Onavillu – The Divine Bow : ಕೇರಳದ ಸಾಂಪ್ರದಾಯಿಕ ಆಚರಣೆಯ ಪರಿಚಯಿಸುತ್ತಿದೆ ಒಣವಿಲ್ಲು

ಮಲಯಾಳಂ ಭಾಷೆಯ ಕುತೂಹಲಕಾರಿ ಸಾಕ್ಷ್ಯಚಿತ್ರವಾದ ‘ಓಣವಿಲ್ಲು, ದ ಡಿವೈನ್ ಬೋವ್’ (ದೇವ ಧನುಸ್ಸು) ಇಂದಿನಿಂದ ಜಿಯೊಸಿನಿಮಾದಲ್ಲಿ ಉಚಿತವಾಗಿ ಪ್ರದರ್ಶನ ಕಾಣುತ್ತಿದೆ. ‘ಓಣವಿಲ್ಲು’ ಸಮರ್ಪಣೆಯ ಸಾಂಪ್ರದಾಯಿಕ ಆಚರಣೆಯ ಮಹತ್ವ ಮತ್ತು ಅದರ ಸಾಂಸ್ಕೃತಿಕ ಶ್ರೀಮಂತಿಕೆಯ ಮೇಲೆ ಈ ಸಾಕ್ಷ್ಯಚಿತ್ರ ಗಮನಸೆಳೆಯುತ್ತಿದೆ. ಕೇರಳದ ಸಮೃದ್ಧ ಪರಂಪರೆಯ ಪರಿಚಯ, ಕಲೆ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಒಣವಿಲ್ಲು ಎಂಬ ವಿಶಿಷ್ಟ ದೈವೀಕ ಧನುಸ್ಸು ಅರ್ಪಣೆ ಆಚರಣೆಯ ಕುರಿತಾದ ಸಾಕ್ಷ್ಯಚಿತ್ರದ ಕುರಿತಾದ ಒಂದಷ್ಟು ಮಾಹಿತಿ ನಿಮಗಾಗಿ ತಪ್ಪದೇ ಓದಿ ಹಾಗೇ ವೀಕ್ಷಿಸಿ..

ಏನಿದು ಒಣವಿಲ್ಲು?

ಓಣವಿಲ್ಲು’ ಎಂಬುದು ಒಂದು ದೈವೀಕ ಧನುಸ್ಸಾಗಿದ್ದು, ಅದರ ಮೇಲೆ ವಿಷ್ಣುವಿನ ದಶಾವತಾರ ಮತ್ತು ಕೃಷ್ಣನ ಲೀಲೆಗಳ ಚಿತ್ರಗಳನ್ನು ಬಿಡಿಸಲಾಗಿರುತ್ತದೆ. ಇದನ್ನು ಕೇರಳದ ತಿರುವನಂತಪುರದ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ತಿರುಓಣಂ ಹಬ್ಬದ ಸಮಯದಲ್ಲಿ ಸಮರ್ಪಿಸಲಾಗುತ್ತದೆ. ‘ಓಣವಿಲ್ಲು’ವನ್ನು ಎಲ್ಲರೂ ಮಾಡುವಂತಿಲ್ಲ. ಒಣವಿಲ್ಲು ರಚಿಸುವ ಹಕ್ಕು ಇರುವುದು ಕರಮಾನ ಮೆಲಾರನ್ನೂರ್ ವಿಲಾಯಿಲ್ ವೀಡು ಕುಟುಂಬಕ್ಕೆ ಮಾತ್ರ! ಈ ಸಾಕ್ಷ್ಯಚಿತ್ರದಲ್ಲಿ ಈ ಕುಟುಂಬದ ಬಗ್ಗೆಯೂ ಸಾಕಷ್ಟು ಬೆಳಕು ಚೆಲ್ಲಲಾಗಿದೆ.

ತಿರುವನಂತಪುರ ಮೂಲದ ಚಿತ್ರನಿರ್ದೇಶಕ ಆನಂದ್ ಬನಾರಸ್ ಮತ್ತು ಶರತ್‌ ಚಂದ್ರ ಮೋಹನ್ ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದು, ಅಭಿನವ್ ಕಾಲ್ರಾ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಸ್ಟೀಫನ್ ಒರ್ಲಾಂಡೊ ಇದಕ್ಕೆ ಸಂಗೀತ ನೀಡಿದ್ದಾರೆ.

Onavillu - The Divine Bow : Introducing the traditional ritual of Kerala

ಹಲವು ತಲೆಮಾರುಗಳಿಂದ ನಡೆದುಬಂದಿರುವ ಈ ವಿಶಿಷ್ಟ ಸಾಂಪ್ರದಾಯಿಕ ಆಚರಣೆಯ ಕುರಿತಾದ ಸಾಕ್ಷ್ಯಚಿತ್ರದ ವಿಶೇಷತೆ ಏನೆಂದರೆ, ಮಲಯಾಳಂನ ಜನಪ್ರಿಯ ಹಿರಿಯ ನಟ ಮಮ್ಮೂಟ್ಟಿ ಮತ್ತು ಯುವನಟ ಉನ್ನಿ ಮುಕುಂದನ್‌ ಅವರ ಧ್ವನಿ. ಓಣವಿಲ್ಲು ಆಚರಣೆಯ ಕುರಿತಾದ ಹಲವು ಸಂಗತಿಗಳನ್ನು ನೀವು ಇವರ ಧ್ವನಿಯಲ್ಲಿ ಕೇಳಬಹುದಾಗಿದೆ. ಬಹುಮಹತ್ವದ ಆಚರಣೆ ಮತ್ತು ಅದರ ಸಾಂಸ್ಕೃತಿಕ ಮಹತ್ವದ ಕುರಿತು ‘ಓಣವಿಲ್ಲು, ದ ಡಿವೈನ್ ಬೋವ್’ ಸಾಕ್ಷಚಿತ್ರ ಮಾಹಿತಿ ನೀಡುತ್ತೆ. ಕದಂಬ ಮತ್ತು ಮಹಾಗನಿ ಕಟ್ಟಿಗೆಯಲ್ಲಿ ಈ ಬಿಲ್ಲನ್ನು ರೂಪಿಸಲಾಗುತ್ತದೆ.

ನಂತರ ಇದರ ಮೇಲೆ ಬಹುಸುಂದರವಾಗಿ ವಿಷ್ಣುವಿನ ದಶಾವತಾರ ಮತ್ತು ಕೃಷ್ಣನ ಲೀಲೆಯ ಚಿತ್ರಗಳನ್ನು ರಚಿಸಲಾಗುತ್ತದೆ. ಈ ಸಾಂಪ್ರದಾಯಿಕ ಕಲೆಯನ್ನು ದೈವೀಭಕ್ತಿಯಿಂದ ಕಾಪಾಡಿಕೊಂಡು ಬರುತ್ತಿರುವ ಕುಟುಂಬದವರ ಕುರಿತೂ ಈ ಸಾಕ್ಷ್ಯಚಿತ್ರ ಹಲವು ಕುತೂಹಲಕಾರಿ ಮಾಹಿತಿಯನ್ನು ನೀಡುತ್ತದೆ.

ಹಿಂದೆ ತಿರುವಾಂಕೂರು ರಾಜ್ಯದ ರಾಷ್ಟ್ರಗೀತೆಯಾಗಿದ್ದ ‘ವಾಂಚಿ ಭೂಮಿ’ ಎಂಬ ಹಾಡೂ ಈ ಸಾಕ್ಷ್ಯದಲ್ಲಿರುವುದು ವಿಶೇಷ. ಈ ಹಾಡನ್ನು ಉಲ್ಲೂರು ಎಸ್ ಪರಮೇಶ್ವರ ಅಯ್ಯರ್ ರಚಿಸಿದ್ದಾರೆ. ಬಾಲಿವುಡ್‌ ಗಾಯಕ ತಾನಿಯಾ ದೇವ ಗುಪ್ತ ಹಾಡಿದ್ದಾರೆ.

You might also like
Leave A Reply

Your email address will not be published.