ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಾಕ್ಸರ್ ವಿಜೇಂದರ್ ಸಿಂಗ್!

ಬಾಕ್ಸರ್ ವಿಜೇಂದರ್ ಸಿಂಗ್ ಅವರು ನವದೆಹಲಿಯ ದೀನ್ ದಯಾಳ್ ಉಪಧ್ಯಾಯ ಮಾರ್ಗದಲ್ಲಿರುವ ಬಿಜೆಪಿಯ ಮುಖ್ಯ ಕಛೇರಿಯಲ್ಲಿ ಇಂದು ಮಧ್ಯಾಹ್ನ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 2019 ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಸೇರಿ ಸ್ಪರ್ಧೆ ಮಾಡಿದ್ದ ವಿಜೇಂದರ್ ಇಂದು ಹಲವು ನಾಯಕರ ಎದುರು ಬಿಜೆಪಿ ಸೇರಿದರು.

ಬಿಜೆಪಿ ಸೇರಿದ ಬಳಿಕ ಪ್ರತಿಕ್ರಿಯೆ ನೀಡಿದ ವಿಜೇಂದರ್, ನಾನು ಅಭಿವೃದ್ಧಿಯ ಭಾಗವಾಗಲು ಈ ಪಾರ್ಟಿ ಸೇರಿದ್ದೇನೆ. ನಾನು ಮೊದಲು ಕಾಂಗ್ರೆಸ್‌ನಲ್ಲಿದ್ದೆ. ಹೌದು, ಆದರೆ ನಾನು ಈಗ ಅಭಿವೃದ್ದಿಯ ಪರವಾಗಿ ಕೆಲಸ ಮಾಡಲು ಇಚ್ಛಿಸುತ್ತೇನೆ ಬಿಜೆಪಿ ಆಡಳಿತದಲ್ಲಿ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಏನಾದರೂ ತಪ್ಪಿದ್ದಲ್ಲಿ ನಾನು ತಪ್ಪು ಎಂದೇ ಹೇಳುತ್ತೇನೆ. ಕಾಂಗ್ರೆಸ್‌ನಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ ಇದಕ್ಕಿಂತ ಜಾಸ್ತಿ ನಾನು ಕಾಂಗ್ರೆಸ್ ಬಗ್ಗೆ ಏನನ್ನೂ ಹೇಳಲು ಇಚ್ಚಿಸುವುದಿಲ್ಲ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಅಂದರೆ ಮಾರ್ಚ್ 30 ಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಚುನಾವಣೆಯ ಸ್ಪರ್ಧೆಯ ಕುರಿತು ಬರೆದುಕೊಂಡಿರುವ ವಿಜೆಂದರ್, ಎಲ್ಲಿಂದ ಜನರು ಬಯಸುತ್ತಾರೋ ನಾನು ರೆಡಿ ಎಂದು ಹೇಳಿದ್ದರು.

 

ಹೇಮಮಾಲಿನಿ ಅವರು ಬಿಜೆಪಿಯಿಂದ ಮಥುರಾದಿಂದ ಸ್ಪರ್ಧಿಸುವುದು ಖಾತರಿಯಾಗುತ್ತಿದ್ದಂತೆಯೇ, ಹೇಮಮಾಲಿನಿಯವರಿಗೆ ಪ್ರತಿ ಸ್ಪರ್ಧಿಯಾಗಿ ಸ್ಪರ್ಧಿಸಲು ವಿಜೇಂದರ್ ಅವರ ಹೆಸರು ಕೇಳಿ ಬಂದಿತ್ತು. ಇನ್ನು ಜಾಟ್ ಸಮುದಾಯ ಪ್ರತಿನಿಧಿಸುವ ವಿಜೇಂದರ್ ಅವರಿಗೆ ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸಮುದಾಯ ಬೆಂಬಲವೂ ಇವರಿಗಿದೆ. 2019 ರಲ್ಲಿ ದೆಹಲಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದ ವಿಜೇಂದರ್ ಸಂಸತ್ತು ಪ್ರವೇಶಿಸಲು ವಿಫಲವಾಗಿದ್ದರು.

ಗಮನಿಸಬೇಕಾದ ಅಂಶವೆಂದರೆ, ಬ್ರಿಜ್ ಭೂಷಣ್ ವಿರುದ್ದ ನಡೆದ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಂಗ್, ರಾಹುಲ್‌ ಗಾಂಧಿ ಜೊತೆಗೆ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲೂ ಭಾಗವಹಿಸಿದ್ದರು.

ಇನ್ನು ಸಿಂಗ್ ಅವರು 2008 ರ ಒಲಂಪಿಕ್‌ನಲ್ಲಿ ಭಾರತಕ್ಕೆ ಪದಕ ಗೆದ್ದ ಮೊದಲ ಬಾಕ್ಸರ್ ಆಗಿ ಹೊರಹೊಮ್ಮಿದ್ದಾರೆ. 2009 ರ ಚಾಂಪಿಯನ್ ಶಿಪ್ ಹಾಗೂ 2010 ರ ಕಾಮನ್‌ವೆಲ್ತ್ ಗೇಮ್ ಎರಡರಲ್ಲೂ ಕಂಚಿನ ಪದಕ ಗಳಿಸಿದ್ದರು. ಹಾಗೂ ಭಾರತೀಯ ಕ್ರೀಡೆಗೆ ನೀಡಿದ ಕೊಡುಗೆಗಳಿಗಾಗಿ ಅವರು 2010 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.

You might also like
Leave A Reply

Your email address will not be published.