ಅಮರ, ಅಟಲ‌ ನಮ್ಮ ವಾಜಪೇಯಿ.

ರಾಜಕಾರಣದಲ್ಲಿ ಅಜಾತಶತ್ರು ಎಂದೆನಿಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲದ ಮಾತು. ಆದರೆ, ಇದಕ್ಕೆ ಉದಾಹರಣೆ ಎಂಬಂತೆ ಕಾಣ ಸಿಗುವ ಭಾರತದ ಬಲು ಅಪರೂಪದ ರಾಜಕಾರಣಿ, ಕವಿಹೃದಯಿ, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಿಂದು. ಅಟಲ್ ಜಿಯವರ ಬಗೆಗೆ ಯಾರಿಗೆ ತಿಳಿದಿಲ್ಲ ಹೇಳಿ? ಹಾಗಿದ್ದೂ ಅವರ ಜೀವನದ ಕೆಲವು ಪ್ರಮುಖ ಘಟ್ಟಗಳನ್ನು ಇನ್ನೊಮ್ಮೆ ಅವಲೋಕಿಸೋಣ ಬನ್ನಿ.

ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಡಿಸೆಂಬರ್ 25, 1924 ರಲ್ಲಿ ಜನಿಸುತ್ತಾರೆ. ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ. ಪೂರೈಸಿದ ವಾಜಪೇಯಿಯವರು 1942 ರಲ್ಲಿ ಬ್ರಿಟಿಷರ ವಿರುದ್ಧದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಇನ್ನು ಅಟಲ್ ಬಿಹಾರಿ ವಾಜಪೇಯಿಯವರ ರಾಜಕೀಯ ಜೀವನ ನೋಡುವುದಾದರೆ, 9 ಬಾರಿ ಲೋಕಸಭಾ ಹಾಗೂ 2 ಬಾರಿ ರಾಜ್ಯಸಭೆಯ ಸಂಸದರಾಗಿದ್ದ ಇವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಸಮಯದಲ್ಲಿ ವಿಶ್ವ ಸಂಸ್ಥೆಯ ಜನರಲ್ ಅಸ್ಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಭಾರತದ ಪ್ರಥಮ ಮಂತ್ರಿಯೂ ಹೌದು. ಅಷ್ಟೇ ಅಲ್ಲದೇ, ಪ್ರಧಾನಮಂತ್ರಿ ಪಟ್ಟವನ್ನು ಮೂರು ಬಾರಿ ಅಲಂಕರಿಸಿದ ಹಾಗೂ ಪ್ರಧಾನಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಿದ ಮೊದಲ ಕಾಂಗ್ರೇಸೇತರ ಪ್ರಧಾನಿ ಕೂಡಾ ಹೌದು.!

ವಾಜಪೇಯಿಯವರ ನೇತೃತ್ವದ ಸರ್ಕಾರವು ಪೋಖ್ರಾನ್ ಪರಮಾಣು ಪರೀಕ್ಷೆಗೆ ವಿಜ್ಞಾನಿಗಳಿಗೆ ಸಂಪೂರ್ಣ ಸಹಕಾರ‌ ನೀಡಿದ್ದಲ್ಲದೇ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೈನ್ಯಕ್ಕೆ ಹೇಗೆ ಜೊತೆ ನಿಂತಿದ್ದರು ಎಂಬುದಕ್ಕೆ ನಾವೆಲ್ಲರೂ ಸಾಕ್ಷಿ. “ಮೈ ಕಸಮ್ ಖಾತಾ ಹೂಂ, ಪಾಕಿಸ್ತಾನ್ ಕಲ್ ಕಾ ಸೂರಜ್ ನಹೀ ದೇಖೇಗಾ” ಎಂಬ ಭಾಷಣವನ್ನು ನಾವು ಮರೆತರೂ ಪಾಕಿಸ್ತಾನವೆಂಬ ರಾಷ್ಟ್ರ ಹೇಗೆ ಮರೆತೀತು?

ಇನ್ನು ಈ ದೇಶದ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾಗಿದ್ದ ಅಟಲರ ಹಲವು ಕವಿತೆಗಳು ಇಂದಿಗೂ ಪ್ರಸ್ತುತ ಹಾಗೂ ದೇಶದ ಪಾರ್ಲಿಮೆಂಟಿನಲ್ಲಿ ಇಂದಿಗೂ ಬಿಜೆಪಿಯ ನಾಯಕರು ಬಳಸುವುದನ್ನು ಕಾಣಬಹುದು. ಅಟಲ್ ಬಿಹಾರಿ ವಾಜಪೇಯಿ ಯವರಿಗೆ ಭಾರತ ಸರ್ಕಾರವು ದೇಶಕ್ಕೆ ಅಟಲರು ನೀಡಿದ ಸೇವೆಯನ್ನು ಗುರುತಿಸಿ 1992 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಹಾಗೂ 2015ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡುವ ಮೂಲಕ ದೇಶಕ್ಕೆ ವಾಜಪೇಯಿಯವರು ನೀಡಿದ ಸೇವೆಯನ್ನು ಗುರುತಿಸಿ ಗೌರವಿಸಿದ್ದಾರೆ.

ಇನ್ನು ಕವಿ ಅಟಲರ ಹಲವು ಕವಿತೆಗಳು ಪ್ರಸಿದ್ಧವಾಗಿದ್ದು ಅದರಲ್ಲಿ ಒಂದು ಹಿಂದಿ ಕವಿತೆಯ ಅನುವಾದ ಇಲ್ಲಿದೆ.

भारत जमीन का टुकड़ा नहीं,
जीता जागता राष्ट्रपुरुष है।
हिमालय मस्तक है, कश्मीर किरीट है,
पंजाब और बंगाल दो विशाल कंधे हैं।
पूर्वी और पश्चिमी घाट दो विशाल जंघायें हैं।
कन्याकुमारी इसके चरण हैं, सागर इसके पग पखारता है।
यह चन्दन की भूमि है, अभिनन्दन की भूमि है,
यह तर्पण की भूमि है, यह अर्पण की भूमि है।
इसका कंकर-कंकर शंकर है,
इसका बिन्दु-बिन्दु गंगाजल है।
हम जियेंगे तो इसके लिये
मरेंगे तो इसके लिये।

ಭಾರತ ಒಂದು ತುಂಡು ಭೂಮಿ ಅಲ್ಲ,
ಆತ ಜೀವಂತ ರಾಷ್ಟ್ರನಾಯಕ.
ಹಿಮಾಲಯವು ಇದರ ಶಿರಸ್ಸು, ಕಾಶ್ಮೀರವು ಕಿರೀಟ,
ಪಂಜಾಬ್ ಮತ್ತು ಬಂಗಾಳ ಎರಡು ದೊಡ್ಡ ಭುಜಗಳು.
ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಎರಡು ಬೃಹತ್ ಪರ್ವತಗಳು.
ಕನ್ಯಾಕುಮಾರಿ ಅದರ ಪಾದಗಳು,
ಸಾಗರವು ಭಾರತದ ಹೆಜ್ಜೆಗಳನ್ನು ತೊಳೆಯುತ್ತದೆ.
ಇದು ಶ್ರೀಗಂಧದ ನಾಡು, ಶುಭಾಶಯಗಳ ನಾಡು,
ಇದು ತರ್ಪಣದ ನಾಡು, ಇದು ಅರ್ಪಣೆಯ ನಾಡು.
ಅದರ ಪ್ರತಿ ಬೆಣಚುಕಲ್ಲುಗಳು ಶಂಕರನಾದರೆ,
ಇದರ ಬಿಂದು ಬಿಂದು ಕೂಡಾ ಗಂಗಾಜಲ.

ನಾವು ಬದುಕಿದರೂ ಈ ಭಾರತಕ್ಕಾಗಿ ನಾವು ಸಾಯುವುದಾದರೂ ಈ ದೇಶಕ್ಕಾಗಿ.

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯ ಆಡಳಿತ ಕಾಲವನ್ನು ಮಾದರಿಯಾಗಿ ಇರಿಸಿಕೊಳ್ಳಲು ಅಟಲ್ ಅವರ ಜನ್ಮದಿನವನ್ನು ಭಾರತ ಸರ್ಕಾರವು ಉತ್ತಮ ಆಡಳಿತ ದಿನವಾಗಿ ಆಚರಿಸಲು ನಿರ್ಧರಿಸುವ ಮೂಲಕ ಮಾಜಿ ಪ್ರಧಾನಮಂತ್ರಿಗಳಿಗೆ ಗೌರವಯುತವಾದ ಬೀಳ್ಕೊಡುಗೆಯನ್ನು ನೀಡಿದೆ.

ಸದೈವ್ ಅಟಲ್.

You might also like
Leave A Reply

Your email address will not be published.