ರೈತರ ದಿನದಂದೇ ಗುಡ್ ನ್ಯೂಸ್ ಕೊಟ್ಟ ಸರ್ಕಾರ – ನಿಮ್ಮ ಮಕ್ಕಳಿಗೆ ಸಿಗಲಿದೆ ಈ ಸೌಲಭ್ಯ

ರಾಜ್ಯ ಸರ್ಕಾರ ರಾಷ್ಟ್ರೀಯ ರೈತರ ದಿನದಂದೇ ರಾಜ್ಯದ ರೈತ ಸಮುದಾಯಕ್ಕೆ ಸಿಹಿಸುದ್ದಿಯೊಂದನ್ನು ನೀಡಿದೆ. ರೈತರ ಮಕ್ಕಳು ವಿದೇಶದಲ್ಲಿ ಪಡೆಯುವ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ವಿದೇಶದ ವ್ಯಾಸಂಗಕ್ಕೂ ವಿಸ್ತರಣೆ ಮಾಡಲು ಸಿದ್ದರಾಮಯ್ಯನವರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಅಧ್ಯಯನ ನಡೆಸುವ ರಾಜ್ಯದ 100 ಜನ ರೈತರ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ಭರಿಸಲು ಸಿದ್ಧತೆ ನಡೆಸಿದೆ ಹಾಗೂ ಈ ಕಾರ್ಯಕ್ಕಾಗಿ ಮುಂದಿನ ಬಜೆಟ್ʼನಲ್ಲಿ 100 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಸಂಶೋಧನೆ, ಉನ್ನತ ಶಿಕ್ಷಣ ಸೇರಿದಂತೆ ವಿದೇಶದ ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ ಅಧ್ಯಯನ ನಡೆಸುವ ರೈತರ ಮಕ್ಕಳಿಗೆ ಈ ಯೋಜನೆ ಅನ್ವಯವಾಗಲಿದೆ. ಮಾರ್ಚ್-ಏಪ್ರೀಲ್ʼನಲ್ಲಿ ಮಂಡನೆಯಾಗುವ ಮುಂದಿನ ಬಜೆಟ್ʼನಲ್ಲಿ ಈ ಯೋಜನೆ ಘೋಷಣೆ ಮಾಡಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಏನಿದು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ?

2021 ರಲ್ಲಿ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದ ಬಸವರಾಜ ಬೊಮ್ಮಾಯಿಯವರು, ರೈತರ ಮಕ್ಕಳ ಪ್ರಗತಿಗಾಗಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿ ಮಾಡಿದ್ದರು. ಪಿಯುಸಿ ಹಂತದಿಂದ ಉನ್ನತ ಶಿಕ್ಷಣ ಅಧ್ಯಯನ ನಡೆಸುವ ರೈತರ ಮಕ್ಕಳಿಗೆ ವಾರ್ಷಿಕ 2,500 ರೂ.ಗಳಿಂದ 11,000 ರೂ.ಗಳವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು. ಪಿಯುಸಿ ವಿದ್ಯಾರ್ಥಿಗಳಿಗೆ ರೂ.2,500, ಪದವಿ ವಿದ್ಯಾರ್ಥಿಗಳಿಗೆ ರೂ.5,000, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರೂ. 10,000 ಹಣವನ್ನು ವಿದ್ಯಾರ್ಥಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣದಿಂದ ಈ ಯೋಜನೆಯೂ ಸ್ಥಗಿತವಾಗಿದೆ. ಗ್ಯಾರಂಟಿ ಯೋಜನೆಗಳಿಗ ಹಣ ಹೊಂದಿಸುವ ದೃಷ್ಟಿಯಿಂದ ಈ ರೈತಪರ ಯೋಜನೆಗೆ ಕಾಂಗ್ರೆಸ್ ಸರ್ಕಾರ ತಿಲಾಂಜಲಿ ನೀಡಿದೆ. ಅಧಿಕೃತವಾಗಿ ಈ ಯೋಜನೆಯನ್ನು ರದ್ದುಗೊಳಿಸದಿದ್ದರೂ, ಬಜೆಟ್ʼನಲ್ಲಿ ಈ ಯೋಜನೆಗೆ ನಯಾಪೈಸೆ ಅನುದಾನವನ್ನೂ ಮೀಸಲಿಟ್ಟಿಲ್ಲ.

ಈ ಯೋಜನೆಯಡಿ 2021-22ನೇ ಸಾಲಿನಲ್ಲಿ 10.44 ಲಕ್ಷ ವಿದ್ಯಾರ್ಥಿಗಳಿಗೆ 464 ಕೋಟಿ ವಿತರಣೆಯಾಗಿದ್ದರೆ, 2022-23ನೇ ಸಾಲಿನಲ್ಲಿ 8.56 ಲಕ್ಷ ವಿದ್ಯಾರ್ಥಿಗಳಿಗೆ 375 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿತ್ತು.

You might also like
Leave A Reply

Your email address will not be published.