ಮುಗಿಯದ ಪಕ್ಷಾಂತರ ಮಹಾಪರ್ವ – ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೇರಿದ ರೆಬೆಲ್ ನಾಯಕರೆಷ್ಟು?

ಲೋಕಸಭಾ ಚುನಾವಣಾ ಆರಂಭಕ್ಕೆ ಇನ್ನೇನು ಕೆಲವೇ ವಾರಗಳು ಬಾಕಿ ಉಳಿದಿವೆ. ಈಗಾಗಲೇ ಚುನಾವಣಾ ಪ್ರಚಾರದ ಕಣ ರಂಗೇರಿದ್ದು, ಪಕ್ಷ-ಪ್ರತಿಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲೇ ನಿರತವಾಗಿವೆ. ಈ ನಡುವೆ, ಹಿಮಾಚಲ ಪ್ರದೇಶದಲ್ಲಿ ಮತ್ತೆ ಪಕ್ಷಾಂತರದ ಬಿರುಗಾಳಿ ಎದ್ದಿದ್ದು, ರೆಬೆಲ್‌ ನಾಯಕರೆಲ್ಲ ಪಕ್ಷ ತೊರೆದು ಈ ಪ್ರಮುಖ ಒಕ್ಕೂಟಕ್ಕೆ ಸೇರ್ಪಡೆಗೊಂಡಿದ್ದಾರೆ. ಆ ರೆಬೆಲ್ ನಾಯಕರು ಯಾರು? ಸ್ವಾಗತಿಸಿದ ಪಕ್ಷ ಯಾವುದು? ಹೇಳ್ತೀವಿ ನೋಡಿ.

ಹಿಮಾಚಲ ಪ್ರದೇಶದಲ್ಲಿ ಕಳೆದ ಬಾರಿ ಸರ್ಕಾರ ರಚನೆಯ ಸಂದರ್ಭದಲ್ಲೇ ಆಡಳಿತ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಸಿಎಂ ಸುಖ್ವಿಂದರ್ ಸಿಂಗ್ ಮತ್ತು ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ (ಆರು ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪ್ರತಿಭಾ ಸಿಂಗ್ ದಂಪತಿಯ ಪುತ್ರ) ನಡುವೆ ನಡೆಯುತ್ತಲೇ ಇದ್ದ ಶೀತಲ ಸಮರ ವಿಕೋಪಕ್ಕೆ ತಿರುಗಿ, ವಿಕ್ರಮಾದಿತ್ಯ ಸಿಂಗ್ ಅವರು ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ತನ್ನ ಬಣದ ಶಾಸಕರನ್ನು ತೆಕ್ಕೆಗೆ ತೆಗೆದುಕೊಂಡು, ಸರ್ಕಾರದ ವಿರುದ್ಧ ಬಂಡಾಯ ಹೂಡಿದ್ದರು. ಆದರೆ ಇದೀಗ ಆ ಎಲ್ಲಾ ಆರು ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಹಿಮಾಚಲ ಪ್ರದೇಶದ ಆಡಳಿತ ಪಕ್ಷ ಕಾಂಗ್ರೆಸ್ಸಿನ ಪಾಳಯದಲ್ಲಿ ತಳಮಳ ಮುಗಿಲುಮುಟ್ಟಿದಂತಿದೆ.

ಹಿಮಾಚಲ ಪ್ರದೇಶದ ಆರು ಮಾಜಿ ಶಾಸಕರಾದ ಸುಧೀರ್ ಶರ್ಮಾ, ರವಿ ಠಾಕೂರ್, ಇಂದ್ರ ದತ್ತ ಲಖನ್ ಪಾಲ್, ದೇವೇಂದ್ರ ಭುಟ್ಟೋ, ರಾಜೇಂದ್ರ ರಾಣಾ ಮತ್ತು ಚೈತನ್ಯ ಶರ್ಮಾ, ಒಟ್ಟಿಗೇ ಪಾಳಯ ಸೇರಲು ನಿರ್ಧರಿಸಿದ್ದು, ಇಂದು ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಹಾಗೂ ಹಿಮಾಚಲ ಪ್ರದೇಶದ ರಾಜ್ಯ ಬಿಜೆಪಿ ಮುಖ್ಯಸ್ಥರಾದ ರಾಜೀವ್ ಬಿಂದಾಲ್ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷದ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ.

Unfinished Defection Mahaparva - How many rebel leaders have joined the BJP in Himachal Pradesh?

ಈ ಕುರಿತು ಮಾತನಾಡಿರುವ ರೆಬೆಲ್ ಶಾಸಕರಾದ ರಾಜೇಂದ್ರ ರಾಣಾ, “ಮುಖ್ಯಮಂತ್ರಿಗಳು ಸರ್ವಾಧಿಕಾರ ನಡೆಸುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ಇಲ್ಲಿಯ ಜನರಿಗೆ ನೀಡಿದ ಯಾವ ಗ್ಯಾರಂಟಿಗಳನ್ನೂ ಈಡೇರಿಸುತ್ತಿಲ್ಲ. ಜನರಿಗೆ ನಾವು ಈ ಬಗ್ಗೆ ಉತ್ತರ ನೀಡಬೇಕಿತ್ತು. ಆದರೆ, ನಮ್ಮಲ್ಲಿ ಅವರು ಕೇಳಿದಾಗ ನಮ್ಮಲ್ಲೂ ಉತ್ತರವಿರಲಿಲ್ಲ. ಶಾಸಕರ ಅಳಲನ್ನು ಕೇಳಲು ಇಲ್ಲಿ ಯಾರೂ ಇಲ್ಲ ಹಾಗೂ ಇಲ್ಲಿ ಸರ್ಕಾರ ಶಾಸಕರಿಂದ ಹಾಗೂ ಸಚಿವರಿಂದ ನಡೆಯುತ್ತಿಲ್ಲ. ಬದಲಾಗಿ, ಮುಖ್ಯಮಂತ್ರಿ ಸಿಖ್ವಿಂದರ್ ಸಿಂಗ್ ಸುಖು ಹಾಗೂ ಅವರ ಸಹಚರರಿಂದ ನಡೆಯುತ್ತಿರುವಂತಿದೆ” ಎಂದಿದ್ದಾರೆ.

ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾಚಣೆಯಲ್ಲಿ ಈ ಆರೂ ಶಾಸಕರು ಅಡ್ಡಮತದಾನ ಮಾಡಿ, ಕಾಂಗ್ರೆಸ್ ಬೆಂಬಲಿತ ರಾಜ್ಯಸಭಾ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದ್ದರು. ಇವರ ವಿರುದ್ಧ ಅಲ್ಲಿಯ ಸ್ಪೀಕರ್ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದು, ಅವರನ್ನು ಅನರ್ಹಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ, ಶಾಸಕರನ್ನು ಅನರ್ಹಗೊಳಿಸುವ ಸ್ಪೀಕರ್ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.‌

ಈ ಎಲ್ಲ ಬೆಳವಣಿಗೆಗಳಿಂದ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹಿಮದಂತೆ ಕರಗುತ್ತಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ಸೋಲುಣ್ಣುವ ಭೀತಿಯನ್ನು ಎದುರಿಸುತ್ತಿದೆ ಎನ್ನುವಂತೆ ಕಾಣುತ್ತಿದೆ.

You might also like
Leave A Reply

Your email address will not be published.