ಗ್ರಾಹಕರ ಸುರಕ್ಷತೆಗೆ ಚಾ.ವಿ.ಸ.ನಿ.ನಿ – ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುರಕ್ಷತೆಗಾಗಿ ಕೈಗೊಂಡ ಕಾರ್ಯಕ್ರಮಗಳು ಹೀಗಿವೆ!

ವಿವಿಧ ಕಾರಣಗಳಿಂದ ವಿದ್ಯುತ್ ಅವಘಡಗಳು ಸಂಭವಿಸಿ ಪ್ರಾಣಹಾನಿ ಉಂಟಾಗುತ್ತಿರುವ ಸುದ್ದಿಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ವಿದ್ಯುತ್ ವಿತರಣಾ ಕಂಪನಿಗಳು ಅಥವಾ ವಿದ್ಯುತ್ ಸಂಬಂಧಿತ ಇಲಾಖೆ/ನಿಗಮಗಳು ವಿವಿಧ ರೀತಿಯಲ್ಲಿ ಮಾಧ್ಯಮಗಳ ಮೂಲಕ ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ವಿದ್ಯುತ್ ಅವಘಡಗಳ ಕುರಿತು ಅರಿವನ್ನು ಮೂಡಿಸುತ್ತಿದ್ದರೂ ಕೂಡ, ವಿದ್ಯುತ್ ಅವಘಡಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ವಿದ್ಯುತ್ ಮಾರ್ಗಗಳು ಅಥವಾ ವಿದ್ಯುತ್ ಸಂಬಂಧಿತ ಯಾವುದೇ ಉಪಕರಣಗಳ ಬಳಕೆಯ ನಡುವೆ ಬಹಳಷ್ಟು ಎಚ್ಚರಿಕೆಯನ್ನು ವಹಿಸಬೇಕಾದದ್ದು ಅತ್ಯಗತ್ಯ. ಒಂದೊಮ್ಮೆ ಸ್ವಲ್ಪ ಎಚ್ಚರ ತಪ್ಪಿದರೂ ವಿದ್ಯುತ್ ಶಾಕ್ ಅಥವಾ ಶಾರ್ಟ್ ಸರ್ಕ್ಯೂಟ್’ನಿಂದ ಅಪಾಯ ಖಂಡಿತ. ಹಲವು ಪ್ರಕರಣಗಳಲ್ಲಿ ಸಣ್ಣ ಪ್ರಮಾದದಿಂದ ಪ್ರಾಣಹಾನಿ ಉಂಟಾಗಿರುವ ಬಹಳಷ್ಟು ಉದಾಹರಣೆಗಳಿವೆ.

ಈ ನಿಟ್ಟಿನಲ್ಲಿ, ನಾಗರಿಕರಲ್ಲಿ ವಿದ್ಯುತ್ ಬಳಕೆಯ ಕುರಿತಾಗಿ ಇನ್ನಷ್ಟು ಹೆಚ್ಚಿನ ಅರಿವನ್ನು ಮೂಡಿಸುವ ಸಲುವಾಗಿ, ವಿದ್ಯುತ್ ವಿತರಣಾ ಕಂಪನಿಗಳಿಗೆ ಇಂಧನ ಇಲಾಖೆಯು ನೀಡಿದ ಆದೇಶದಂತೆ ಆಯಾ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಹಾಗೂ ಅಪಾಯಕಾರಿ ಎನಿಸುವ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗಗಳ ದುರಸ್ತಿಯೊಂದಿಗೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗುತ್ತಿದೆ.

ಚಾ.ವಿ.ಸ.ನಿ.ನಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳನ್ನು ಪರಿಣಾಮಕಾರಿಯಾಗಿ ತಡೆಯಲು ವಿಶೇಷ ಉಪಕ್ರಮಗಳು ಮತ್ತು ನಡೆಗಳನ್ನು ಅನುಸರಿಸಲಾಗುತ್ತಿದ್ದು, ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.

1. ಅಪಾಯಕಾರಿ ವಿದ್ಯುತ್ ಸ್ಥಳಗಳ ಗುರುತಿಸುವಿಕೆ ಮತ್ತು ದುರಸ್ತಿ: ಚಾ.ವಿ.ಸ.ನಿ.ನಿ ವ್ಯಾಪ್ತಿಯಲ್ಲಿನ ಐದು ಜಿಲ್ಲೆಗಳಲ್ಲಿ ಆಯಾ ಉಪವಿಭಾಗಗಳ ವ್ಯಾಪ್ತಿಯಲ್ಲಿ ಅಪಾಯಕಾರಿ ಎನಿಸುವ ವಿದ್ಯುತ್ ಮಾರ್ಗ/ಕಂಬ/ಪರಿವರ್ತಕ ಕೇಂದ್ರಗಳನ್ನು ಗುರುತಿಸಿ, ಅವುಗಳನ್ನು ದುರಸ್ತಿಗೊಳಿಸಿ/ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿ, ಜನಸಾಮಾನ್ಯರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ.
2. ಗ್ರಾಹಕರಲ್ಲಿ ಅರಿವು ಮೂಡಿಸಲು ಕಾರ್ಯಾಗಾರ ಮತ್ತು ಜಾಥಾ ಆಯೋಜನೆ: ವಿವಿಧ ಸ್ಥಳಗಳಲ್ಲಿ ವಿದ್ಯುತ್ ಸಂಬಂಧಿತ ಸುರಕ್ಷತೆಯ ಕುರಿತಾಗಿ ಜಾಗೃತಿ ಜಾಥಾಗಳನ್ನು ಆಯೋಜಿಸುವುದಲ್ಲದೇ, ಗ್ರಾಹಕರಲ್ಲಿ ಅರಿವು ಮೂಡಿಸಲು ವಿವಿಧ ಸ್ಥಳಗಳಲ್ಲಿ ಅಣಕು ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಇದಲ್ಲದೇ, ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.
3. ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕಾ/ಡಿಜಿಟಲ್ ಮಾಧ್ಯಮಗಳ ಮೂಲಕ ಜಾಗೃತಿ: ಚಾ.ವಿ.ಸ.ನಿ.ನಿ ಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ವಿವಿಧ ಪತ್ರಿಕೆ/ಡಿಜಿಟಲ್ ಮಾಧ್ಯಮದ ಚಾನೆಲ್’ಗಳ ಮೂಲಕ ಜಾಹೀರಾತು ಮಾದರಿಯಲ್ಲಿ ವಿದ್ಯುತ್ ಸಂಬಂಧಿತ ಸುರಕ್ಷತಾ ಕ್ರಮಗಳು ಮತ್ತು ಎಚ್ಚರಿಕೆಯ ಕ್ರಮಗಳನ್ನು ಪ್ರಕಟಿಸಿ ಬಿತ್ತರಿಸಲಾಗುತ್ತಿದೆ. ಈ ಮೂಲಕ ಪ್ರತಿ ಗ್ರಾಹಕರಿಗೂ ವಿದ್ಯುತ್ ಅವಘಡಗಳ ತೀವ್ರತೆಯ ಕುರಿತು ಅರಿವು ಮೂಡಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ.
4. ಪವರ್’ಮ್ಯಾನ್’ಗಳ ಮೂಲಕ ಗ್ರಾಹಕರಲ್ಲಿ ಅರಿವು: ವಿದ್ಯುತ್ ಸಂಬಂಧಿತ ದುರಸ್ತಿ ಕಾರ್ಯಗಳಿಗೆ ತೆರಳುವ ಪವರ್’ಮ್ಯಾನ್’ಗಳ ಮೂಲಕ ಗ್ರಾಹಕರಲ್ಲಿ ವಿದ್ಯುತ್ ಅವಘಡಗಳ ಕುರಿತಾದ ಮುನ್ನೆಚ್ಚರಿಕಾ ಕ್ರಮಗಳು ಮತ್ತು ಸಂಭವನೀಯ ಅಪಘಾತಗಳನ್ನು ತಡೆಯುವ ವಿಧಾನಗಳ ಕುರಿತು ತಿಳುವಳಿಕೆಯನ್ನು ಮೂಡಿಸಲಾಗುತ್ತಿದೆ.

ವಿದ್ಯುತ್ ಸಂಬಂಧಿತ ಅವಘಡಗಳ ಕುರಿತು ವ್ಯಾಪಕವಾಗಿ ಅರಿವು ಮೂಡಿಸಿದರೂ ಕೂಡ, ಗ್ರಾಹಕರು ಬಹಳಷ್ಟು ಜವಾಬ್ದಾರಿಯಿಂದ ಹಾಗೂ ಎಚ್ಚರಿಕೆಯಿಂದ ವ್ಯವಹರಿಸಬೇಕಾದದ್ದು ಅತ್ಯಗತ್ಯ. ಮಾರಣಾಂತಿಕ ವಿದ್ಯುತ್ ಅವಘಡಗಳನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಚಾ.ವಿ.ಸ.ನಿ.ನಿ ಯು ಪ್ರಯತ್ನಶೀಲವಾಗಿದ್ದು, ಗ್ರಾಹಕರು ಯಾವುದೇ ವಿದ್ಯುತ್ ಸಂಬಂಧಿತ ಅವಘಡಗಳು ಸಂಭವಿಸಿದಲ್ಲಿ, ಕೂಡಲೇ ಚಾ.ವಿ.ಸ.ನಿ.ನಿ ಯ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಿದಲ್ಲಿ ಅತ್ಯಂತ ತ್ವರಿತವಾಗಿ ಸ್ಪಂದಿಸುವಲ್ಲಿ ಚಾ.ವಿ.ಸ.ನಿ.ನಿ ಬದ್ಧವಾಗಿದೆ.

You might also like
Leave A Reply

Your email address will not be published.