ಮೋದಿಜೀಗೆ ಹೆಚ್‌ʼಡಿ ದೇವೇಗೌಡರ ಬೆಂಬಲ : ಹೆಚ್ ಡಿಕೆ – ಡಿಕೆಶಿ ಜಟಾಪಟಿ

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಆಗುವುದ್ದಕ್ಕೂ ಮೊದಲು ರಾಜಕೀಯವಾಗಿ ಹಲವು ಬಾರಿ ಕಾದಾಟ ನಡೆಸಿವೆ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ನಿಲುವನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸಾಕಷ್ಟು ಬಾರೀ ವಿರೋಧಿಸಿದ್ದರು. ಮೈತ್ರಿಯಾದ ಬಳಿಕ ಅದೇ ಬಿಜೆಪಿಯನ್ನು ಹಾಡಿ ಹೊಗಳುತ್ತಿರುವುದು ಮಾತ್ರವಲ್ಲದೇ, ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ವೇದಿಕೆ ಹಂಚಿಕೊಳ್ಳುವ ಮೂಲಕ ಹೊಸ ಸಂದೇಶ ನೀಡಿದ್ದಾರೆ. ಈ ಸಂದೇಶ ಕಾಂಗ್ರೆಸ್ಸಿಗರಿಗೆ ಭಾರೀ ಹಿನ್ನೆಡೆ ಉಂಟುಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸುತ್ತಿವೆ.

ಹೌದು, ಹಳೆ ಮೈಸೂರು ಹಾಗೂ ಒಕ್ಕಲಿಗ ಸಮುದಾಯದ ಮತ ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನಕ್ಕೆ ಈ ಸಮಾವೇಶ ದೊಡ್ಡ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ ಎಂದೇ ಎಲ್ಲೆಡೆ ಹೇಳಲಾಗುತ್ತಿದೆ.

ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಒಂದಷ್ಟು ಪ್ರಮಾಣದ ಮತಗಳನ್ನು ತಮ್ಮತ್ತ ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಇದು ಜೆಡಿಎಸ್ ಹೀನಾಯ ಸೋಲಿಗೆ ಕಾರಣವಾಗಿತ್ತು. ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಪ್ರಯೋಗ ಮಾಡಿದ್ದ ಒಕ್ಕಲಿಗ ಸಿಎಂ ಅಸ್ತ್ರವೂ ಇದಕ್ಕೆ ಒಂದು ಕಾರಣವಾಗಿತ್ತು. ಬಹಳ ವರ್ಷಗಳ ಬಳಿಕ ಒಕ್ಕಲಿಗರಿಗೆ ಸಿಎಂ ಪಟ್ಟ ಸಿಗುವ ಅವಕಾಶ ಒದಗಿಬಂದಿದೆ ಎಂದು ಅವರು ಮತಯಾಚನೆ ಮಾಡಿದ್ದರು.

ಆದರೆ, ಈ ಬಾರಿ ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಲೋಕಸಭೆಗೆ ಈ ಮತಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನಕ್ಕೆ ಹೆಚ್ ಡಿ ಕುಮಾರಸ್ವಾಮಿ ಕೈಹಾಕಿದ್ದಾರೆ. ಇದರ ಮುಂದುವರಿದ ಭಾಗವಾಗಿಯೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಪ್ರಧಾನಿ ಮೋದಿ ಜತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಮೂಲಕ ಒಂದು ಸಂದೇಶ ರವಾನೆಯಾಗಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಹೆಚ್ ಡಿಕೆ – ಡಿಕೆಶಿ ರಾಜಕೀಯ ಜಟಾಪಟಿ :

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ, ಹೆಚ್ ಡಿ ದೇವೇಗೌಡರು ಮೋದಿ ಜೊತೆಗೆ ವೇದಿಕೆ ಹಂಚಿಕೊಂಡ ಬೆಳವಣಿಗೆ ಬೆನ್ನಲ್ಲೇ ಒಕ್ಕಲಿಗ ಮತ ಸೆಳೆಯಲು ಡಿಕೆ ಶಿವಕುಮಾರ್ ಹಾಗೂ ಹೆಚ್‌ ಡಿ ಕುಮಾರಸ್ವಾಮಿ ನಡುವೆ ಪೈಪೋಟಿ ಜೋರಾಗಿದೆ. ಇದೇ ಕಾರಣಕ್ಕಾಗಿ ವಿವಾದಾತ್ಮಕ ಹೇಳಿಕೆಗಳೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.

ಹೆಚ್ ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾ‌ರ್ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಒಕ್ಕಲಿಗ ಸ್ವಾಮೀಜಿಗಳ ಭೇಟಿ ವಿಚಾರವೂ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಅಲ್ಲದೇ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಹಾಸನ, ತುಮಕೂರು ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಿದೆ. ಆದರೆ ಜೆಡಿಎಸ್ ಒಕ್ಕಲಿಗ ಮತ ಬುಟ್ಟಿಗೆ ಕಾಂಗ್ರೆಸ್ ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೆ ಇದರಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ತಕ್ಕ ಮಟ್ಟಿಗೆ ಲಾಭದಾಯಕವಾದರೂ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ಒಕ್ಕಲಿಗ ನಾಯಕರ ತಲೆನೋವಿಗೆ ಕಾರಣವಾಗಿದೆ.

ಒಟ್ಟಿನಲ್ಲಿ ಹೆಚ್ ಡಿ ದೇವೇಗೌಡ ಅವರು ಮೋದಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದು, ಸಮಾವೇಶದಲ್ಲಿ ಅವರು ಮಾಡಿರುವ ಭಾಷಣ, ನಡೆಯುತ್ತಿರುವ ವಾಗ್ವಾದಗಳು ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.

You might also like
Leave A Reply

Your email address will not be published.