ಬಸ್ ಕಂಡಕ್ಟರ್’ಗಳೇ ಎಚ್ಚರ! – ನಿಮಗೂ ಇದು ಸಂಭವಿಸಬಹುದು

ಮಹಿಳೆಯರಿಗಾಗಿ ತಂದ ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ ಎಷ್ಟು ಭಾಗ್ಯ ತಂದುಕೊಟ್ಟಿದೆಯೋ, ಅಷ್ಟೇ ನಾನಾ ಸಮಸ್ಯೆಗಳಿಗೂ ನಾಂದಿ ಹಾಡಿದೆ. ಇತ್ತೀಚೆಗೆ ಓರ್ವ ಕಂಡಕ್ಟರ್ ಅಮಾನತ್ತು ಆದದ್ದು, ಸೀಟು ಇಲ್ಲದೆ ಪುರುಷರು ಕಂಡಕ್ಟರ್ ಅನ್ನು ತರಾಟೆಗೆ ತೆಗೆದುಕೊಂಡಂತ ಘಟನೆಗಳು ಸಾಕಷ್ಟು ನೋಡಿದ್ದೇವೆ. ಇವಾಗ ಮತ್ತೇನಾಯ್ತು ಅಂತೀರ?

ಮಹಿಳೆಯರಿಗಾಗಿ ಉಚಿತ ಪ್ರಯಾಣ ಕಲ್ಪಿಸಿರುವುದು ಕರ್ನಾಟಕ ಮಾತ್ರ ಅಲ್ಲ. ತೆಲಂಗಾಣದಲ್ಲೂ ಈ ವ್ಯವಸ್ಥೆ ಜಾರಿಯಲ್ಲಿದೆ. ಓರ್ವ ವ್ಯಕ್ತಿ ತಾನು ಹಣ ನೀಡಿ ಟಿಕೇಟ್ ಪಡೆದರೂ ಸೀಟು ಇಲ್ಲದೇ ಪ್ರಯಾಣಿಸಬೇಕಾ? ಎಂದು ಕಂಡಕ್ಟರ್ ಕೆನ್ನೆಗೆ ಕಚ್ಚಿದ ಘಟನೆ ನಡೆದಿದೆ. ಇದು ನೋಡುವುದಕ್ಕೆ ಹಾಸ್ಯಾಸ್ಪದವಾಗಿದ್ದರೂ ಪಾಪ ನಮ್ ಕಂಡಕ್ಟರ್ ಗಳ ವ್ಯಥೆಯಂತೂ ನೋಡಲಾಗದು!

ಮಹಾರಾಷ್ಟ್ರದ ಗಡಿಭಾಗದಿಂದ ಪಂಡ್ರಕವಾಡಕ್ಕೆ ತೆರಳುತ್ತಿದ್ದ ಆದಿಲಾಬಾದ್ ಡಿಪೋಗೆ ಸೇರಿದ ಆರ್.ಟಿ.ಸಿ ಬಸ್ ಅಲ್ಲಿ ಈ ಘಟನೆ ನಡೆದಿದೆ. ಹಸ್ನಾಪುರದ ಅಜೀಂ ಖಾನ್ ಎಂಬ ವ್ಯಕ್ತಿ ಮಹಾರಾಷ್ಟ್ರದ ಗಡಿಯಲ್ಲಿರುವ ಬೋರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಆದಿಲಾಬಾದ್ಗೆ ಟಿಕೆಟ್ ತೆಗೆದುಕೊಂಡಿದ್ದಾನೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಆತನಿಗೆ ಸೀಟು ಸಿಗಲಿಲ್ಲ.

ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ, ಉಚಿತವಾಗಿ ಪ್ರಯಾಣ ಮಾಡುತ್ತಿರುವ ಮಹಿಳೆಯರು ಕೂತು ಪ್ರಯಾಣಿಸುವುದ್ದನ್ನು ಕಂಡು ಪಿತ್ತ ನೆತ್ತಿಗೇರಿಸಿಕೊಂಡಿದ್ದಾನೆ. ಹಣ ಕೊಟ್ಟು ಟಿಕೇಟ್ ಖರೀದಿ ಮಾಡಿದರೂ ಸೀಟು ಸಿಗದೆ ನಿಂತು ಪ್ರಯಾಣಿಸಬೇಕಿದೆ. ಆದರೆ, ಉಚಿತ ಪ್ರಯಾಣ ಕಲ್ಪಿಸಿಕೊಡುವುದರೊಂದಿಗೆ ಬಹುತೇಕ ಆಸನಗಳಲ್ಲಿ ಮಹಿಳೆಯರೇ ಕೂತಿದ್ದಾರೆ ಎಂದು ಕಂಡಕ್ಟರ್ ಜೊತೆ ಜಗಳ ಮಾಡಿದ್ದಲ್ಲದೇ ಹಣ ವಾಪಸ್ಸು ಕೇಳಿದ್ದಾರೆ.

ಕಂಡಕ್ಟರ್ ಹಣ ಹಿಂತಿರುಗಿಸಿದ ಬಳಿಕ ಬಸ್ಸಿನಿಂದ ಇಳಿದ ಅಜೀಂ ಖಾನ್ ಮತ್ತೊಂದು ಖಾಸಗಿ ವಾಹನದಲ್ಲಿ ಆರ್ ಟಿಸಿ ಬಸ್ಸನ್ನು ಹಿಂಬಾಲಿಸಿ ಆದಿಲಾಬಾದ್ ಗಡಿ ತಲುಪಿದಾಗ ಕಂಡಕ್ಟರ್ ಜೊತೆ ಮತ್ತೊಮ್ಮೆ ವಾಗ್ವಾದಕ್ಕಿಳಿದಿದ್ದಾನೆ.

ಆತನ ವಾಗ್ವಾದವನ್ನು ನಿಲ್ಲಿಸಲು ಸಹ ಪ್ರಯಾಣಿಕರು ಎಷ್ಟೇ ಸಮಾಧಾನ ಮಾಡಲೆತ್ನಿಸಿದರೂ, ಈತ ಮಾತು ಕೇಳದೆ ಕಂಡಕ್ಟರ್ ಜೊತೆ ಗಲಾಟೆ ಮಾಡಿದ್ದಾರೆ. ಮತ್ತೆ ಯಾಕೆ ಬಸ್ ಅನ್ನು ಹತ್ತುತ್ತೀರಿ ಎಂದು ಕಂಡಕ್ಟರ್ ಕೇಳಿದಾಗ ಸಿಟ್ಟಿಗೆದ್ದ ಅಜೀಂ ಖಾನ್ ಕಂಡಕ್ಟರ್ ಕೆನ್ನೆಗೆ ಕಚ್ಚಿ ಓಡಿ ಹೋಗಿದ್ದಾನೆ!

ಬಸ್ಸು ಅದಿಲಾಬಾದ್ ತಲುಪಿದಾಗ, ಕಂಡಕ್ಟರ್ ಎನ್.ಎ. ಖಾನ್ ಘಟನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರನ್ನೂ ಸಂಪರ್ಕಿಸಿದ್ದಾರೆ. ದೂರನ್ನು ಸ್ವೀಕರಿಸಿದ ಟೂ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

You might also like
Leave A Reply

Your email address will not be published.