ಒಂದು ರಾಷ್ಟ್ರ ಒಂದು ಚುನಾವಣೆ : ದ್ರೌಪದಿ ಮುರ್ಮುಗೆ ವರದಿ ಸಲ್ಲಿಸಿದ ರಾಮನಾಥ್‌ ಕೋವಿಂದ್‌ ಸಮಿತಿ

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಇಂದು (ಗುರುವಾರ) ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು 18,626 ಪುಟಗಳ ಸುದೀರ್ಘ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದೆ.

2023ರ ಸೆಪ್ಟೆಂಬರ್ 2 ರಂದು ರಚಿಸಲಾದ ಸಮಿತಿಯು ವಿವಿಧ ರಾಜಕೀಯ ಪಕ್ಷಗಳು ಮತ್ತು ಪ್ರಮುಖ ಸಂಪನ್ಮೂಲ ವ್ಯಕ್ತಿಗಳು, ತಜ್ಞರೊಂದಿಗೆ ಸಲಹೆ ಸಂಗ್ರಹಗಳನ್ನು ಸಂಗ್ರಹಿಸಿ, ಚರ್ಚೆ ನಡೆಸಿ ಸುಮಾರು 191 ದಿನಗಳಲ್ಲಿ ವಿಸ್ತೃತ ವರದಿ ಸಲ್ಲಿಸಿದೆ.

ಒಂದು ರಾಷ್ಟ್ರ, ಒಂದು ಚುನಾವಣೆ (One Nation One Election) ಪರಿಕಲ್ಪನೆಯು ದೇಶಾದ್ಯಂತ ಏಕಕಾಲದಲ್ಲಿ ಚುನಾವಣಾ ಮತದಾನ ನಡೆಸುವುದಾಗಿದೆ. ಇನ್ನು ಮೊದಲ ಹಂತದಲ್ಲಿ ಲೋಕಸಭೆ ಹಾಗೂ ಎಲ್ಲ ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕು. ಅದಾದ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ಶಿಫಾರಸ್ಸು ಮಾಡಿದೆ. ಅಲ್ಲದೇ ಹಲವು ಸಾಂವಿಧಾನಿಕ ತಿದ್ದುಪಡಿಗಳಿಗೂ ಸಮಿತಿ ಶಿಫಾರಸ್ಸು ಮಾಡಿದ್ದು, ಇವುಗಳಿಗೆ ರಾಜ್ಯಗಳ ಅನುಮೋದನೆಯ ಅಗತ್ಯವಿಲ್ಲ ಎಂದು ಹೇಳಿದೆ.

ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಸಂವಿಧಾನದ ಕೊನೆಯ ಐದು ವಿಧಿಗಳಲ್ಲಿ ತಿದ್ದುಪಡಿ ಮಾಡಲು ಸಮಿತಿಯು ಶಿಫಾರಸು ಮಾಡಬಹುದು ಎಂದು ವರದಿಗಳು ಹೇಳುತ್ತಿವೆ. ಪ್ರಸ್ತಾವಿತ ವರದಿಯು ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಏಕ ಮತದಾರರ ಪಟ್ಟಿಯನ್ನು ಹೊಂದಲು ಕೇಂದ್ರೀಕರಿಸುತ್ತದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ʼನಲ್ಲಿ ರಚಿಸಲಾದ ಸಮಿತಿಯು ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್ಗಳಿಗೆ ಅಸ್ತಿತ್ವದಲ್ಲಿರುವ ಸಾಂವಿಧಾನಿಕ ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು ಏಕಕಾಲದಲ್ಲಿ ಚುನಾವಣೆಗಳನ್ನು ಪರಿಶೀಲಿಸುವ ಮತ್ತು ಶಿಫಾರಸು ಮಾಡುವ ಜವಾಬ್ದಾರಿಯನ್ನು ವಹಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಹಿಂದಿನಿಂದಲೂ ಒಂದು ರಾಷ್ಟ್ರ, ಒಂದು ಚುನಾವಣೆಯ ಕಲ್ಪನೆಯನ್ನು ಪ್ರತಿಪಾದಿಸುತ್ತಿದ್ದಾರೆ. ಕೋವಿಂದ್ ನೇತೃತ್ವದ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಮಾಜಿ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಇದ್ದರು.

You might also like
Leave A Reply

Your email address will not be published.