ನೂತನ ಕೇಂದ್ರ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಮತ್ತು ಸಂಧು ನೇಮಕ?

ಭಾರತೀಯ ಚುನಾವಣಾ ಆಯೋಗದಲ್ಲಿನ ಎರಡು ಪ್ರಮುಖ ಖಾಲಿ ಹುದ್ದೆಗಳು ಖಾಲಿ ಇದ್ದು, ಲೋಕಸಭಾ ಚುನಾವಣಾ ಸಮೀಪಿಸಿದ್ದರಿಂದ ಕೇಂದ್ರ ಚುನಾವಣಾ ಆಯುಕ್ತರಾಗಿ ಇಬ್ಬರು ಹಿರಿಯ ನಾಗರಿಕ ಸೇವಾ ಅಧಿಕಾರಿಗಳನ್ನು ಇಂದು (ಗುರುವಾರ) ನೇಮಕ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ ಎಂದು ಲೋಕಸಭೆಯ ವಿರೋಧ ಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಗಾಗಿ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ, ಮುಖ್ಯ ಚುನಾವಣಾ ಆಯಕ್ತ ರಾಜೀವ್ ಕುಮಾರ್ ಅವರಿಗೆ ನೆರವಾಗಲು ಇಬ್ಬರು ಚುನಾವಣಾ ಆಯುಕ್ತರ ನೇಮಕದ ತುರ್ತು ಅಗತ್ಯವಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಇಬ್ಬರು ಅಧಿಕಾರಿಗಳ ಹೆಸರನ್ನು ಆಯ್ಕೆ ಮಾಡಲಾಗಿದ್ದು, ಅಧೀರ್ ರಂಜನ್ ಚೌಧರಿ ಅವರು ಈ ಸಮಿತಿ ಸದಸ್ಯರಾಗಿದ್ದರು.

ಕೇಂದ್ರ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಮತ್ತು ಸಂಧು ನೇಮಕ:

ಸಭೆ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಚೌಧರಿ, ಇಬ್ಬರು ಚುನಾವಣಾ ಆಯುಕ್ತರ ಆಯ್ಕೆಗೆ ಒಟ್ಟು ಆರು ಹೆಸರುಗಳನ್ನು ಪರಿಗಣಿಸಲಾಗಿತ್ತು. ಇದರಲ್ಲಿ ಮಾಜಿ ಅಧಿಕಾರಿಗಳಾದ ಉತ್ಪಲ್ ಕುಮಾರ್ ಸಿಂಗ್, ಪ್ರದೀಪ್ ಕುಮಾರ್ ತ್ರಿಪಾಠಿ, ಜ್ಞಾನೇಶ್ ಕುಮಾರ್, ಇಂದೆವಾರ್ ಪಾಂಡೆ, ಸುಖ್ಬೀರ್ ಸಿಂಗ್ ಸಂಧು ಮತ್ತು ಸುಧೀರ್ ಕುಮಾರ್ ಗಂಗಾಧರ್ ರಹಾಟೆ ಅವರ ಹೆಸರುಗಳಿದ್ದವು.

ಅಂತಿಮವಾಗಿ ಉನ್ನತ ಅಧಿಕಾರ ಸಮಿತಿಯ ಬಹುಪಾಲು ಸದಸ್ಯರ ಅಭಿಪ್ರಾಯದಂತೆ ಕೇರಳದ ಜ್ಞಾನೇಶ್ ಕುಮಾರ್ ಹಾಗೂ ಪಂಜಾಬ್ ನ ಸುಖ್’ಬೀರ್ ಸಂಧು ಅವರ ಹೆಸರುಗಳನ್ನು ಆಯ್ಕೆ ಮಾಡಲಾಯಿತು.

ಯಾರು ಈ ಸಂಧು ಮತ್ತು ಕುಮಾರ್?

ಸಂಧು ಮತ್ತು ಕುಮಾರ್ ಇಬ್ಬರೂ 1988ರ ಬ್ಯಾಚ್ನ ನಿವೃತ್ತ ಐಎಎಸ್ ಅಧಿಕಾರಿಗಳಾಗಿದ್ದಾರೆ. ಸಂಧು ಅವರು ಉತ್ತರಾಖಂಡ ಕೇಡರ್ / ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಹಾಗೂ ಕುಮಾರ್ ಅವರು ಕೇರಳ ಕೇಡರ್ / ಸಂಸದೀಯ ವ್ಯವಹಾರಗಳ ಸಚಿವಾಲಯದ ಮತ್ತು ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ಕೇಂದ್ರ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆ ಖಂಡಿಸಿದ ಚೌಧರಿ, ಯಾಕೆ?

ಚೌಧರಿ ಅವರು ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ವಿರೋಧಿಸಿದ್ದು, ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿ ಗೈರಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಶೋಧ ಸಮಿತಿಗೆ 200ಕ್ಕೂ ಹೆಚ್ಚು ಅಭ್ಯರ್ಥಿಗಳ ಬೃಹತ್ ಪಟ್ಟಿ ನೀಡಿರುವಾಗ, ಆರು ಹೆಸರುಗಳನ್ನು ಮಾತ್ರ ಹೇಗೆ ಅಂತಿಮಗೊಳಿಸಲಾಗಿತ್ತು ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ ಎಂದು ಆರೋಪಿಸಿದರು.

ಕಳೆದ ರಾತ್ರಿ ಪರಿಶಿಲನೆಗಾಗಿ 212 ಮಂದಿಯ ಹೆಸರುಗಳನ್ನು ನನಗೆ ಕಳುಹಿಸಿ, ಪರಿಶೀಲಿಸಿ ಅಂತಿಮಗೊಳಿಸಲು ಹೇಳಲಾಗಿತ್ತು. ಮಧ್ಯರಾತ್ರಿ ದಿಲ್ಲಿ ತಲುಪಿದ್ದರಿಂದ ಹಾಗೂ ಸಮಯದ ಅಭಾವದಿಂದ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಮಧ್ಯಾಹ್ನ 12 ಗಂಟೆಯಲ್ಲಿ ಸಭೆ ಆಯೋಜನೆಗೊಂಡ ಕಾರಣ ಕಡಿಮೆ ಸಮಯದಲ್ಲಿ ಏನನ್ನು ನಿರ್ಧರಿಸುವುದಕ್ಕೆ ಸಾಧ್ಯವಾಗಲಿಲ್ಲ. ಸಭೆಗೆ ಮುನ್ನ ನನಗೆ ಆರು ಸದಸ್ಯರ ಪಟ್ಟಿಯನ್ನು ನೀಡಿದ್ದು, ಅದರಲ್ಲಿ ಜ್ಞಾನೇಶ್ ಕುಮಾರ್ ಹಾಗೂ ಸುಖ್’ಬೀರ್ ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ ಕೆಲವೇ ನಿಮಿಷಗಳಲ್ಲಿ ನೇಮಕ ಮಾಡಲಾಯಿತು ಎಂದು ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.

You might also like
Leave A Reply

Your email address will not be published.