ಅʼಶೋಕʼ ವನದಲಿ ಬಾಡಿತೇ ಕಮಲ?

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷದ ಮೇಲೆ ಮುಗಿಬೀಳಬೇಕಾಗಿದ್ದ ಬಿಜೆಪಿ ಪಕ್ಷ ತಾನೇ ಮುಗ್ಗರಿಸಿ ಬೀಳುತ್ತಿದೆ. ಇದಕ್ಕೆ ಕಾರಣ ಶಾಸಕಾಂಗ ಪಕ್ಷದ ನಾಯಕ ಹಾಗೂ ಪಕ್ಷದ ಶಾಸಕರಲ್ಲಿ ಒಮ್ಮತ, ಒಗ್ಗಟ್ಟು ಇಲ್ಲದೇ ಇರುವುದು ಎಂಬುದು ಜಗಜ್ಜಾಹೀರಾದ ವಿಷಯ.

R Ashok The Leader of the Opposition
R Ashok The Leader of the Opposition

 

ಗುರುವಾರದ ಅಧಿವೇಶನದ ವೇಳೆಯೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಮ್ಮ ನಿರ್ಧಾರಕ್ಕೆ ಕೈಕೈ ಹಿಸುಕಿಕೊಂಡು, ಸಪ್ಪೆ ಮೋರೆಹಾಕಿ ಸದನದಿಂದ ಹೊರಹೋಗುವಂತಾದ ಪ್ರಸಂಗ ನಡೆಯಿತು.

ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳೆಯವರ ಗನ್ʼಮ್ಯಾನ್ʼಗಳು ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಅವರ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಉತ್ತರ ವಿರೋಧಿಸಿ ನಡೆಸಿದ ಸಭಾತ್ಯಾಗ ಗೊಂದಲ, ಅಸಮಾಧಾನಕ್ಕೆ ಕಾರಣವಾಗಿ; ಸ್ವಪಕ್ಷದ ಆರ್.ಅಶೋಕ್ ಮೇಲೆಯೇ ಬಿಜೆಪಿ ಶಾಸಕರು ಅಸಮಾಧಾನ ಹೊರಹಾಕಿದ ಪ್ರಸಂಗ ನಡೆಯಿತು.

ಬಿಜೆಪಿ ಪಕ್ಷದ ಕಾರ್ಯಕರ್ತರಾದ ಪೃಥ್ವಿ ಸಿಂಗ್ ಹಾಗೂ ಅಭಿಜಿತ್ ಜವಳ್ಕರ್ ಪರ ಧ್ವನಿ ಎತ್ತಿದ್ದ ಮತ್ತಿತರ ಸದಸ್ಯರು ಧರಣಿ ನಡೆಸಲು ತೀರ್ಮಾನಿಸಿದ್ದರು. ಆದರೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಏಕಾಏಕಿ ಸಭಾತ್ಯಾಗ ಎಂದು ಪ್ರಕಟಿಸಿ ಹೊರನಡೆದರು. ಪ್ರತಿಪಕ್ಷ ನಾಯಕರ ಅಚ್ಚರಿಯ ನಿರ್ಧಾರ ಕಂಡು ಬೆರಗಾದ ಶಾಸಕ ಹೆಚ್.ಆರ್.ವಿಶ್ವನಾಥ್ ಹಾಗೂ ಅಭಯ್ ಪಾಟೀಲ್ ತಮ್ಮ ಸಿಟ್ಟನ್ನು ಸ್ಥಳದಲ್ಲಿಯೇ ಪ್ರದರ್ಶಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಶಾಸಕ ಹೆಚ್.ಆರ್.ವಿಶ್ವನಾಥ್ ಆರ್.ಅಶೋಕ್ ಕುರಿತಾಗಿ ಅಡ್ಜಸ್ಟ್ʼಮೆಂಟ್ ಗಿರಾಕಿ ಎಂದು ಬೈಯ್ದುಕೊಂಡು, ಸದನಕ್ಕೆ ಆಗಮಿಸುವುದಿಲ್ಲ ಎಂದು ಬೈದುಕೊಂಡೇ ತೆರಳಿದರು.

ಆರ್.ಅಶೋಕ್ ವಿಪಕ್ಷದ ನಾಯಕನಾಗಿ ಆಯ್ಕೆಯಾದ ಕ್ಷಣದಿಂದಲೇ ಬಿಜೆಪಿಯ ಹಲವು ನಾಯಕರಲ್ಲಿ ಅಸಮಾಧಾನ ಹೊಗೆಯಾಡುವುದು ಆರಂಭವಾಗಿತ್ತು. ಸದನದಲ್ಲಿ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಕೆಲ ಪ್ರಸಂಗಗಳಲ್ಲಿ ವಿರೋಧ ಪಕ್ಷಕ್ಕೆ ವಿರೋಧ ಪಕ್ಷದಂತೆ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಪದ್ಮನಾಭನಗರ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಹಾಗೂ ಈಗಿನ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಕನಕಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಕನಕಪುರ ಕ್ಷೇತ್ರದಲ್ಲಿ ಆರ್.ಅಶೋಕ್ ಪೈಪೋಟಿ ನೀಡಲಿಲ್ಲ. ಪದ್ಮನಾಭನಗರದಲ್ಲಿ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡು ಜಯಸಾಧಿಸಿದ್ದಾರೆ ಎಂದು ಸ್ವಪಕ್ಷದ ನಾಯಕರೇ ಜರಿಯುತ್ತಿದ್ದಾರೆ. ಕನಕಪುರದಲ್ಲಿ ಆರ್.ಅಶೋಕ್ ಅವರು ಕೇವಲ ಶೇ.10 ರಷ್ಟು ಮತ ಪಡೆದಿದ್ದನ್ನು ಇಲ್ಲಿ ಸ್ಮರಿಸಲೇಬೇಕು.

ವಿಧಾನಸಭೆ ಅಧಿವೇಶನದಲ್ಲಿ ಪಕ್ಷಕ್ಕೆ ಛಾವಣಿಯಂತಾಗಬೇಕಿದ್ದ ಆರ್.ಅಶೋಕ್ ಸ್ವಪಕ್ಷದವರಿಂದಲೇ ವಿರೋಧ ಎದುರಿಸುತ್ತಿರುವುದು ಮುಜುಗರದ ವಿಷಯ. ಇನ್ನೂ ಹಲವು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಅಲ್ಲಿಯವರೆಗೆ ಆರ್.ಅಶೋಕ್ ತಮ್ಮ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬಳಸಿಕೊಂಡು ತಮ್ಮ ನಾಯಕತ್ವ ನಿರೂಪಿಸಿಕೊಳ್ಳುತ್ತಾರಾ? ಪಕ್ಷದ ವರ್ಚಸ್ಸನ್ನು ಹೆಚ್ಚಳ ಮಾಡಲು ಅವರಿಂದ ಸಾಧ್ಯವಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

You might also like
Leave A Reply

Your email address will not be published.