ಅಮೇಠಿ ಕ್ಷೇತ್ರಕ್ಕೆ ಸೋನಿಯಾ ಗಾಂಧಿ ಅಳಿಯ ಫಿಕ್ಸ್‌ – ಸ್ಮೃತಿ ಇರಾನಿ ವಿರುದ್ಧ ಗೆಲ್ತಾರಾ ವಾದ್ರಾ?

ತಲೆತಲಾಂತರದಿಂದ ಗಾಂಧಿ ಕುಟುಂಬದ ಕರ್ಮಭೂಮಿಯಾಗಿರುವ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ, ಆದರೆ, ವಿಕಿಪೀಡಿಯ ಘೋಷಣೆಯನ್ನು ಮಾಡಿದೆ. ಹಾಗಾದರೆ ಯಾರು ಆ ಸ್ಪರ್ಧಿ?

ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್ಸಿನಿಂದ ರಾಬರ್ಟ್ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ವಿಕಿಪೀಡಿಯ ತನ್ನ ಚುನಾವಣೆಯ ಪೇಜ್ ನಲ್ಲಿ ಹಾಕಿದೆ. ಆ ಮೂಲಕ, ಕಾಂಗ್ರೆಸ್ ಅಧಿಕೃತ ಘೋಷಣೆಗೂ ಮುನ್ನವೇ ಅಭ್ಯರ್ಥಿ ಮಾಹಿತಿಯನ್ನು ಅಪ್ಡೇಟ್ ಮಾಡಿದೆ. ಈ ಹಿಂದೆಯೂ, ಕರ್ನಾಟಕದ ರಾಜ್ಯಸಭಾ ಚುನಾವಣೆಯ ವೇಳೆ ಚುನಾವಣೆ ನಡೆಯುವ ಮುನ್ನವೇ ಬಿಜೆಪಿ – ಜೆಡಿಎಸ್ ಜಂಟಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರ ಹೆಸರನ್ನು ವಿಜೇತರು ಎಂದು ಪ್ರಕಟಿಸಿ ವಿಕಿಪೀಡಿಯ ಯಡವಟ್ಟು ಮಾಡಿಕೊಂಡಿತ್ತು.

ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿಯಾಗಲಿ, ಅಮೇಠಿ ಮತ್ತು ರಾಯ್’ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಈ ನಡುವೆ, ವಯನಾಡ್ ನಿಂದ ರಾಹುಲ್ ಗಾಂಧಿ ನಾಮಪತ್ರವನ್ನು ಈಗಾಗಲೇ ಸಲ್ಲಿಸಿದ್ದಾರೆ.

Sonia Gandhi Son-in-law Fix for Amethi Constituency - Vadra vs Smriti Irani Election Fight?

ಅಮೇಠಿಯಿಂದ ಪ್ರಿಯಾಂಕ ಪತಿ ಸ್ಪರ್ಧಿಸುವುದು ಬಹುತೇಕ ಅಂತಿಮ ಎಂದು ಹೇಳಲಾಗುತ್ತಿದೆ. ಅಮೇಠಿಯ ಜನತೆ ನಾನು ಚುನಾವಣೆಗೆ ಸ್ಪರ್ಧಿಸಬೇಕೆಂದು ಬಯಸುತ್ತಿದ್ದಾರೆ ಎನ್ನುವ ಹೇಳಿಕೆಯನ್ನು ನೀಡುವ ಮೂಲಕ ಚುನಾವಣಾ ಕಣಕ್ಕೆ ಧುಮುಕುವ ಸುಳಿವನ್ನು ನೀಡಿದ್ದಾರೆ.

“ಅಮೇಠಿ ಮತ್ತು ರಾಯ್ಬರೇಲಿ ಕ್ಷೇತ್ರದಿಂದ ಯಾರೇ ಗೆದ್ದರೂ ಜನರ ಹಿತಕ್ಕಾಗಿ ಕೆಲಸ ಮಾಡಬೇಕಿದೆ, ರಾಜಕೀಯ ಮೀರಿದ ಕೆಲಸ ಇಲ್ಲಿ ಆಗಬೇಕಿದೆ. ಅಮೇಠಿಯ ಮತದಾರ ಹಾಲೀ ಸಂಸದರ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿಲ್ಲ” ಎಂದು ರಾಬರ್ಟ್ ವಾದ್ರಾ, ಸ್ಮೃತಿ ಇರಾನಿ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದಾರೆ.

ಅಮೇಠಿಯ ಜನತೆ ನಾನು ಸಂಸದನಾಗಿ ಅವರ ಧ್ವನಿಯಾಗಬೇಕೆಂದು ಬಯಸುತ್ತಿದ್ದಾರೆ. ಅಮೇಠಿ, ರಾಯ್’ಬರೇಲಿ ಮತ್ತು ಸುಲ್ತಾನ್ ಪುರ ಕ್ಷೇತ್ರದ ಅಭಿವೃದ್ದಿಗೆ ಗಾಂಧಿ ಕುಟುಂಬದ ಕೊಡುಗೆ ಅಪಾರ. ಈಗಿನ ಸಂಸದರನ್ನು ಯಾಕಾದರೂ ಆಯ್ಕೆ ಮಾಡಿದೆವು ಎಂದು ಅಮೇಠಿಯ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ರಾಬರ್ಟ್ ವಾದ್ರಾ ಹೇಳಿದ್ದಾರೆ.

You might also like
Leave A Reply

Your email address will not be published.