್ಲೂ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳ ಯೋಜನೆಗಳು ಮತ್ತು ಸಾಧನೆಗಳ ಬಗ್ಗೆ ಚರ್ಚೆ ನಡೆಯಲಿದ್ದು, ಬಡವರ ಕಲ್ಯಾಣಕ್ಕಾಗಿ ಉತ್ತಮ ಆಡಳಿತ ನೀಡಲಾಗುವುದು ಎಂಬ ಶಪಥ ಮಾಡುವಂತೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದು, ಅಟಲ್ ಜೀ ಅವರ ಜಯಂತಿಯಂದು ದೇಶದ ಎಲ್ಲ ಕುಟುಂಬ ಸದಸ್ಯರ ಪರವಾಗಿ ಅವರಿಗೆ ನಮಿಸುತ್ತೇನೆ. ಅವರು ತಮ್ಮ ಜೀವನದುದ್ದಕ್ಕೂ ರಾಷ್ಟ್ರ ನಿರ್ಮಾಣದಲ್ಲಿ ನಿರತರಾಗಿದ್ದರು. ಭಾರತ ಮಾತೆಗೆ ಅವರ ಸಮರ್ಪಣಾ ಸೇವೆ ನಮಗೆ ಸ್ಪೂರ್ತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಅಟಲ್ ಅವರ ಹಿನ್ನೆಲೆ:
ವಾಜಪೇಯಿಯವರು 1924 ಡಿಸೆಂಬರ್ 25 ರಂದು ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣದೇವಿಯವರ ಪುತ್ರರಾಗಿ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದರು. ಯೌವನದಲ್ಲಿ ಮಾರ್ಕ್ಸ್ ವಾದಿಯಾಗಿದ್ದ ಅವರು ಕಾಲಾಂತರದಲ್ಲಿ ರಾಷ್ಟ್ರೀಯವಾದಿಯಾಗಿ ಆರ್.ಎಸ್.ಎಸ್ ಸೇರಿಕೊಂಡರು.

“ಉತ್ತಮ ಆಡಳಿತದ ದಿನ”:
ಭಾರತದ ಅಭಿವೃದ್ಧಿಗಾಗಿ ಅಟಲ್ ಬಿಹಾರಿ ಅವರು ನೀಡಿದ ಕೊಡುಗೆಯನ್ನು ಗೌರವಿಸಲು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅವರ ಜನ್ಮದಿನವನ್ನು ಉತ್ತಮ ಜನ್ಮದಿನವನ್ನಾಗಿ ಆಚರಿಸಬೇಕು ಎಂಬ ಮಹತ್ತರ ತೀರ್ಮಾನವನ್ನು ತೆಗೆದುಕೊಂಡಿದ್ದು, ಅಂದಿನಿಂದ ಡಿಸೆಂಬರ್ 25ನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ದಿನದ ನಿಮಿತ್ತ ಸರ್ಕಾರ ಮತ್ತು ಸರ್ಕಾರೇತರ ಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉತ್ತಮ ಆಡಳಿತದ ಮೂಲಕ ವಿವಿಧ ಸರ್ಕಾರಿ ಸೇವೆಗಳು ಮತ್ತು ಕಾರ್ಯಕ್ರಮಗಳಿಗೆ ಸಾರ್ವಜನಿಕ ಪ್ರವೇಶ ಖಚಿತಪಡಿಸುವುದು ಉತ್ತಮ ಆಡಳಿತದ ದಿನದ ಮುಖ್ಯ ಉದ್ದೇಶವಾಗಿದೆ.

ಅಟಲ್ ಕುರಿತು ತಿಳಿದುಕೊಳ್ಳಲೇ ಬೇಕಾದ ಕೆಲವು ವಿಚಾರಗಳು:
ಜನಾನುರಾಗಿ ನಾಯಕ, ಅಜಾತಶತ್ರು ಎಂಬ ಪಟ್ಟ
– ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 23 ದಿನಗಳ ಸೆರೆವಾಸ
– ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಏಕೈಕ ವ್ಯಕ್ತಿಯೆಂಬ ಹಿರಿಮೆ
– ಉತ್ತರಪ್ರದೇಶ, ಮಧ್ಯಪ್ರದೇಶ, ನವದೆಹಲಿ ಮತ್ತು ಗುಜರಾತ್ – ಈ ನಾಲ್ಕು ರಾಜ್ಯಗಳ 6 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಹಿರಿಮೆ
– 47 ವರ್ಷಗಳ ಕಾಲ ಸಂಸತ್ ಸದಸ್ಯರಾಗಿದ್ದರು. ಅದರಲ್ಲಿ 11 ಬಾರಿ ಲೋಕಸಭೆ ಹಾಗೂ 2 ಬಾರಿ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಕೆ
– ದೇಶದ ಪ್ರಧಾನಿಯಾದ ಮೊದಲ ಬಿಜೆಪಿ ನಾಯಕ. ಹಾಗೂ ಮೂರು ಭಾರಿ ದೇಶದ ಪ್ರಧಾನಿಯಾಗಿ ಆಳ್ವಿಕೆ ನಡೆಸಿದ್ದಾರೆ.
– 1998ರಲ್ಲಿ ರಾಜಸ್ಥಾನದ ಪೋಖ್ರಾನ್ ನಲ್ಲಿ ಯಶಸ್ವಿ ಪರಮಾಣು ಪರೀಕ್ಷೆ ನಡೆಸುವ ಮೂಲಕ ವಿಶ್ವ ಮಟ್ಟದಲ್ಲಿ ಭಾರತದ ಸಾಮರ್ಥ್ಯ ಪ್ರದರ್ಶಿಸಿದಲ್ಲದೇ, ಆಪರೇಷನ್ ಶಕ್ತಿ ಮೂಲಕ ಭಾರತದ ಶಕ್ತಿ ಪ್ರದರ್ಶನ ಮಾಡಿರುವುದು ಗಮನಾರ್ಹ.
– ಅವಿವಾಹಿತರಾಗಿದ್ದ ಅಟಲ್ ಅವರಿಗೆ ಮದುವೆಯಾಗದೇ ಇರುವುದಕ್ಕೆ ಕಾರಣ ಕೇಳಿದಾಗ, ನಾನು ತುಂಬಾ ಬ್ಯುಸಿಯಾಗಿದ್ದು ಮದುವೆಯಾಗುವುದನ್ನೆ ಮರೆತುಬಿಟ್ಟಿದ್ದೇನೆ ಎಂದಿದ್ದರು. ಅಲ್ಲದೇ ಅವರಿಗೆ ನಮಿತಾ ಭಟ್ಟಾಚಾರ್ಯ ಎಂಬ ಓರ್ವ ದತ್ತು ಪುತ್ರಿಯಿರುವುದು ವಿಶೇಷನೀಯ.
– 2009 ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ವಾಜಪೇಯಿ ಅವರ ಧ್ವನಿ ಮತ್ತು ಕೈ ಚಲನೆ ಹದಗೆಟ್ಟಿತ್ತು.
– ಕವಿತೆ ರಚಿಸುವ ಕಲೆ ಇವರಿಗೆ ಒಲಿದಿದ್ದು, ಜಗಜಿತ್ ಸಿಂಗ್ ಅವರೊಂದಿಗೆ ತಮ್ಮ ಕವಿತೆಗಳನ್ನು ಒಳಗೊಂಡಿರುವ 2 ಆಲ್ಬಾಮ್ ಗಳನ್ನು ಬಿಡುಗಡೆ ಮಾಡಿದರು. ನೈ ದಿಶಾ (1999) ಮತ್ತು ಸಂವೇದ (2000)
– ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಒಮ್ಮೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭಾರತೀಯ ರಾಜಕೀಯದ ಭೀಷ್ಮ ಪಿತಾಮಹ ಎಂದು ಕರೆದಿದ್ದರು.
– ಅಭಿವೃದ್ಧಿ ಹೊಂದಿದ ಭಾರತ ಎಂಬ ಗುರಿಯನ್ನು ಇಟ್ಟುಕೊಂಡು ಪ್ರತಿ ನಾಗರಿಕರು ಕೆಲಸ ಮಾಡಬೇಕಿದೆ. ಇದಕ್ಕೆ “ಅಭಿವೃದ್ಧಿ ಹೊಂದಿದ ಭಾರತದ ಬ್ರ್ಯಾಂಡ್ ಅಂಬಾಸಿಡರ್” ಎಂಬ ಅಭಿಮಾನವನ್ನು ನಮೋ ಅಪ್ಲಿಕೇಶನ್ನಲ್ಲಿ ಪ್ರಾರಂಭಿಸಲಾಗಿದೆ.

ಭಾರತದಲ್ಲಿ ಉತ್ತಮ ಆಡಳಿತಕ್ಕಾಗಿ ಅವರು ಎದುರಿಸಿದ ಸವಾಲುಗಳು:
 ಮಹಿಳಾ ಸಬಲೀಕರಣ
 ಭ್ರಷ್ಟಾಚಾರದ ಸಮಸ್ಯೆ
 ತ್ವರಿತ ನ್ಯಾಯದ ಹಕ್ಕನ್ನು ಚಲಾಯಿಸುವಲ್ಲಿ ಇರುವ ಅಡಚಣೆ
 ಆಡಳಿತ ವ್ಯವಸ್ಥೆಯಲ್ಲಿನ ದೋಷ
 ರಾಜಕೀಯದಲ್ಲಿ ಅಪರಾಧ ಪ್ರವೃತ್ತಿಯ ಜನರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು

ಅವರ ಆಡಳಿತಕ್ಕೆ ಸಂದ ಪ್ರಶಸ್ತಿಗಳು:
 1992: ಭಾರತದ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮವಿಭೂಷಣ
 1993: ಕಾನ್ಪುರ ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ
 1994: ಲೋಕಮಾನ್ಯ ತಿಲಕ್ ಪ್ರಶಸ್ತಿ
 1994: ಅತ್ಯುತ್ತಮ ಸಂಸದೀಯ ಪ್ರಶಸ್ತಿ
 1994: ಭಾರತ ರತ್ನ ಪಂಡಿತ್ ಗೋವಿಂದ್ ವಲ್ಲಭ ಪಂತ್ ಪ್ರಶಸ್ತಿ
 2015: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ
 2015: ಬಾಂಗ್ಲಾದೇಶ ಸರ್ಕಾರವು ನೀಡುವ ಅತ್ಯುನ್ನತ ಪ್ರಶಸ್ತಿಯಾದ ಬಾಂಗ್ಲಾದೇಶ ಮುಕ್ತಿಜುಧೋ ಸನ್ಮನೋನಾ (ಬಾಂಗ್ಲಾದೇಶ ವಿಮೋಚನಾ ಯುದ್ಧದ ಗೌರವ)

You might also like
Leave A Reply

Your email address will not be published.