ವೋಟರ್‌ ಐಡಿ ಇಲ್ಲದಿದ್ದರೂ ಮತ ಚಲಾಯಿಸಬಹುದೇ – ವೈರಲ್‌ ವಿಡಿಯೋದ ಸತ್ಯಾಸತ್ಯತೆ ಇಲ್ಲಿದೆ

ಲೋಕಸಭಾ ಚುನಾವಣೆಯ ಕಿಡಿ ಎಲ್ಲೆಡೆ ಹರಡುತ್ತಿದ್ದಂತೆ, ಇತ್ತಕಡೆ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ವಿಡಿಯೋಗಳು ಯೂಟ್ಯೂಬ್ ಹಾಗೂ ವಾಟ್ಸಪ್‌ನಲ್ಲಿ ವೈರಲ್ ಆಗುತ್ತಿವೆ. ನಿಮ್ಮ ಬಳಿ ವೋಟರ್ ಐಡಿ ಕಾರ್ಡ್‌ ಇಲ್ಲದಿದ್ದರೆ ಹಾಗೂ ನಿಮ್ಮ ಹೆಸರು ವೋಟರ್ ಲಿಸ್ಟ್‌ನಲ್ಲಿ ಇಲ್ಲದಿದ್ದರೂ ಮತ ಚಲಾಯಿಸಬಹುದು ಎಂದು ಈ ವಿಡಿಯೋಗಳಲ್ಲಿ ಹೇಳಲಾಗಿದೆ. ಏನಿದು ವಿಡಿಯೋ? ಅಷ್ಟಕ್ಕೂ ಇದರಲ್ಲಿ ಏನಿದೆ? ಮತದಾನ ಪ್ರಕ್ರಿಯೆ ಕುರಿತು ವಿವರಿಸುವ ಅಂಶಗಳಲ್ಲಿ ಎಷ್ಟು ಹುರುಳಿದೆ? ಬನ್ನಿ ನೋಡೋಣ.

ಏಪ್ರಿಲ್ 19 ರಿಂದ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಇದಕ್ಕೂ ಮುನ್ನ ಈ ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋದ 1:32 ಸೆಕೆಂಡ್‌ನಲ್ಲಿ ಮಹಿಳೆಯು ಮತದಾರರಿಗೆ ಹಲವು ಸೌಲಭ್ಯಗಳು ಸಿಗುತ್ತವೆ‌. ಆದರಿಂದ ಇದು ಅತೀ ಮುಖ್ಯ ಸೂಚನೆ ಎಂದು ಮಾಹಿತಿ ನೀಡಲು ಆರಂಭಿಸುತ್ತಾರೆ.

ಈ ವೈರಲ್ ವಿಡಿಯೋದಲ್ಲಿ ಮಹಿಳೆ ನಾಲ್ಕು ಪ್ರಮುಖ ಸಂಗತಿಗಳನ್ನು ಹೇಳುತ್ತಾರೆ. 

1 – ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಿದ್ದರೆ ಅವರು ತಮ್ಮ ಆಧಾರ್ ಕಾರ್ಡ್ ಅನ್ನು ಮತಗಟ್ಟೆಯಲ್ಲಿ ತೋರಿಸಬಹುದು. ಸೆಕ್ಷನ್ 49A ಅಡಿಯಲ್ಲಿ ‘ಸವಾಲಿನ ಮತ’ (Challenged Vote) ಚಲಾಯಿಸಬಹುದು.

2 – ನಿಮ್ಮ ಹೆಸರಿನಲ್ಲಿ ಈಗಾಗಲೇ ಯಾರಾದರೂ ಮತ ಚಲಾಯಿಸಿದ್ದರೆ, ವೋಟ್ ಮಾಡುವ ಅವಕಾಶ ಕಳೆದುಕೊಂಡಿರುವ ನೀವು ‘ಟೆಂಡರ್ ಮತ’ಕ್ಕೆ ಆಗ್ರಹಿಸಬಹುದು.

3 – ಯಾವುದೇ ಮತಗಟ್ಟೆಯಲ್ಲಿ ಶೇ.14ಕ್ಕಿಂತ ಹೆಚ್ಚು ‘ಟೆಂಡರ್’ ಮತಗಳು ದಾಖಲಾಗಿದ್ದರೆ, ಆ ಮತಗಟ್ಟೆಯಲ್ಲಿ ಮತ್ತೊಮ್ಮೆ ಮತದಾನ ನಡೆಸಲಾಗುವುದು.

4 – ಮತದಾರರ ಗುರುತಿನ ಚೀಟಿ ನಿಮ್ಮ ಬಳಿ ಇಲ್ಲವಾದರೆ, ಅಥವಾ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವಾದರೆ ನಿಮ್ಮ ಎರಡು ಭಾವಚಿತ್ರಗಳು ಅಥವಾ ಯಾವುದೇ ಫೋಟೋ – ಐಡಿ ಪುರಾವೆಗಳೊಂದಿಗೆ ಮತದಾನದ ದಿನದಂದು ಮತಗಟ್ಟೆಗೆ ಹೋಗಿ ಫಾರಂ ನಂಬರ್ 8 ಅನ್ನು ಭರ್ತಿ ಮಾಡಿ ವೋಟ್ ಹಾಕಬಹುದು. ಈ ಫಾರಂ ಮತಗಟ್ಟೆಯಲ್ಲಿ ದೊರೆಯುತ್ತದೆ.

ಸತ್ಯಸತ್ಯಾತೆ ಏನು?

ಈ ವಿಡಿಯೋದಲ್ಲಿ ವಿವರಿಸಿರುವ 2ನೇ ಹೇಳಿಕೆ ಮಾತ್ರ ನಿಜ. ಉಳಿದ ಎಲ್ಲವೂ ಸುಳ್ಳು!

ಸತ್ಯಾಸತ್ಯತೆ ಪರಿಶೀಲನೆ ಹೇಗೆ?

ವಿಡಿಯೋದಲ್ಲಿ ನೀಡಿರುವ ಪ್ರತಿಯೊಂದು ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸಲು ಲಾಜಿಕಲಿ ಫ್ಯಾಕ್ಟ್ಸ್ ಸಂಸ್ಥೆ ಮುಂದಾಯ್ತು. ಇದಕ್ಕಾಗಿ ಭಾರತೀಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿತು. ಜೊತೆಯಲ್ಲೇ ಸಾರ್ವಜನಿಕವಾಗಿ ಇಂಟರ್‌ನೆಟ್‌ನಲ್ಲಿ ಲಭ್ಯ ಇರುವ ಅಧಿಕೃತ ದಾಖಲೆಗಳ ಪರಿಶೀಲನೆ ಮಾಡಲಾಯ್ತು.

ಹೇಳಿಕೆ 1 :

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ನಾಗರಿಕರು ಮತಗಟ್ಟೆಯಲ್ಲಿ ತಮ್ಮ ಆಧಾರ್ ಕಾರ್ಡ್ ತೋರಿಸಿ ಸೆಕ್ಷನ್ 49A ಅಡಿಯಲ್ಲಿ ‘ಸವಾಲಿನ ಮತ’ ಹಾಕಬಹುದು ಎಂಬ ಮಾಹಿತಿ ತಪ್ಪು. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಮತದಾನ ಮಾಡಲು ಅರ್ಹವಾದ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಇರಲೇ ಬೇಕು.

ಈ ಕುರಿತು ಮಾಹಿತಿ ನೀಡಿರುವ ತೆಲಂಗಾಣ ರಾಜ್ಯದ ಜಂಟಿ ಮುಖ್ಯ ಚುನಾವಣಾಧಿಕಾರಿ ಸರ್ಫರಾಜ್ ಅಹ್ಮದ್, ‘ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲವಾದರೆ ಮತ ಚಲಾಯಿಸಲು ಯಾವುದೇ ಅವಕಾಶವಿಲ್ಲ’ ಎಂದಿದ್ದಾರೆ. ‘ಆದರೆ, ವೋಟರ್ ಐಟಿ ಕಾರ್ಡ್‌ ಅಥವಾ ಮತದಾರರ ಫೋಟೋ ಸಹಿತಿ ಗುರುತಿನ ಚೀಟಿ ಕಾಣೆಯಾಗಿದ್ದರೆ ಮತದಾನ ಮಾಡಲು ಅವಕಾಶ ಇದೆ. ಆದರೆ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇರಲೇ ಬೇಕು. ಮತದಾರರು ಚುನಾವಣಾ ಆಯೋಗ ಪಟ್ಟಿ ಮಾಡಿರುವ 14 ವಿಧದ ಫೋಟೋ ಸಹಿತ ಗುರುತಿನ ಚೀಟಿಗಳ ಪೈಕಿ ಯಾವುದನ್ನಾದರೂ ತೋರಿಸಿ ಮತ ಚಲಾಯಿಸಬಹುದು. ಇದಕ್ಕಾಗಿ ಪ್ರತ್ಯೇಕವಾಗಿ ಫೋಟೋ ತೋರಿಸುವ ಅಗತ್ಯ ಇಲ್ಲ. ಆದರೆ, ಇವೆಲ್ಲವೂ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದಾಗ ಮಾತ್ರ ಸಾಧ್ಯ.

ಇನ್ನು ‘ಸವಾಲಿನ ಮತ’ ಅಥವಾ ‘ಚಾಲೆಂಜ್ಡ್ ವೋಟ್’ ಚಲಾಯಿಸುವ ಪ್ರಕರಣವು ಮತಗಟ್ಟೆ ಅಧಿಕಾರಿಗೆ ಮತದಾರರ ಗುರುತನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ಮಾತ್ರ ಉದ್ಭವಿಸುತ್ತದೆ. 1961ರಲ್ಲಿ ರೂಪಿಸಲಾದ ಚುನಾವಣಾ ನೀತಿ ನಿಯಮಗಳ 36ನೇ ಸೂತ್ರದ ಅಡಿಯಲ್ಲಿ ಈ ಬಗ್ಗೆ ವಿವರಿಸಲಾಗಿದೆ. ಮತದಾರರ ಗುರುತು ಸಾಬೀತುಪಡಿಸಲು ಸವಾಲು ಹಾಕಬಹುದು ಎಂದು ಇಲ್ಲಿ ವಿವರಿಸಲಾಗಿದೆ.

ಚುನಾವಣಾ ಆಯೋಗದ ರಿಟರ್ನಿಂಗ್ ಅಧಿಕಾರಿಯ ಕೈಪಿಡಿ 2023ರ ಪ್ರಕಾರ ‘ಮತಗಟ್ಟೆ ಏಜೆಂಟ್‌ಗಳು ಅಂತಹ ಪ್ರತಿ ಸವಾಲಿಗೂ 2 ರೂಪಾಯಿ ಹಣವನ್ನು ನಗದು ರೂಪದಲ್ಲಿ ಠೇವಣಿ ಮಾಡುವ ಮೂಲಕ ನಿರ್ದಿಷ್ಟ ಮತದಾರರೆಂದು ಹೇಳಿಕೊಳ್ಳುವ ವ್ಯಕ್ತಿಯ ಗುರುತನ್ನು ಪ್ರಶ್ನಿಸಬಹುದು’

ಇದಲ್ಲದೆ, 1961ರ ಚುನಾವಣಾ ನಿಯಮಗಳ ನಡವಳಿಕೆಯ ಸೆಕ್ಷನ್ 49Aರಲ್ಲಿ ಕೇವಲ ಎಲೆಕ್ಟ್ರಾನಿಕ್ ಮತ ಯಂತ್ರಗಳ ವಿನ್ಯಾಸವನ್ನು ವಿವರಿಸಲಾಗಿದೆ. ಈ ಸೆಕ್ಷನ್‌ನಲ್ಲಿ ಸವಾಲಿನ ಮತಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ.

ಹೇಳಿಕೆ 2 :

ನಿಮ್ಮ ಹೆಸರಿನಲ್ಲಿ ಈಗಾಗಲೇ ಯಾರಾದರೂ ಮತ ಹಾಕಿದ್ದರೆ ನೀವು ‘ಟೆಂಡರ್’ ಮತ ಕೇಳಬಹುದು.

ಈ ಹೇಳಿಕೆ ಸತ್ಯ :

ಟೆಂಡರ್ ಮತ ಚಲಾಯಿಸುವ ವಿಧಾನವನ್ನು ವಿವರಿಸಿರುವ ಚುನಾವಣಾ ಅಧಿಕಾರಿ ಅಹ್ಮದ್, ‘ನಿಮ್ಮ ಪರವಾಗಿ ಬೇರೆ ಯಾರಾದರೂ ಮತ ಚಲಾಯಿಸಿದ್ದರೆ, ನೀವು ಟೆಂಡರ್ ಮತ ಕೇಳಬಹುದು ಎಂದಿದ್ದಾರೆ. ಮತ ಚಲಾವಣೆಗೆ ಮುನ್ನ ಫಾರ್ಮ್ ಭರ್ತಿ ಮಾಡಬೇಕು. ಟೆಂಡರ್ ಮತ ಚಲಾವಣೆ ಮಾಡುವವರಿಗೆ ಬ್ಯಾಲೆಟ್ ಪೇಪರ್ ನೀಡಲಾಗುತ್ತದೆ. ತಮ್ಮ ಇಷ್ಟದ ಅಭ್ಯರ್ಥಿ ಪರ ಮತ ಚಲಾಯಿಸಬೇಕೆಂದರೆ, ಪತ್ರದಲ್ಲಿ ಇರುವ ಅಭ್ಯರ್ಥಿಯ ಚಿಹ್ನೆಗೆ ಗುರುತು ಮಾಡಿ ಪತ್ರವನ್ನು ಮಡಿಚಿ ಚುನಾವಣಾ ಅಧಿಕಾರಿಗೆ ನೀಡಬೇಕು. ಇಲ್ಲಿ ಇವಿಎಂ (ಎಲೆಕ್ಟ್ರಾನಿಕ್ ಮತ ಯಂತ್ರ) ಬಳಸಿ ಮತ ಚಲಾಯಿಸಲು ಅವಕಾಶ ಇರುವುದಿಲ್ಲ.

‘ಟೆಂಡರ್’ ಮತಕ್ಕೆ ಸಂಬಂಧಿಸಿದಂತೆ, ಚುನಾವಣಾ ಆಯೋಗದ ಕೈಪಿಡಿಯು ಹೀಗೆ ಉಲ್ಲೇಖಿಸುತ್ತದೆ: ‘ಒಬ್ಬ ವ್ಯಕ್ತಿಯು ಮತದಾನ ಕೇಂದ್ರದಲ್ಲಿ ಹಾಜರಾದ ವೇಳೆ ಆತನ ಪರವಾಗಿ ಈಗಾಗಲೇ ಮತ್ತೊಬ್ಬರು ಮತ ಚಲಾವಣೆ ಮಾಡಿದ್ದರೆ, ಅಂತಹ ವ್ಯಕ್ತಿ ಟೆಂಡರ್ ಮತ ಹಾಕಲು ಕೇಳಬಹುದು. ಆಗ ಚುನಾವಣಾ ಅದಿಕಾರಿಗಳ ಸಂಬಂಧಪಟ್ಟ ಮತದಾರರ ಗುರುತಿನ ಬಗ್ಗೆ ಪರಿಶೀಲನೆ ಮಾಡಿ ಮತದಾರರ ಗುರುತು ತೃಪ್ತಿದಾಯಕ ಎನಿಸಿದರೆ ಆತ / ಆಕೆಗೆ ಟೆಂಡರ್ ಮಾಡಿದ ಮತಪತ್ರದ ಮೂಲಕ ಮತ ಚಲಾಯಿಸಲು ಸಂಬಂಧಪಟ್ಟ ಅವಕಾಶ ನೀಡಬೇಕು, ಆದರೆ ಮತ ಯಂತ್ರದ ಮತ ಚಲಾವಣೆ ಮಾಡುವಂತಿಲ್ಲ’

ಹೇಳಿಕೆ 3 :

ನಿರ್ದಿಷ್ಟ ಬೂತ್‌ನಲ್ಲಿ ಶೇಕಡಾ 14 ಕ್ಕಿಂತ ಹೆಚ್ಚು ‘ಟೆಂಡರ್’ ಮತಗಳು ದಾಖಲಾಗಿದ್ದರೆ ಅಲ್ಲಿ ಮರು ಮತದಾನವನ್ನು ಘೋಷಿಸಲಾಗುವುದು ಎಂಬ ಹೇಳಿಕೆ ತಪ್ಪು ಮಾಹಿತಿ ಎಂದು ಚುನಾವಣಾ ಆಯೋಗ ಹೇಳಿದೆ

ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ಮತಗಟ್ಟೆಯಲ್ಲಿ ಮರು ಮತದಾನ ಮಾಡಲು ‘ಟೆಂಡರ್’ ಮತಗಳ ಶೇಕಡಾವಾರು ‘ಬೆಂಚ್ ಮಾರ್ಕಿಂಗ್’ ಇಲ್ಲ. ‘ಟೆಂಡರ್’ ಮಾಡಿದ ಮತಗಳ ಸಂಖ್ಯೆ ಹೆಚ್ಚಾದಾಗ, ಚುನಾವಣಾ ವೀಕ್ಷಕರು ಅದನ್ನು ವಿಶೇಷ ಸಂದರ್ಭಗಳಲ್ಲಿ ಮರು ಮತದಾನಕ್ಕೆ ಶಿಫಾರಸು ಮಾಡಲು ಒಂದು ಆಧಾರವಾಗಿ ಪರಿಗಣಿಸಬಹುದು ಅಷ್ಟೇ. ಈ ಸಂದರ್ಭಗಳು ಸಾಮಾನ್ಯವಾಗಿ ತುಂಬಾ ಕಡಿಮೆ ಇರುತ್ತವೆ ಎನ್ನುತ್ತಾರೆ ಅಹ್ಮದ್. ನನ್ನ ಅವಲೋಕನದ ಪ್ರಕಾರ, ಹೆಚ್ಚಿನ ಸಂದರ್ಭಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಟೆಂಡರ್ ಮಾಡಲಾದ ಮತಗಳು ಸಾಮಾನ್ಯವಾಗಿ ಶೇಕಡಾ ಒಂದಕ್ಕಿಂತ ಕಡಿಮೆಯಿರುತ್ತವೆ ಎಂದು ಅವರು ಹೇಳಿದ್ದಾರೆ.

ಹೇಳಿಕೆ 4 :

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ನಾಗರಿಕರು ಎರಡು ಭಾವಚಿತ್ರ ಅಥವಾ ಫೋಟೋ ಗುರುತಿನ ಚೀಟಿ ಸಲ್ಲಿಸಿ ಮತಗಟ್ಟೆಯಲ್ಲಿ ನಮೂನೆ ಸಂಖ್ಯೆ 8 ಅನ್ನು ಭರ್ತಿ ಮಾಡಿ ಮತ ಚಲಾಯಿಸಬಹುದು ಎಂಬ ಮಾಹಿತಿಯೂ ತಪ್ಪು.

ಮೊದಲೇ ಹೇಳಿದಂತೆ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಿದ್ದರೆ ಮತದಾನ ಮಾಡಲು ಅವಕಾಶವಿಲ್ಲ. ನಮೂನೆ 8 ಹೊಸ ಹೆಸರುಗಳ ಸೇರ್ಪಡೆಗೆ ಸಂಬಂಧಿಸಿಲ್ಲ. ಅದು ಕೇವಲ ಹೆಸರುಗಳನ್ನು ತಿದ್ದುಪಡಿ ಮಾಡುವುದು, ಮತದಾರರನ್ನು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಬದಲಾಯಿಸುವುದು ಮತ್ತು ಚುನಾವಣಾ ಪಟ್ಟಿಯಲ್ಲಿ ವಿಕಲ ಚೇತನರ ವರ್ಗವನ್ನು ನವೀಕರಿಸುವುದಕ್ಕೆ ಬಳಸಲಾಗುತ್ತದೆ. ಫಾರ್ಮ್ 8 ಅನ್ನು ಸಾಮಾನ್ಯವಾಗಿ ಈ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ ಎಂದು ಚುನಾವಣಾ ಆಯೋಗದ ಜಂಟಿ ಸಿಇಒ ಅಹ್ಮದ್ ಅವರು ಲಾಜಿಕಲಿ ಫ್ಯಾಕ್ಟ್ಸ್ ಗೆ ಮಾಹಿತಿ ನೀಡಿದ್ಧಾರೆ.

ತೀರ್ಪು :

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಜನರು ಸೂಕ್ತ ಪರಿಹಾರ ಕ್ರಮಗಳನ್ನು ಅನುಸರಿಸಿ ಮತ ಚಲಾಯಿಸಬಹುದು ಎಂಬ ಮಾಹಿತಿ ಹೊಂದಿರುವ ವೈರಲ್ ವೀಡಿಯೋದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಚುನಾವಣೆಗಳಲ್ಲಿ ಮತ ಚಲಾಯಿಸಲು ಅವಕಾಶವಿಲ್ಲ. ಇನ್ನು ಈ ವಿಡಿಯೋದಲ್ಲಿ ಹೇಳಲಾದ ಹಲವು ಮಾಹಿತಿಗಳ ಪೈಕಿ ಒಂದನ್ನು ಹೊರತುಪಡಿಸಿ ಇನ್ನೆಲ್ಲಾ ಮಾಹಿತಿಗಳೂ ಸುಳ್ಳು.

You might also like
Leave A Reply

Your email address will not be published.