ಮನೆಯಿಂದಲೇ ಮತದಾನಕ್ಕೆ ಅವಕಾಶ : ಹೇಗೆ ನಡೆಯಲಿದೆ ಮತದಾನ?

18 ವರ್ಷ ತುಂಬಿದ ಎಲ್ಲರೂ ಮತವನ್ನು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದ ಪ್ರಕ್ರಿಯೆಯಿಂದ ವಂಚಿತರಾಗಬಾರದು. ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮತದಾನ ಬಹಳ ಮುಖ್ಯ ಎಂಬ ಉದ್ದೇಶದಿಂದ ಕಳೆದ ವಿಧಾನಸಭೆ ಚುನಾವಣೆಯಿಂದ ಚುನಾವಣೆ ಆಯೋಗ ಮನೆಯಿಂದಲೇ ಮತದಾನ ಬಗ್ಗೆ ವಿಶೇಷ ಅವಕಾಶವನ್ನು ಕೊಟ್ಟಿದೆ. ಹಾಗೆಯೇ 85 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು ಅರ್ಹ ವಿಶೇಷಚೇತನರು ಇದರಲ್ಲಿ ಭಾಗಿಯಾಗಬಹುದಾಗಿದ್ದು, ಏ.18 ರವರೆಗೂ ನಡೆಯಲಿದೆ.

ಸೆಕ್ಟರ್‌ ಅಧಿಕಾರಿಗಳ ನೇತೃತ್ವ:

ಮನೆ ಮತದಾನ ಪ್ರಕ್ರಿಯೆಯ ಪೂರ್ಣ ಉಸ್ತುವಾರಿಯನ್ನು ಸೆಕ್ಟರ್‌ ಅಧಿಕಾರಿಗಳು ನಿರ್ವಹಿಸಬೇಕಿದೆ. ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳಿಂದ ಮತದಾನ ಸಾಮಗ್ರಿಗಳನ್ನು ಪಡೆದು ಅಗತ್ಯ ಸಿಬ್ಬಂದಿಯೊಂದಿಗೆ ರೂಟ್‌ ಮ್ಯಾಪ್‌ ಪ್ರಕಾರ ಮತದಾನ ನಿರ್ವಹಣೆ ಮಾಡಬೇಕು. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ.

ತಂಡದಲ್ಲಿ ಯಾರು ಇರಲಿದ್ದಾರೆ?

ಮತದಾರರ ಮನೆಗೆ ತೆರಳುವ 5 ಮಂದಿಯ ತಂಡದಲ್ಲಿ ಇಬ್ಬರು ಮತಗಟ್ಟೆ ಅಧಿಕಾರಿ, ತಲಾ ಒಬ್ಬರು ಪೊಲೀಸ್‌, ವಿಡಿಯೊಗ್ರಾಫರ್‌ ಹಾಗೂ ಸೂಕ್ಷ್ಮವೀಕ್ಷಕರು ಇರಲಿದ್ದಾರೆ. ವಲಯ ಅಧಿಕಾರಿಗಳು ಮತದಾನದ ಮೇಲ್ವಿಚಾರಣೆ ಮಾಡಲಿದ್ದಾರೆ. ಈಗಾಗಲೇ ಮನೆಮನೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವವರು, ತಮಗೆ ತಿಳಿಸಿರುವ ನಿಗದಿತ ದಿನಾಂಕದಂದು ಮನೆಯಲ್ಲಿ ಹಾಜರಿದ್ದು ತಮ್ಮ ಹಕ್ಕು ಚಲಾಯಿಸಬೇಕು.

ಹೇಗಿರಲಿದೆ ಮತದಾನ?

ಈಗಾಗಲೇ ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ಸೂಚಿಸಿರುವವರ ಮನೆಗೆ 5 ಅಧಿಕಾರಿಗಳ ತಂಡ ಆಗಮಿಸಲಿದೆ. ವಿಶೇಷ ಎಂದರೆ ಮನೆಯಲ್ಲೂ ಮತದಾನ ಕೇಂದ್ರದ ಮಾದರಿಯಲ್ಲೇ ಗೌಪ್ಯತೆ ಕಾಯ್ದುಕೊಳ್ಳಲಾಗುತ್ತದೆ. ಮತದಾರರಿರುವ ಮನೆಯ ಸುತ್ತ 100 ಮೀಟರ್‌ ಒಳಗೆ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗುತ್ತದೆ.

ಬ್ಯಾಲೆಟ್‌ ಪೇಪರ್‌ ಮೂಲಕ :

ಮತಪೆಟ್ಟಿಗೆಯಲ್ಲಿ ಮತದಾರರು ಹಾಕುವ ಮತ ಭದ್ರವಾಗಲಿದೆ. ಮತದಾನ ಮಾಡಿದ ನಂತರ ಪೊಲೀಸ್‌ ರಕ್ಷಣೆಯೊಂದಿಗೆ ಬ್ಯಾಲೆಟ್‌ ಬಾಕ್ಸನ್ನು ಸುರಕ್ಷಿತವಾಗಿ ವಾಹನಕ್ಕೆ ವರ್ಗಾಯಿಸಲಾಗುತ್ತದೆ. ಸರ್ಕಾರದ ‘ಎ’ ಗ್ರೇಡ್‌ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಈ ಮತದಾನವು ಮತದಾನ ಕೇಂದ್ರದಂತೆಯೇ ಎಲ್ಲ ಪ್ರಕ್ರಿಯೆಯೊಂದಿಗೆ ನಡೆಯಲಿದೆ.

ನೋಂದಣಿ ಕಡಿಮೆ!

ಕೇಂದ್ರ ಚುನಾವಣೆ ಆಯೋಗ ಯಾರ ಮತವೂ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಅಶಕ್ತರಾದರೂ ಕೆಲವರು ಮತಗಟ್ಟೆಗೆ ಹೋಗಿ ಮತದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 18,809 ಮಂದಿ ಮತದಾರರು ಇದ್ದಾರೆ. ಆದರೆ ಮನೆಯಿಂದಲೇ ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ 1639. ಅದೇ ರೀತಿ 26,559 ಮಂದಿ ವಿಶೇಷಚೇತನರಿದ್ದಾರೆ. ಸದ್ಯ 763 ಮಂದಿ ಮಾತ್ರ ಮನೆಯಿಂದಲೇ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.

You might also like
Leave A Reply

Your email address will not be published.