ನಾಳೆ ಲೋಕಸಭಾ ಚುನಾವಣಾ ದಿನಾಂಕ‌ ಘೋಷಣೆ – ಕಾವೇರಲಿದೆ ಎಲೆಕ್ಷನ್

ಈಗಾಗಲೇ ದೇಶದಾದ್ಯಂತ ಚುನಾವಣೆಯ ಕಾವು ಗಗನಕ್ಕೇರಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿರುವಂತೆಯೇ, ಇದೀಗ ಚುನಾವಣೆ ಕುರಿತಾದ ಅಧಿಕೃತ ಸುದ್ದಿ ಹೊರಬಿದ್ದಿದೆ.

ಭಾರಿ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದ ನೂತನ ಆಯುಕ್ತರ ನೇತೃತ್ವದಲ್ಲಿ ಮಾರ್ಚ್ 16 (ಶನಿವಾರ) ರ ಮಧ್ಯಾಹ್ನ 3 ಗಂಟೆಗೆ ರಾಜಧಾನಿ ದಿಲ್ಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಈ ವೇಳೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಪ್ರಕಟಿಸುವ ಮೂಲಕ ಚುನಾವಣಾ ಮುಹೂರ್ತ ಫಿಕ್ಸ್ ಮಾಡಲಿದೆ.

ಇಂದು ಬೆಳಿಗ್ಗೆಯಷ್ಟೇ ನೂತನ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಂಧು ಅವರು ಅಧಿಕಾರ ಸ್ವೀಕರಿಸಿದ್ದು, ಈಗಾಗಲೇ ವಿವಿಧ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ.

ಮೂಲಗಳ ಪ್ರಕಾರ, ಕೇಂದ್ರ ಚುನಾವಣಾ ಆಯೋಗವು ಲೋಕಸಭೆ ಚುನಾವಣೆ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ಈ ಸಂದರ್ಭದಲ್ಲಿ, ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದ್ದು, ನೂತನ ಆಯುಕ್ತರ ನೇಮಕವಾಗಿದೆ. ಇದರೊಂದಿಗೆ 18ನೇ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯ ಬಗ್ಗೆ ಅಧಿಕೃತ ಸುದ್ದಿ ಹೊರಬೀಳಲಿದೆ.

Lok Sabha election date will be announced tomorrow

ಲೋಕಸಭೆ ಹಾಗೂ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಏಪ್ರಿಲ್/ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿರುವುದರಿಂದ, ಈ ಚುನಾವಣೆಯ ವೇಳಾ ಪಟ್ಟಿಯನ್ನು ಸಹ ಇದೇ ವೇಳೆ ಬಹಿರಂಗಪಡಿಸಲಿದೆ.

ಚುನಾವಣೆಯು ಶಾಂತಿಯುತ ಹಾಗೂ ಯಾವುದೇ ಅಡತಡೆಗಳಿಲ್ಲದೆ ನಡೆಸಲು ತೆಗೆದುಕೊಂಡಿರುವ ಕ್ರಮಗಳು, ಭದ್ರತಾ ವ್ಯವಸ್ಥೆ, ಮತಗಟ್ಟೆಗೆ ಸಂಬಂಧಿಸಿದ ಮಾಹಿತಿಗಳು, ನೋಂದಣಿಯಾಗಿರುವ ಒಟ್ಟು ಅರ್ಹ ಮತದಾರರ ಸಂಖ್ಯೆ ಮುಂತಾದ ವಿವರಗಳನ್ನು ಕೂಡ ಚುನಾವಣಾ ಆಯೋಗ ಪ್ರಕಟಿಸಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.

2019ರಲ್ಲಿ ಲೋಕಸಭೆ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆದಿತ್ತು. ಈ ಬಾರಿ ಕೂಡ ಏಳು ಅಥವಾ ಎಂಟು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ವಿವಿಧ ಹಂತಗಳಲ್ಲಿ ನಡೆಯುವ ಮತದಾನ, ನಾಮಪತ್ರ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ, ನಾಮಪತ್ರಗಳ ವಾಪಸ್ ಪಡೆಯುವ ದಿನಾಂಕ, ಫಲಿತಾಂಶ ಪ್ರಕಟವಾಗಲಿರುವ ದಿನಾಂಕದ ವಿವರಗಳನ್ನು ಆಯೋಗ ಪ್ರಕಟಿಸಲಿದೆ.

ಶನಿವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿ:

ಚುನಾವಣಾ ಆಯೋಗದ ಸುದ್ದಿಗೋಷ್ಠಿಯು ಆಯೋಗದ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ, ಶನಿವಾರದಿಂದಲೇ ದೇಶಾದ್ಯಂತ ಮಾದರಿ ನೀತಿ ಸಂಹಿತೆ (Code of Conduct) ಜಾರಿಯಾಗುವ ಕಾರಣದಿಂದಾಗಿ, ಹಲವಾರು ಸರ್ಕಾರಿ ಕೆಲಸಗಳು, ದಾಖಲೆ ವಿಲೇವಾರಿಗಳು ತಾತ್ಕಾಲಿಕವಾಗಿ ನಿಲುಗಡೆಯಾಗುವುದಂತೂ ಖಚಿತ.

You might also like
Leave A Reply

Your email address will not be published.