Actor Yash : ನನ್ನ ಬಗ್ಗೆಯೇ ನನಗೆ ಅಸಹ್ಯ, ಬರ್ತಡೇ ಅಂದ್ರೇನೆ ಭಯ – ಅಭಿಮಾನಿಗಳ ಸಾವಿಗೆ ಯಶ್‌ ಪ್ರತಿಕ್ರಿಯೆ

ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಅವರ ಜನ್ಮದಿನದ ಆಚರಣೆಗಾಗಿ ಮಧ್ಯರಾತ್ರಿ ಕಟೌಟ್‌ ಹಾಕುವ ವೇಳೆ ವಿದ್ಯುತ್‌ ತಗುಲಿ ಗದಗದ ಸೂರಣಗಿಯ ಹನುಮಂತ ಹರಿಜನ (21), ಮುರುಳಿ ನಡುವಿನಮನಿ (20) ಹಾಗೂ ನವೀನ್‌ ಗಾಜಿ (19) ಎನ್ನುವ ಯುವಕರು ದುರಂತ ಸಾವನ್ನು ಕಂಡಿದ್ದರು. ಹಾಗೂ ಮೂರು ಜನ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಲದೇ, ಸೋಮವಾರ ಸಾಯಂಕಾಲ ಗದಗದ ಸೂರಟಗಿ ಗ್ರಾಮಕ್ಕೆ ತೆರಳಿದ್ದ ನಟ ಯಶ್‌ ಕುಟುಂಬಕ್ಕೆ ಸಂತೈಸಿದ್ದರು. ಮರಳಿ ಗದಗಕ್ಕೆ ಹೋಗುವಾಗ ಯಶ್‌ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿ ಮತ್ತೊಬ್ಬ ಯುವಕ ಆಸ್ಪತ್ರೆಗೆ ದಾಖಲಾಗಿದ್ದ. ಇಂದು ಮಂಗಳವಾರ ನವೀನ್‌ ಎನ್ನುವ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಈ ದುರಂತ ಘಟನೆಯ ಬಗ್ಗೆ ಮಾಧ್ಯಮಗಳಿಗೆ ನಟ ಯಶ್‌ (Actor Yash) ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ನೋಡಿ, ಅಭಿಮಾನ ಯಾವುದೇ ಕಾರಣಕ್ಕೂ ಈ ರೀತಿ ವ್ಯಕ್ತಪಡಿಸಬೇಕು, ಬ್ಯಾನರ್ ಹಾಕಬೇಕು ಅನ್ನೋದೆಲ್ಲ ಇಷ್ಟ ಪಡಲ್ಲ. ಪ್ರತಿ ವರ್ಷ ಬರ್ತ್‌ಡೇ ಬಂದಾಗ ಈತರ ಒಂದೊಂದು ಘಟನೆ ನಡೆದಾಗ, ನನಗೆ ಬರ್ತ್‌ಡೇ ಅಂದರೇನೆ ಭಯ ಬಂದುಬಿಟ್ಟಿದೆ. ನಿಜ ಹೇಳಬೇಕು ಅಂದರೆ, ನನ್ನ ಬಗ್ಗೆ ನನಗೆ ಅಸಹ್ಯ ಆಗಿಬಿಟ್ಟಿದೆ.”

“ನಿಜ ಹೇಳುತ್ತೇನೆ ಕೇಳಿ. ಅವರು ಎಲ್ಲಿಂದಲೂ ಕೂತು ಪ್ರೀತಿಯಿಂದ ನಮಗೆ ಹರಸಿದರೆ ಸಾಕು. ಅದೇ ನಿಜವಾದ ಬರ್ತ್‌ಡೇ. ಬರ್ತ್‌ಡೇ ಬೇಡ ಅಂದರೂ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ. ಮಾಡಿದರೆ ಏನಾದರೂ ಒಂದು ಆಗುತ್ತೆ ಎಂದರು.

ಇನ್ನೂ ಅಭಿಮಾನಿಗಳ ಕುಟುಂಬಕ್ಕೆ ನೆರವಾಗುವ ಬಗ್ಗೆ ಮಾತನಾಡಿದ ಅವರು, ಮನೆಗೆ ಯಾರು ಬೇಕಾದರೂ ಸಹಾಯ ಮಾಡಬಹುದು. ಆದರೆ, ಮನೆಗೆ ಮಗ ಬರುತ್ತಾನಾ? ಮನೆಯಲ್ಲಿ ಮಕ್ಕಳನ್ನು ಕಳ್ಕೊಂಡವರು ಏನು ಹೇಳ್ತಾರೆ? ನಮ್ಮ ಮನೆಯಲ್ಲಿ ಸಾವು ಆದರೂ ಏನು ಹೇಳುವುದಕ್ಕೆ ಸಾಧ್ಯ ಹೇಳಿ? ಏನು ಕೊಟ್ಟರೂ ಮಗ ಬರುತ್ತಾನಾ? ಇನ್ನೂ 20-25 ವರ್ಷದ ಹುಡುಗರು. ಈ ಮುಖಾಂತರ ಎಲ್ಲರಿಗೂ ಕೇಳಿ ಕೊಳ್ಳುತ್ತೇನೆ. ಹೀಗೆ ಬ್ಯಾನರ್ ಕಟ್ಟೋದು, ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬರೋದು. ಫೋಟೊ ತೆಗೆಯೋದು, ಸೆಲ್ಫಿ ತೆಗೆಯೋದು ಇವನ್ನೆಲ್ಲ ಬಿಟ್ಟು ಬಿಡಿ. ನನ್ನ ಸುತ್ತಮುತ್ತ ಜನ ಇರಬೇಕು ಅಂತ ಬಯಸೋದಿಲ್ಲ. ಬೇಜಾರು ಮಾಡಿಕೊಂಡರೂ ಪರ್ವಾಗಿಲ್ಲ ಅಂತ ನಾನು ಯಾರ ಕೈಗೂ ಸಿಗೋದಿಲ್ಲ. ನಾನು ಈಗ ಏನೋ ಒಂದು ಘೋಷಣೆ ಮಾಡೋದು ದೊಡ್ಡ ವಿಷಯ ಅಲ್ಲ. ನಾನು ನಿಜವಾಗಲೂ ಅವರ ಕುಟುಂಬವನ್ನು ಅರ್ಥ ಮಾಡಿಕೊಂಡು ಅವರಿಗೆ ಏನು ಅವಶ್ಯಕತೆ ಇರುತ್ತೋ? ಅದನ್ನು ಮಾಡೋಣ. ಇವತ್ತು ಅದೆಲ್ಲ ಮಾತಾಡೋ ಸಮಯ ಅಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

 

You might also like
Leave A Reply

Your email address will not be published.