ವಿದ್ಯುತ್ ಅವಘಡಗಳನ್ನು ನಿರ್ಲಕ್ಷ್ಯ ಮಾಡದಿರಿ, ಸುರಕ್ಷತಾ ಕ್ರಮಗಳನ್ನು ಪಾಲಿಸಿ!

ಹಲವು ಬಾರಿ ಜನತೆಯ ನಿರ್ಲಕ್ಷ್ಯದಿಂದ ಆಕಸ್ಮಿಕವಾಗಿ ವಿದ್ಯುತ್ ಅವಘಡಗಳಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗೆಯೇ ಚಿಕ್ಕ ಮಕ್ಕಳು ಕೂಡ ವಿದ್ಯುತ್ ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಯಾವುದೇ ಸ್ಥಳಗಳಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಉತ್ತಮ. ಪರಿಣಾಮವಾಗಿ, ಬೆಸ್ಕಾಂ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯುತ್ ಸುರಕ್ಷತೆಯ ಬಗ್ಗೆ ಹಾಗೂ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಾ ಬಂದಿದೆ.

ಯಾವುದೇ ವಿದ್ಯುತ್ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತಹ ರೀತಿಯಲ್ಲಿ ವಿದ್ಯುತ್ ಜಾಲಗಳನ್ನು, ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಅಥವಾ ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಅದಾಗ್ಯೂ, ವಿದ್ಯುತ್ ಅವಘಡಗಳು ಸಂಭವಿಸುತ್ತಿರುವುದರಿಂದ ಸಾರ್ವಜನಿಕರು ಕೆಲವು ಪ್ರಮುಖ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ.

ಬೆಸ್ಕಾಂ ಸಾರ್ವಜನಿಕರ ಸುರಕ್ಷತೆಗಾಗಿ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು, ಬೆಂಗಳೂರು ನಗರದಾದ್ಯಂತ ನವೆಂಬರ್ 23, 2023 ರ ವರದಿಯ ಪ್ರಕಾರ 12,917.45 ಕಿ.ಮೀ ನಷ್ಟು, ಹೆಚ್.ಟಿ/ಎಲ್.ಟಿ ವಿದ್ಯುತ್ ಮೇಲ್ಮಾರ್ಗಗಳನ್ನು ತಂತಿಗಳನ್ನು ಭೂಗತ / ಏರಿಯಲ್ ಬಂಚ್ಡ್ ಕೇಬಲ್‌ಗಳಾಗಿ ಪರಿವರ್ತಿಸಿದೆ. ಇವುಗಳಲ್ಲದೆ, ವನ್ಯ ಜೀವಿಗಳ ರಕ್ಷಣೆಗಾಗಿಯು ಬೆಸ್ಕಾಂ ಪಣ ತೊಟ್ಟಿದ್ದು, ಮೇಲ್ಮಾರ್ಗ ವಿದ್ಯುತ್ ತಂತಿಗಳನ್ನು ಭೂಗತ ವಿದ್ಯುತ್ ಕೇಬಲ್’ಗಳನ್ನಾಗಿ ಅಳವಡಿಸುತ್ತಿದೆ.

ದೇಶದ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಭೂಗತ ವಿದ್ಯುತ್‌ ಪರಿವರ್ತಕ ಕೇಂದ್ರವನ್ನು ಬೆಸ್ಕಾಂ ಸ್ಥಾಪಿಸಿದ್ದು, ದೇಶದ ಮೊದಲ ಭೂಗತ ವಿದ್ಯುತ್ ಕೇಂದ್ರವು ಕರ್ನಾಟಕ ರಾಜ್ಯದಲ್ಲಿರುವುದು ಹೆಗ್ಗಳಿಕೆಗೆ ಪಾತ್ರವಾಗಿದೆ. ಪಾದಾಚಾರಿಗಳ ಸುರಕ್ಷತೆಗಾಗಿ ಭೂಮಿಯ ಕೆಳಭಾಗದಲ್ಲಿ ಕೊಠಡಿಯನ್ನು ನಿರ್ಮಿಸಿ ಅದರಲ್ಲಿ ವಿದ್ಯುತ್‌ ಪರಿವರ್ತಕ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲಾಗಿದೆ.

ಸಾರ್ವಜನಿಕರು ವಹಿಸಬೇಕಾದ ಕೆಲವು ಸುರಕ್ಷತಾ ಕ್ರಮಗಳು:

  • ಹೊಲ/ಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾದುಹೋಗಿರುವ ವಿದ್ಯುತ್ ತಂತಿಗಳು ಹಾಗೂ ಯಾವುದೇ ರೀತಿಯ ವಿದ್ಯುತ್ ತಂತಿಗಳ ಬಗ್ಗೆ ಜಾಗ್ರತೆ ವಹಿಸಬೇಕು.
  • ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಸ್ಪರ್ಶಿಸದಿರಿ.
  • ಮೊಬೈಲ್ ಚಾರ್ಜ್ ಆಗುವ ಸಂದರ್ಭದಲ್ಲಿ ಮೊಬೈಲ್ ಅನ್ನು ಬಳಸದಿರಿ.
  • ವಿದ್ಯುತ್ ಅವಘಡಗಳನ್ನು ತಡೆಯಲು ಐ.ಎಸ್.ಐ ಅಂಗೀಕೃತ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸಿ.
  • ವಿದ್ಯುತ್ ಟ್ರಾನ್ಸ್’ಫಾರ್ಮರ್ ಬಳಿ ಹೋಗುವುದಾಗಲಿ, ಭಿತ್ತಿ ಪತ್ರಗಳನ್ನು ಅಂಟಿಸುವುದಾಗಲಿ, ಅದರ ಕೆಳಗೆ ವಿಶ್ರಮಿಸುವುದು ಅಥವಾ ಇನ್ನಿತರ ಕೆಲಸಗಳನ್ನು ಮಾಡದಿರಿ.
  • ಬಳಕೆ ಇಲ್ಲದಿದ್ದಾಗ ವಿದ್ಯುತ್ ಉಪಕರಣಗಳನ್ನು ಅನ್ ಪ್ಲಗ್ ಮಾಡಿ.
  • ನೀವೇ ವಿದ್ಯುತ್ ಉಪಕರಣಗಳ ದುರಸ್ತಿ ಮಾಡಲು ಹೋಗದಿರಿ.
  • ವಿದ್ಯುತ್ ಪರಿಕರಗಳನ್ನು ಒದ್ದೆ ಕೈಯಿಂದ ಸ್ಪರ್ಶಿಸದಿರಿ.
  • ಚಿಕ್ಕ ಮಕ್ಕಳು ವಿದ್ಯುತ್ ಉಪಕರಣಗಳೊಂದಿಗೆ ಆಟ ಆಡುವುದನ್ನು ತಡೆಯಿರಿ.

ಯಾವುದೇ ರೀತಿಯ ವಿದ್ಯುತ್ ಅವಘಡಗಳು ಸಂಭವಿಸಿದಲ್ಲಿ ಬೆಸ್ಕಾಂನ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಿ.

You might also like
Leave A Reply

Your email address will not be published.