ನಿರಂತರ ವಿದ್ಯುತ್ ಪೂರೈಕೆಗೆ ಅಡ್ದಿಯಾಗದಂತೆ ದೋಷಪೂರಿತ ವಿದ್ಯುತ್ ಪರಿವರ್ತಕಗಳ ತ್ವರಿತ ಬದಲಾವಣೆ!

ಚಾ.ವಿ.ಸ.ನಿ.ನಿ ಯು ಗ್ರಾಹಕರ ವಿದ್ಯುತ್ ಪೂರೈಕೆಗೆ ಹಲವಾರು ಕ್ರಮಗಳನ್ನು ಕೈಗೊಂಡು, ನಿರಂತರ ವಿದ್ಯುತ್ ಪೂರೈಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ, ಜನ ಮನ್ನಣೆಗೆ ಪಾತ್ರವಾಗಿದೆ. ತನ್ನ ವ್ಯಾಪ್ತಿಯ ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಗ್ರಾಹಕರ ಯಾವುದೇ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸುಲಭ ವಿಧಾನಗಳನ್ನು ಚಾ.ವಿ.ಸ.ನಿ.ನಿ ಅನುಸರಿಸುತ್ತಿದ್ದು, ಪ್ರತಿ ಗ್ರಾಹಕರನ್ನೂ ತಲುಪುವಲ್ಲಿ ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆ.

ಈ ಹಿಂದೆ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ತಮಗೆ ಸಂಬಂಧಿಸಿದ ವಿದ್ಯುತ್ ಕಂಪನಿಗೆ ತಿಳಿಸಲು ಸ್ಥಳೀಯ ಪವರ್’ಮ್ಯಾನ್’ಗಳಿಗೆ ಅಥವಾ ಸ್ಥಳೀಯ ಉಪವಿಭಾಗವನ್ನು ಸಂಪರ್ಕಿಸಬೇಕಿತ್ತು. ಆದರೆ, ಈ ವಿಧಾನ ಅಷ್ಟೊಂದು ಪರಿಣಾಮಕಾರಿಯಾಗಿರಲೂ ಇಲ್ಲ ಹಾಗೂ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸ್ಪಂದನೆ ಹಾಗೂ ಪರಿಹಾರವನ್ನು ಒದಗಿಸುವುದು ಕಷ್ಟವಾಗಿತ್ತು. ಆ ನಿಟ್ಟಿನಲ್ಲಿ ಅತ್ಯಂತ ತ್ವರಿತವಾಗಿ ಗ್ರಾಹಕರನ್ನು ತಲುಪಲು ಕೆಲವು ವಿಧಾನಗಳನ್ನು ಚಾ.ವಿ.ಸ.ನಿ.ನಿ ಪರಿಚಯಿಸಿದೆ.

ಗೃಹಬಳಕೆದಾರರಿಗೆ, ರೈತರ ಕೃಷಿ ಪಂಪ್’ಸೆಟ್’ಗಳಿಗೆ, ಕೈಗಾರಿಕಾ ವಲಯಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ಅಡಚಣೆಯಾಗದಂತೆ ಹಲವಾರು ಸೇವೆಗಳನ್ನು ಚಾ.ವಿ.ಸ.ನಿ.ನಿಯು ಒದಗಿಸುತ್ತಿದ್ದು, ನಾಗರಿಕರ ಸುರಕ್ಷತೆಗೆ ಪ್ರಥಮ ಆದ್ಯತೆಯನ್ನು ನೀಡಿ ಹಲವು ವಿಧಾನಗಳ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಚಾ.ವಿ.ಸ.ನಿ.ನಿ ಪ್ರಯತ್ನಿಸುತ್ತಿದೆ. ಅಂತೆಯೇ ಯಾವುದೇ ರೀತಿಯ ವಿದ್ಯುತ್ ಅವಘಡಗಳಾಗದಂತೆ ಗಮನಹರಿಸುತ್ತಿದ್ದು, ದೋಷಪೂರಿತ ವಿದ್ಯುತ್ ಪರಿವರ್ತಕಗಳನ್ನು ವಿಲೇವಾರಿ ಮಾಡುತ್ತಿದೆ. ಚಾ.ವಿ.ಸ.ನಿ.ನಿ ವ್ಯಾಪ್ತಿಯಲ್ಲಿ 1,71,818 ವಿದ್ಯುತ್ ಪರಿವರ್ತಕಗಳು ಹಾಗೂ 27 ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರಗಳಿದ್ದು, ದೋಷಪೂರಿತ ವಿದ್ಯುತ್ ಪರಿವರ್ತಕಗಳನ್ನು ಕೇವಲ 24 ಗಂಟೆಯೊಳಗೆ ಬದಲಾಯಿಸಿ, ಗ್ರಾಹಕರಿಗೆ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಗಳಾಗದಂತೆ ಚಾ.ವಿ.ಸ.ನಿ ಯು ಮುತುವರ್ಜಿ ವಹಿಸುತ್ತಿದೆ.

​ಚಾ.ವಿ.ಸ.ನಿ.ನಿ ವ್ಯಾಪ್ತಿಯಲ್ಲಿ ವಿಫಲ ವಿದ್ಯುತ್ ಪರಿವರ್ತಕಗಳನ್ನು ಕಂಡರೆ 9141038902 ಕ್ಕೆ ಕರೆಮಾಡಿ ತಿಳಿಸಿ ಅಥವಾ 24×7 ಉಚಿತ ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆಮಾಡಿ.

You might also like
Leave A Reply

Your email address will not be published.