ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ – ಬ್ಯಾನರ್ ಕಟ್ಟಲು ಹೋಗಿ ಮೂವರು ಬಲಿ

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಹಿನ್ನೆಲೆ ರಾಜ್ಯಾದ್ಯಂತ ಭರ್ಜರಿ ಸೆಲೆಬ್ರೆಷನ್ ನಡೆಯುತ್ತಿದೆ. ಅವರ ಅಭಿಮಾನಿಗಳು ವಿಭಿನ್ನವಾಗಿ ಅವರ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಿದ್ದಾರೆ. ಆದರೆ, ಹುಟ್ಟುಹಬ್ಬದ ಶುಭಾಶಯ ಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ಮೃತಪಟ್ಟಿರುವ ದುರಂತ ಘಟನೆ ಸಂಭವಿಸಿದ್ದು, ಆ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಯಶ್ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುವ ನಿಟ್ಟಿನಲ್ಲಿ ನೀಲಗಿರಿ ತೋಪಿಗೆ ಬ್ಯಾನರ್ ಕಟ್ಟಿ ಮೇಲೆತ್ತುವಾಗ ವಿದ್ಯುತ್ ತಗುಲಿ ಸೂರಣಗಿ ಗ್ರಾಮದ ಹನುಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಎಂಬುವವರು ಮೃತಪಟ್ಟಿದ್ದಾರೆ. ಇನ್ನು ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿದೆ.

ಇನ್ನು ಶಾಸಕ ಚಂದ್ರು ಲಮಾಣಿ ಅವರು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ನಟ ಯಶ್ ಬರ್ತ್ ಡೇ ಕಟೌಟ್ ಕಟ್ಟುವಾಗ ದುರಂತ ಸಂಭವಿಸಿ ಆಸ್ಪತ್ರೆ ಸೇರಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಈ ಘಟನೆ ಸಂಬಂಧ ಗದಗಕ್ಕೆ ಹೋದಾಗ ಕುಟುಂಬಸ್ಥರ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ ಹಾಗೂ ಈ ಘಟನೆ ಕುರಿತು ಜಿಲ್ಲಾಧಿಕಾರಿ, ಎಸ್ಪಿಯಿಂದಲೇ ಮಾಹಿತಿ ಪಡೆದುಕೊಂಡಿದ್ದು, ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದರು.

 ಎಸ್ಪಿ ಬಿ.ಎಸ್.ನೇಮಗೌಡ ಭೇಟಿ ನೀಡಿ ಗಂಭೀರ ಗಾಯಗೊಂಡ ಮೂವರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈ ಕಟೌಟ್ ಅನ್ನು ಒಟ್ಟು ಒಂಭತ್ತು ಜನ ಯಶ್ ಅಭಿಮಾನಿಗಳೆ ಕಟ್ಟಲು ಮುಂದಾಗಿದ್ದು, ಈ ಘಟನೆ ನಡೆದಿದೆ. ಕಬ್ಬಿಣದ ಫ್ರೇಮ್ ಇರೋದ್ರಿಂದ ಮೇಲೆತ್ತುವಾಗ ವಿದ್ಯುತ್ ತಂತಿ ತಗುಲಿ ದುರಂತ ನಡೆದಿದೆ. ಮೂವರು ಯುವಕರು ಸಾವನ್ನಪ್ಪಿದ್ದಾರೆ. ಮೂವರಿಗೆ ಗಾಯವಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದರು.

ಈ ವೇಳೆ ನಟ ಯಶ್ ಅವರು ನಮ್ಮೂರಿಗೆ ಬಂದು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು ಎಂದು ಮೃತ ಯುವಕರ ಸ್ನೇಹಿತ ಪ್ರಕಾಶ ಮ್ಯಾಗೇರಿ ಒತ್ತಾಯಿಸಿದ್ದಾರೆ.

You might also like
Leave A Reply

Your email address will not be published.